ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಸ್ವಚ್ಛತೆ ಕಾಪಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಹಸೀಲ್ದಾರ್ ಪವನ್‌ಕುಮಾರ್ ಸೂಚಿಸಿದರು.
ಚರಂಡಿ, ಕುಡಿಯುವ ನೀರಿನ ಟ್ಯಾಂಕ್ ಸೇರಿದಂತೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಬೇಕು. ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋನ್, ಲ್ಯಾಬ್‌ಗಳಿಗೆ ಬರುವ ಶಂಕಿತ ಡೆಂಘೀ ಜ್ವರ ಪ್ರಕರಣಗಳ ಮಾಹಿತಿ ಪಡೆಯಬೇಕು. ಡೆಂಘೀ ಪಾಸಿಟಿವ್ ಬಂದರೆ ಅಂತಹ ಪ್ರಕರಣಗಳನ್ನು ಗೂಗಲ್ ಸ್ಪ್ರೆಡ್‌ಶೀಟ್‌ನಲ್ಲಿ ನಮೂದಿಸಬೇಕು. ಸರ್ಕಾರದಿಂದ ಆದೇಶವಾಗಿರುವಂತೆ ಎನ್‌ಎಸ್- ೧ ಪರೀಕ್ಷೆಯ ದರ ೩೦೦ ರು.ಗಳನ್ನು ಮಾತ್ರ ಪಡೆಯಬೇಕು ಎಂದು ಅವರು ಹೇಳಿದರು. ಡೆಂಘೀ ರೋಗದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಡೆಂಘೀ ಸಾಂಕ್ರಾಮಿಕ ರೋಗವಾಗಿದ್ದು ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಗಲು ವೇಳೆ ಕಚ್ಚುವ ಸೊಳ್ಳೆಯಿಂದ ಈ ರೋಗ ಬರಲಿದೆ. ತಿಪಟೂರು ತಾಲೂಕಿನಲ್ಲಿ 2 ಡೆಂಘೀ ಪ್ರಕರಣಗಳಿದ್ದು ಒಂದು ಚಿಕ್ಕನಾಯಕನಹಳ್ಳಿ, ಮತ್ತೊಂದು ತಿಪಟೂರಿನ ಗಾಂಧಿನಗರದಲ್ಲಿ ದಾಖಲಾಗಿದೆ ಎಂದರು.ಡೆಂಘೀ ತಡೆಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಹೋಗಿ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಮನೆಗಳಲ್ಲಿ ಬಳಕೆ ಮಾಡುವ ನೀರು ಸಂಗ್ರಹಣೆ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಛ ಮಾಡಬೇಕು. ಈ ಡೆಂಘೀ ಸೊಳ್ಳೆಗಳು ಶುದ್ಧ ನೀರಿನಲ್ಲೇ ವಾಸ ಮಾಡುವುದರಿಂದ ನೀರು ಶೇಖರಣೆಯನ್ನು ಆದಷ್ಟು ಕಡಿಮೆ ಮಾಡಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆಯನ್ನು ಬಳಸುವುದು ಅಗತ್ಯ. ನೀರಿನಲ್ಲಿ ಲಾರ್ವಾ ಹುಳು ಕಂಡು ಬಂದರೆ ಆ ನೀರಿಗೆ ಅಬೇಟ್ ಎಂಬ ದ್ರಾವಣವನ್ನು ಸಿಂಪಡಿಸಬೇಕು ಎಂದರು.
ಡೆಂಘೀ ಸೊಳ್ಳೆಗಳು ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತವೆ. ಜನರು ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಎನ್‌ಎಸ್೧ ಪಾಸಿಟಿವ್ ಬಂದ ಪ್ರಕರಣಗಳನ್ನು ಎಲೀಸಾ ಪರೀಕ್ಷೆಗೆ ಕಳುಹಿಸಲು ಸೀರಮ್ ಅನ್ನು ಎಲ್ಲಾ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಮ್, ಪ್ರಯೋಗಾಲಯದ ಮುಖ್ಯಸ್ಥರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಸಂಜೆ ಐದು ಗಂಟೆಯೊಳಗೆ ತಲುಪಿಸಬೇಕು. ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.ತಾ.ಪಂ ಇಓ ಸುದರ್ಶನ್ ಮಾತನಾಡಿ, ಡೆಂಘೀ ನಿಯಂತ್ರಣಕ್ಕೆ ಈಗಾಗಲೇ ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಣ್ಣ ಪುಟ್ಟ ಜ್ವರ ಬಂದಾಗಲೇ ತಕ್ಷಣ ಡೆಂಘೀ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾರೂ ನಿರ್ಲಕ್ಷ್ಯ ಮಾಡಬಾರದು. ಪ್ರಯೋಗಾಲಯ ಅಥವಾ ಕ್ಲಿನಿಕ್‌ಗೆ ಪರೀಕ್ಷೆಗೆ ಬಂದ ರೋಗಿಯ ಪೂರ್ಣ ವಿಳಾಸ ಮತ್ತು ಮೊಬೈಲ್ ನಂಬರ್‌ನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್, ಡಾ.ಉಮೇಶ್, ಡಾ. ನರೇಂದ್ರ, ಡಾ. ಜಿಂಗಾಡಿ, ಡಾ. ಅಶ್ವಿನಿ, ಬಿಎಚ್‌ಓ ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಸೇರಿದಂತೆ ಖಾಸಗಿ ಆಸ್ಪತ್ರೆಯ ವೈದ್ಯರು, ಕ್ಲಿನಿಕ್ ವೈದ್ಯರು ಹಾಗೂ ಪ್ರಯೋಗಾಲಯದ ಮುಖ್ಯಸ್ಥರು ಭಾಗವಹಿಸಿದ್ದರು.