ಬರಗಾಲ ನಿರ್ವಹಣೆಗೆ ಮುಂಜಾಗ್ರತೆ ಕ್ರಮವಹಿಸಿ: ಸಚಿವ ಕೆ.ಜೆ. ಜಾರ್ಜ್

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ಬರಗಾಲ ನಿರ್ವಹಣೆಗೆ ಮುಂಜಾಗ್ರತೆ ಕ್ರಮವಹಿಸಿ: ಸಚಿವ ಕೆ.ಜೆ. ಜಾರ್ಜ್ಕೊಪ್ಪದಲ್ಲಿ ಶೃಂಗೇರಿ ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬರ ನಿರ್ವಹಣೆ ಕುರಿತು ಸಭೆ

ಕೊಪ್ಪದಲ್ಲಿ ಶೃಂಗೇರಿ ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬರ ನಿರ್ವಹಣೆ ಕುರಿತು ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬರ ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತ ಯಾವುದೇ ರೀತಿಯ ಮೂಲಭೂತ ಸೌಕರ್ಯಕ್ಕೆ ಕೊರತೆ ಯಾಗ ದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ಕೊಪ್ಪ ತಾಲೂಕಿನ ಪುರಭವನದಲ್ಲಿ ಮಂಗಳವಾರ ಶೃಂಗೇರಿ ಹಾಗೂ ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬರ ನಿರ್ವಹಣೆ ಕುರಿತು ನಡೆದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರ ಪರಿಹಾರ ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನು ವಿಳಂಬ ಮಾಡದೆ ಅಧಿಕಾರಿಗಳು ಅನುಷ್ಠಾನ ಗೊಳಿಸಬೇಕು. ಪ್ರತಿ ಗ್ರಾಮ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. 21 ರಿಂದ 23 ವಾರಗಳಿಗೆ ಸಾಕಾಗುವಷ್ಟು ದನಕರುಗಳಿಗೆ ಅಗತ್ಯ ವಾದ ಮೇವಿದ್ದು, ಮುಂದೆ ಮೇವಿಗೆ ಕೊರತೆಯಾಗದಂತೆ ರೈತರಿಗೆ ಮೇವು ಕಿಟ್‌ಗಳನ್ನು ವಿತರಿಸಿ ನಮ್ಮ ಜಿಲ್ಲೆಗೆ ಸಾಕಾಗುವಷ್ಟು ಮೇವನ್ನು ಬೆಳೆಯಬೇಕು. ಮಲೆನಾಡು ಪ್ರದೇಶದಲ್ಲಿ ಮೇವು ಬೆಳೆಯಲು ಉತ್ತಮ ವಾತಾವರಣವಿದೆ. ಪಕ್ಕದ ಜಿಲ್ಲೆಯಿಂದ ಮೇವು ಪೂರೈಕೆಗೆ ಬೇಡಿಕೆ ಬಂದ ಸಂದರ್ಭದಲ್ಲಿ ಮೇವು ಲಭ್ಯತೆ ಗನುಗುಣವಾಗಿ ಮೇವು ಬೆಳೆದು ಒದಗಿಸುವಂತೆ ತಿಳಿಸಿದ ಸಚಿವರು, ನಮ್ಮ ಜಿಲ್ಲೆಗೆ ಕೊರತೆ ಯಾಗದಂತೆ ಎಚ್ಚರವಹಿಸಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಅಗತ್ಯವಿರುವ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಇಲ್ಲಿವರೆಗೆ ಕುಡಿಯುವ ನೀರು, ಮೇವು ಹಾಗೂ ಇತರೆ ಸೌಲಭ್ಯಗಳ ಕೊರತೆ ಕಂಡು ಬಂದಿಲ್ಲ. ಕುಡಿಯುವ ನೀರಿಗೆ ಸಮಸ್ಯೆ ಕಂಡು ಬಂದರೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಹಾಗೂ ಖಾಸಗಿ ಬೋರ್‌ವೆಲ್ ಗಳನ್ನು ಗುರುತಿಸಲಾಗಿದೆ ಎಂದರು.

ದನಕರುಗಳಿಗೆ ಜಿಲ್ಲೆಯಲ್ಲಿ ಸಾಕಾಗುವಷ್ಟು ಮೇವು ಲಭ್ಯವಿದೆ. ನೀರಿನ ಸೌಲಭ್ಯವಿರುವ ರೈತರಿಗೆ ಪಶುಪಾಲನೆ ಇಲಾಖೆ ಮೂಲಕ ಉಚಿತ ಮೇವು ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರು. ಕುಡಿವ ನೀರಿಗೆ ಕೊರೆಯುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬದಲು ಸೋಲಾರ್ ವ್ಯವಸ್ಥೆ ಆಳವಡಿಸುವಂತೆ ತಿಳಿಸಿದ ಸಚಿವರು, ಮಳೆಗಾಲ ಮುಗಿದ ನಂತರ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಲಾಗುವುದು. ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ಕೂಡಲೇ ಅದನ್ನು ಬಗೆಹರಿಸಲು ಕ್ರಮವಹಿಸಬೇಕು. ಒಂದು ವೇಳೆ ಜಟಿಲ ಸಮಸ್ಯೆಗಳಿದ್ದರೆ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಕ್ರಮವಹಿಸಬೇಕು. ಒಟ್ಟಿನಲ್ಲಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಯಾವುದೇ ಸಂದರ್ಭದಲ್ಲಿ ಏನೇ ಸಮಸ್ಯೆ ಕಂಡು ಬಂದರು. ಅವುಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್‌, ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಜಿಲ್ಲಾ ಮಟ್ಟದ ಹಾಗೂ ಶೃಂಗೇರಿ, ಮೂಡಿಗೆರೆ ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

28 ಕೆಸಿಕೆಎಂ 3ಕೊಪ್ಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಶೃಂಗೇರಿ ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬರ ನಿರ್ವಹಣೆ ಕುರಿತು ಸಭೆ ನಡೆಯಿತು.

Share this article