ಲಕ್ಷ್ಮೇಶ್ವರ: ಕಳೆದ ಸೋಮವಾರ ಸಂಜೆ ಹಾಗೂ ಮಂಗಳವಾರ ಬೆಳಗ್ಗೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಪು.ಬಡ್ನಿ ಗ್ರಾಮದ ಹತ್ತಿರ ಹರಿಯುತ್ತಿರುವ ಹಳ್ಳದ ನೀರು ಉಕ್ಕಿ ಸೇತುವೆ ಹಾಗೂ ರಸ್ತೆಯ ಮೇಲೆ ಹರಿದ ಪರಿಣಾಮ ಸೇತುವೆ ಪಕ್ಕದ ಆದರಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಿತ್ತು ಹೋಗಿ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಬುಧವಾರ ಪು. ಬಡ್ನಿ ಗ್ರಾಮದ ಹತ್ತಿರ ಕಿತ್ತು ಹೋದ ರಸ್ತೆ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿರು.ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ತಾಲೂಕಿನ ರೈತ ಸಮೂಹಕ್ಕೆ ಉತ್ತಮ ಮಳೆಯಾಗುವ ಮೂಲಕ ಅನ್ನದಾತರ ಮೊಗದಲ್ಲಿ ಹರ್ಷ ಉಕ್ಕುವಂತೆ ಮಾಡಿದೆ. ಆದರೆ ಪು. ಬಡ್ನಿ ಗ್ರಾಮದ ಹತ್ತಿರದ ದೊಡ್ಡ ಹಳ್ಳವು ಉಕ್ಕಿ ಹರಿಯುವ ಮೂಲಕ ರಸ್ತೆಯನ್ನು ಸಂಪೂರ್ಣವಾಗಿ ಕಿತ್ತು ಹಾಕಿದ್ದರಿಂದ ಆದರಳ್ಳಿ ಗ್ರಾಮಕ್ಕೆ ಸಂಪರ್ಕ ಹೋಗುವ ಮಾರ್ಗ ಬಂದ್ ಆಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಉಂಟು ಮಾಡಿದೆ, ಆದ್ದರಿಂದ ಈ ಕಿತ್ತು ಹೋಗಿರುವ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಮೂಲಕ ಸಾರ್ವನಿಕರಿಗೆ ಅಗುತ್ತಿರುವ ತೊಂದರೆ ತಪ್ಪಿಸುವುದು ಪ್ರಮುಖ ಉದ್ದೇಶವಾಗಿದೆ, ಇದಕ್ಕಾಗಿ ಶಾಶ್ವತ ಪರಿಹಾರದ ಬಗ್ಗೆ ಅಧಿಕಾರಿಗಳು ವರದಿ ತಯಾರಿಸಬೇಕು, ಅದನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ತಾಪಂ ಮಾಜಿ ಸದಸ್ಯ ಸುಭಾಷ ಬಟಗುರ್ಕಿ, ಗ್ರಾಪಂ ಸದಸ್ಯ ಮುತ್ತಣ್ಣ ಚೋಟಗಲ್ಲ, ಶಿವಾನಂದ ಹರಿಜನ, ರಾಜು ಚೋಟಗಲ್ಲ, ರಾಜಣ್ಣ ಹಸರಾಣಿ, ಶಿವಪ್ಪ ಕೊರಕನವರ, ಶ್ರೀಕಾಂತ ಚೋಟಗಲ್ಲ, ಆಶೋಕ ರಾಮಗೇರಿ, ಪರಶುರಾಮ ಯಲವಿಗಿ ಹಾಗೂ ಗ್ರಾಪಂ ಪಿಡಿಓ ಬಸವರಾಜ ಬೆಳೂಟಗಿ, ಲೊಕೋಪಯೋಗಿ ಇಲಾಖೆಯ ಎಇಇ ಫಕ್ಕಿರೇಶ, ಗ್ರಾಮಲೆಕ್ಕಾಧಿಕಾರಿ ನೆಗಳೂರ ಇದ್ದರು.