ತಾಳಮದ್ದಳೆ ಸಪ್ತಾಹ ಸಮಾರೋಪ: ಪದ್ಯಾಣ, ಕುರಿಯ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jul 09, 2024, 12:50 AM ISTUpdated : Jul 09, 2024, 12:51 AM IST
ಫೋಟೋ: ೮ಪಿಟಿಆರ್-ತಾಳಮದ್ದಳೆತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾವನದಲ್ಲಿ ಮಂಗಳವಾರ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ‘ಪದ್ಯಾಣ ಪ್ರಶಸ್ತಿ’ಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ಯನ್ನು ಹಿರಿಯ ಹಿಮ್ಮೇಳ ವಾದಕ ಧರ್ಮಸ್ಥಳದ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಯಕ್ಷಗಾನ ಬಯಲಾಟಗಳು ಮನಸ್ಸಿಗೆ ಮೋದ ನೀಡಿದರೆ, ತಾಳಮದ್ದಳೆ ಬುದ್ಧಿಗೆ ಗ್ರಾಸ ಒದಗಿಸುತ್ತದೆ. ಭಾಷಾಶುದ್ಧತೆ, ಪುರಾಣ ಜ್ಞಾನ, ಅಂದವಾಗಿ ಮಾತನಾಡುವ ಶಕ್ತಿ, ಗ್ರಹಿಕಾ ಸಾಮರ್ಥ್ಯ ಮತ್ತು ಬದುಕಿಗೆ ಬೇಕಾದ ಸಂದೇಶಗಳನ್ನು ಯಕ್ಷಗಾನ ಒದಗಿಸುತ್ತದೆ. ಅಕ್ಷರಾಭ್ಯಾಸ ಇಲ್ಲದವರೂ ಆಟ, ಕೂಟಗಳನ್ನು ನೋಡಿಯೇ ಪುರಾಣ ಜ್ಞಾನವನ್ನು ಪಡೆದವರಿದ್ದಾರೆ. ಅದು ಯಕ್ಷಗಾನದ ಶಕ್ತಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾವನದಲ್ಲಿ ಮಂಗಳವಾರ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಎಡನೀರು ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭದಲ್ಲಿ ಹಿಂದಿನಿಂದಲೂ ತಾಳಮದ್ದಳೆ ಆರಾಧನೆ ರೂಪದಲ್ಲಿ ನಡೆಯುತ್ತದೆ ಎಂದು ಹೇಳಿದರು.ಪದ್ಯಾಣ ಮನೆತನದ ಹಿರಿಯರಾದ ನಾರಾಯಣ ಭಾಗವತರ ಸ್ಮೃತಿಯಲ್ಲಿ ನೀಡುವ ‘ಪದ್ಯಾಣ ಪ್ರಶಸ್ತಿ’ಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ಯನ್ನು ಹಿರಿಯ ಹಿಮ್ಮೇಳ ವಾದಕ

ಧರ್ಮಸ್ಥಳದ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅವರಿಗೆ ಸ್ವಾಮೀಜಿ ಪ್ರದಾನ ಮಾಡಿದರು.

ಕುರಿಯ ಸ್ಮೃತಿ ಗೌರವವನ್ನು ಯಕ್ಷಗಾನ ಅರ್ಥದಾರಿ ಕೆ.ಭಾಸ್ಕರ ರಾವ್ ಹಾಗೂ ಭಾಸ್ಕರ ನೂರಿತ್ತಾಯ ಬಾರ್ಯ ಅವರಿಗೆ ನೀಡಲಾಯಿತು.

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡಿ, ಭಾಗವತ ಪದ್ಯಾಣ ಗಣಪತಿ ಭಟ್ಟರು ಕಾಲಮಿತಿ ಪ್ರದರ್ಶನವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಪದ್ಯಾಣ ಮತ್ತು ಕುರಿಯ ಮನೆತನಗಳ ಯಕ್ಷಗಾನೀಯ ಕೊಡುಗೆಗಳಲ್ಲಿ ಸಮರ್ಪಣಾ ಭಾವವಿರುವುದನ್ನು ಕಾಣಬಹುದು ಎಂದರು.

ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಸ್ವಸ್ತಿಕ್ ಪದ್ಯಾಣ ವಂದಿಸಿದರು. ಉಜಿರೆ ಅಶೋಕ ಭಟ್‌ ಕಾರ್ಯಕ್ರಮ ಸಂಯೋಜಿಸಿದರು. ‘ಗಂಗಾ ಸಾರಥ್ಯ’ ಪ್ರಸಂಗದ ತಾಳಮದ್ದಳೆ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ