ಮಕ್ಕಳಲ್ಲಿನ ಪ್ರತಿಭೆ ಹೊರತರಬೇಕು: ಯೋಗೀಶ್ವರಪ್ಪ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಪರೀಕ್ಷೆ, ಅಂಕಗಳಿಕೆ, ಸರ್ಕಾರಿ ಉದ್ಯೋಗ ಇವಿಷ್ಟೇ ಶಿಕ್ಷಣದ ಉದ್ದೇಶ ಎಂಬಂತಹ ಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವುದೇ ನಿಜವಾದ ಶಿಕ್ಷಣ ಎಂದು ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಪರೀಕ್ಷೆ, ಅಂಕಗಳಿಕೆ, ಸರ್ಕಾರಿ ಉದ್ಯೋಗ ಇವಿಷ್ಟೇ ಶಿಕ್ಷಣದ ಉದ್ದೇಶ ಎಂಬಂತಹ ಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವುದೇ ನಿಜವಾದ ಶಿಕ್ಷಣ ಎಂದು ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದ್ದಾರೆ.

ನಗರದ ಶ್ರೀಸಿದ್ದಗಂಗಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ 2024-25ನೇ ಸಾಲಿನ ಸ್ಪೂರ್ತಿ, ಎನ್.ಎಸ್.ಎಸ್., ರೆಡ್‌ಕ್ರಾಸ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸೆಮಿಸ್ಟರ್ ಶಿಕ್ಷಣ ಪದ್ದತಿಯಿಂದ ಮಕ್ಕಳಲ್ಲಿನ ಪ್ರತಿಭೆ ಕಮರಿ ಹೋಗುತ್ತಿದ್ದು, ಮಕ್ಕಳ ಸಮಗ್ರ ವಿಕಾಸಕ್ಕೆ ಪೆಟ್ಟು ಬೀಳುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಆಳುವ ಸರಕಾರಗಳು ಆಲೋಚಿಸುವ ಅಗತ್ಯವಿದೆ ಎಂದರು.

ಸೆಮಿಸ್ಟರ್ ಪದ್ದತಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪಠ್ಯ ವಿಷಯಗಳನ್ನು ತುಂಬಿ, ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದಗೊಳಿಸಲು ಹೊರಟ ಪರಿಣಾಮ, ಮಕ್ಕಳಲ್ಲಿ ತಾವು ಕಲಿಯುವ ಯಾವ ವಿಚಾರದ ಬಗ್ಗೆಯೂ ಆಳವಾದ ಜ್ಞಾನ ಇಲ್ಲದಂತಾಗಿದೆ. ಕೋವಿಡ್-19 ಆಗಮನದ ನಂತರ ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡಿದೆ. ಪುಸ್ತಕಕ್ಕಿಂತ,ಮೊಬೈಲ್‌ನಲ್ಲಿ ಜ್ಞಾನ ಹುಡುಕಲು ಯುವಜನರು ಉತ್ಸುಕರಾಗಿದ್ದಾರೆ. ಸೋಸಿಯೆಲ್ ಮೀಡಿಯಾದಲ್ಲಿ ಬರುವುದೆಲ್ಲಾ ಸತ್ಯವೆಂದು ತಿಳಿದಿರುವ ಪರಿಣಾಮ ಹಲವಾರು ಸಂಕಷ್ಟಗಳಿಗೆ ತುತ್ತಾಗುತಿದ್ದಾರೆ. ಇದರಿಂದ ಮಕ್ಕಳು ಹೊರಬರಬೇಕು. ಸ್ಪೂರ್ತಿಯಂತಹ ವೇದಿಕೆಯನ್ನು ಬಳಕೆ ಮಾಡಿಕೊಂಡು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿ, ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಮಕ್ಕಳ ತಜ್ಞೆ ಡಾ.ಶ್ರಾವ್ಯ ಎಸ್.ರಾವ್ ಮಾತನಾಡಿ, ಸಿದ್ದಗಂಗಾ ಎಂದರೆ ಅದು ನನ್ನ ಕುಟುಂಬವಿದ್ದಂತೆ. ನಾನು ಸಿದ್ದಗಂಗಾ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆಯಾಗಿ ಕೆಲಸ ಮಾಡುತ್ತಿದ್ದು, ಹಲವಾರು ಬಾರಿ ಈ ಕಾಲೇಜಿಗೆ ಭೇಟಿ ನೀಡಿದ್ದೇನೆ. ನಿಮ್ಮ ರೀತಿ ಇದ್ದ ನನ್ನನ್ನು ನಿಮ್ಮೆದುರು ವೇದಿಕೆಯ ಮೇಲೆ ನಿಲ್ಲುವಂತೆ ಮಾಡಿದ್ದು, ನನ್ನಲ್ಲಿರುವ ಗಾಯನ ಎಂಬ ಪ್ರತಿಭೆ. ನಿಮ್ಮೊಳಗೂ ಪ್ರತಿಭೆ ಇದೆ. ಅದನ್ನು ಕಂಡುಕೊಳ್ಳುವ, ಎಲ್ಲರ ಮುಂದೆ ಆನಾವರಣಗೊಳಿಸುವ ಕೆಲಸ ಮಾಡಿ, ನಿಮಗೆ ಸ್ಪೂರ್ತಿ ಒಳ್ಳೆಯ ವೇದಿಕೆಯಾಗಿದೆ ಎಂದರು.

ಕಾಮಿಡಿ ಕಿಲಾಡಿಯ ಹಾಸ್ಯ ನಟ ಗಿಲ್ಲಿ ನಟ ನಟರಾಜ್ ಮಾತನಾಡಿ, ಮೊಬೈಲ್‌ನಲ್ಲಿ ಒಳ್ಳೆಯದು ಇದೆ, ಕೆಟ್ಟದ್ದು ಇದೆ. ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟದ್ದು, ಹಳ್ಳಿಯ ಮೂಲೆಯೊಂದರಲ್ಲಿದ್ದ ನನ್ನನ್ನು ನಾಡಿನ ಜನರಿಗೆ ಪರಿಚಯಿಸಿದ್ದು ಸೋಷಿಯಲ್ ಮೀಡಿಯಾ, ಮೊದಲು ಅವಮಾನ, ಈಗ ಸನ್ಮಾನ ಆರಂಭವಾಗಿದೆ .ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕಿನತ್ತ ಗಮನಹರಿಸಿ ಎಂದರು.

ಮಹಾನಟಿ ಕಾರ್ಯಕ್ರಮದ ಕುಮಾರಿ ಗಗನ ಮಾತನಾಡಿ, ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಜೀವನ ಮುಖ್ಯ. ಪ್ರತಿಯೊಂದಕ್ಕೂ ಅಪ್ಪ, ಅಮ್ಮ, ಗಂಡನ ಮೇಲೆ ಅವಲಂಬಿತರಾಗದೆ, ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಿ, ಮದುವೆಗೂ ಮುನ್ನ ಏನಾದರೂ ಸಾಧನೆ ಮಾಡಿ, ಜನರು ನಿಮ್ಮನ್ನು ಗುರುತಿಸುವಂತೆ ಸಾಧಿಸಿ ತೋರಿಸಿ ಎಂದರು.

ಖಾಸಗಿ ವಾಹಿನಿಯ ಪಿಆರ್.ಒ ಶ್ರೀಕಾಂತಪ್ರಸಾದ್.ಎನ್.ಎಸ್. ಮಾತನಾಡಿ, ನಿಮ್ಮಲ್ಲಿಯೂ ಒಂದು ಪ್ರತಿಭೆ ಇದೆ. ಸರಿಯಾದ ಗುರಿಯಿಂದ ಮುನ್ನೆಡೆದರೆ ನಿಮ್ಮ ಬದುಕಿಗೆ ದಾರಿ ತೊರಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದಗಂಗಾ ಕಲಾ, ವಾಣಿಜ್ಯ ಮತ್ತ ವಿಜ್ಞಾನ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದಕ್ಷಿಣಮೂರ್ತಿ ಮಾತನಾಡಿ, ಡಾ.ಶಿವಕುಮಾರಸ್ವಾಮೀಜಿಗಳ ಅಶೀರ್ವಾದ ಪಡೆದು ಸ್ಪೂರ್ತಿ ಎಂಬ ಹೆಸರಿನ ವೇದಿಕೆಯನ್ನು ಸೃಷ್ಟಿಸಿದರು. ಈ ವೇದಿಕೆ ಮಕ್ಕಳ ಒಂದಿಲೊಂದು ಪ್ರತಿಭೆಗೆ ಆಧಾರವಾಗಿದೆ. ಕ್ರೀಡೆ, ಎನ್.ಎಸ್.ಎಸ್., ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರವಾಗಿ ತೊಡಗಿಸಿಕೊಂಡಿದೆ. ಇದುವರೆಗೂ 56ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳ ಪ್ರತಿಭೆಗೆ ಬೆನ್ನುತಟ್ಟುವ ಕೆಲಸ ಮಾಡಿದ್ದೇವೆ.ಎಲ್ಲಾ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯ ಪ್ರದರ್ಶನಕ್ಕೆ ಈ ವೇದಿಕೆ ಬಳಕೆ ಮಾಡಿಕೊಂಡು, ಸಮಾಜದಲ್ಲಿ ತಾವು ಇತರರಿಗಿಂತ ಭಿನ್ನ ಎಂಬುದನ್ನು ಸಾಬೀತು ಪಡಿಸಿ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪಾವನ.ಬಿ.ಎಸ್., ದಿವ್ಯ.ಕೆ, ಎಸ್.ಯತಿರಾಜು, ಕು.ನಿಶ್ಚಲ.ಎಲ್., ಕು.ಹೇಮ.ಬಿ.ಸಿ., ನಯನ.ಕೆ.ಆರ್, ಡಾ.ಜಗದೀಶ್.ಎಂ ಮತ್ತಿತರರು ಉಪಸ್ಥಿತರಿದ್ದರು. ಗಾಯಕಿ ಡಾ.ಶ್ರಾವ್ಯ ಎಸ್.ರಾವ್, ಹಾಗೂ ಕಲಾವಿದರಾದ ಗಿಲ್ಲಿ ನಟರಾಜ್ ಮತ್ತು ಕು.ಗಗನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Share this article