ಸುವರ್ಣ ವಿಧಾನಸೌಧ : ಉಭಯ ಸದನಗಳಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆ ಆರಂಭವಾಗಲಿದೆ. ಈ ಚರ್ಚೆ ನಡುವೆಯೇ ವಕ್ಫ್ ಕುರಿತು ಮುಖ್ಯಮಂತ್ರಿಗಳ ಉತ್ತರ, ಕೋವಿಡ್ ಹಗರಣ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ, ಶಾಸಕ ಮುನಿರತ್ನ ಪ್ರಕರಣವನ್ನು ಪ್ರಸ್ತಾಪಿಸಲು ಆಡಳಿತ ಪಕ್ಷ ಸಜ್ಜಾಗಿದೆ. ಇದೇ ವೇಳೆ, ಮುಡಾ ಹಗರಣ, ಬಾಣಂತಿಯರ ಸಾವು ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳೂ ಅಣಿಯಾಗಿವೆ. ಹೀಗಾಗಿ ಕಲಾಪದ ತಾಪ ತಾರಕಕ್ಕೇರುವ ನಿರೀಕ್ಷೆಯಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದ ಎರಡನೇ ವಾರದ ಕಲಾಪದಲ್ಲಿ ಸೋಮವಾರದಿಂದ 3 ದಿನಗಳ ಕಾಲ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದ್ದು, ಬುಧವಾರ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ.
ಸೋಮವಾರ ಈ ಭಾಗದಿಂದ ಮೊದಲ ಬಾರಿಗೆ ಆಯ್ಕೆಯಾದ ಅವಕಾಶ ಕಲ್ಪಿಸಲಾಗುವುದು. ಮಂಗಳವಾರ, ಬುಧವಾರ ಉಳಿದ ಎಲ್ಲಾ ಸದಸ್ಯರಿಗೂ ಅವಕಾಶ ಮಾಡಿಕೊಡಲಾಗುವುದು.
ಚರ್ಚೆ ವೇಳೆ ಉ-ಕ ಅಭಿವೃದ್ಧಿಗೆ ನಿರ್ಲಕ್ಷ್ಯ, ಕೃಷ್ಣಾ ಮಹದಾಯಿ, ಕಳಸಾ- ಬಂಡೂರಿ, ತುಂಗಭದ್ರಾ, ಕಾರಂಜಾ, ಕಬ್ಬು ಬೆಳೆಗಾರರ ಸಮಸ್ಯೆ, ನಂಜುಂಡಪ್ಪ ವರದಿ, ಅನುದಾನ ಕೊರತೆ ಕುರಿತು ಪ್ರಸ್ತಾಪವಾಗಲಿದೆ. ಕಳೆದ ವರ್ಷ ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಸೇರಿದಂತೆ ಸಿದ್ದರಾಮಯ್ಯ ಮಾಡಿದ್ದ ಎಂಟು ಘೋಷಣೆಯ ಸ್ಥಿತಿಗತಿ ಪ್ರಸ್ತಾಪಿಸಿ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳುವ ಸಾಧ್ಯತೆಯಿದೆ.
ಇದಕ್ಕೆ ಪ್ರತಿಯಾಗಿ ಮಹದಾಯಿ, ಕಳಸಾ- ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ಅಸಹಕಾರ, ಹಿಂದಿನ ಬಿಜೆಪಿ ಅವಧಿಯಲ್ಲಿ ನೀರಾವರಿಗೆ ತೋರಿದ ನಿರ್ಲಕ್ಷ್ಯ ಪ್ರಸ್ತಾಪಿಸಿ ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ. ಇದೇ ವೇಳೆ ಮುಖ್ಯಮಂತ್ರಿಗಳು ಈ ಭಾಗಕ್ಕೆ 3,750 ಕೋಟಿಗಳ ವಿವಿಧ ಅಭಿವೃದ್ಧಿ ಯೋಜನೆ ಘೋಷಿಸುವ ನಿರೀಕ್ಷೆಯಿದೆ.
ಬಿಜೆಪಿಗೆ ಸಾಲು-ಸಾಲು ಪರೀಕ್ಷೆ:
ಸೋಮವಾರ ಬೆಳಗ್ಗೆ ಸಚಿವ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್ ಜತೆಗೆ ಮುಖ್ಯಮಂತ್ರಿಗಳು ವಕ್ಫ್ ಬಗ್ಗೆ ಉತ್ತರ ನೀಡಲಿದ್ದಾರೆ. ಈ ವೇಳೆ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬದಲಿಗೆ ಅನ್ವರ್ ಮಾಣಿಪ್ಪಾಡಿ ಅವರ 150 ಕೋಟಿ ರು. ಆಮಿಷ ಆರೋಪಕ್ಕೆ ಸ್ಪಷ್ಟೀಕರಣ ನೀಡುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.
ಮತ್ತೊಂದೆಡೆ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ, ಕೋವಿಡ್ ಹಗರಣ ಕುರಿತ ಮೈಕಲ್ ಡಿ ಕುನ್ಹಾ ವರದಿ ಹಾಗೂ ವರದಿ ಆಧಾರದ ಮೇಲೆ ಮಾಡಿರುವ ಎಫ್ಐಆರ್ ಪ್ರಸ್ತಾಪಿಸಲು ಕಾಂಗ್ರೆಸ್ ಸದಸ್ಯರು ಸಜ್ಜಾಗಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧದ ಹನಿಟ್ರ್ಯಾಪ್, ಎಚ್ಐವಿ ಸೋಂಕಿತರ ದುರ್ಬಳಕೆ ಆರೋಪದ ಮೇಲೆ ಚರ್ಚೆಗೆ ಕಾಂಗ್ರೆಸ್ ಸದಸ್ಯರಾದ ಪಿ.ಎಂ. ನರೇಂದ್ರಸ್ವಾಮಿ, ನಯನಾ ಮೋಟಮ್ಮ ಅನುಮತಿ ಕೋರಿದ್ದಾರೆ.
ಇನ್ನು ಬಿ.ಎಸ್.ಯಡಿಯೂರಪ್ಪ, ನಿರ್ಮಲಾ ಸೀತಾರಾಮನ್, ಬಸವರಾಜ ಬೊಮ್ಮಾಯಿ, ತೇಜಸ್ವಿ ಸೂರ್ಯ ಪ್ರಕರಣಗಳಲ್ಲಿ ನ್ಯಾಯಾಲಯ ಮೃದು ಧೋರಣೆ ತಾಳುತ್ತಿರುವ ಬಗ್ಗೆ ಚರ್ಚಿಸಲು ಸಹ ಸಜ್ಜಾಗಿದ್ದು, ಪ್ರತಿಪಕ್ಷಕ್ಕಿಂತ ಆಡಳಿತ ಪಕ್ಷದ ತಯಾರಿಯೇ ಹೆಚ್ಚಾಗಿರುವುದರಿಂದ ಪ್ರತಿಪಕ್ಷಕ್ಕೆ ಪರೀಕ್ಷೆ ಎದುರಾದಂತಾಗಿದೆ.
ಸರ್ಕಾರದ ಮೇಲೆ ದಾಳಿಗೆ ಪ್ರತಿಪಕ್ಷ ಸಿದ್ಧತೆ:
ಉ-ಕ ಅಭಿವೃದ್ಧಿಗೆ ನಿರ್ಲಕ್ಷ್ಯ ಜತೆಗೆ ಮುಡಾ ಹಗರಣ ವಿಚಾರವನ್ನೇ ಬಲವಾಗಿ ಪ್ರತಿಪಾದಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ. ಇ.ಡಿ. ತನಿಖೆಯ ಅಂಶ ಮುಂದಿಟ್ಟುಕೊಂಡು ಸಿಬಿಐ ತನಿಖೆ ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟುಹಿಡಿಯುವ ಸಾಧ್ಯತೆಯಿದೆ.
ಇದಕ್ಕೆ ಪ್ರತಿಯಾಗಿ ಸರ್ಕಾರ ಮೈಸೂರು ನಗರಾಭಿವೃದ್ಧಿ ಪ್ರತ್ಯೇಕ ವಿಧೇಯಕ (ಮುಡಾ) ಮಂಡಿಸಿ ಸುಧಾರಣಾ ಕ್ರಮ ತರುತ್ತಿರುವುದಾಗಿ ರಕ್ಷಣಾತ್ಮಕ ತಂತ್ರ ಅನುಸರಿಸುವ ಸಾಧ್ಯತೆಯಿದೆ.
ಇದರ ನಡುವೆ ಅನುದಾನ ಹಂಚಿಕೆ ತಾರತಮ್ಯ, ಪಂಚಮಸಾಲಿ ಮೀಸಲಾತಿ ಬೇಡಿಕೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಬಾಣಂತಿಯರ ಹಾಗೂ ಶಿಶು ಮರಣ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲದಿರುವ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಮೇಲೆ ಸವಾರಿ ಮಾಡಲು ಸಜ್ಜಾಗಿದೆ.
ರಾತ್ರಿ 9-10 ಗಂಟೆವರೆಗೆ ಕಲಾಪ ನಿರೀಕ್ಷೆ.
ಶುಕ್ರವಾರದವರಗೆ ನಿಗದಿಯಾಗಿದ್ದ ಅಧಿವೇಶನ ಗುರುವಾರಕ್ಕೆ ಮೊಟಕುಗೊಂಡಿದೆ. ಗುರುವಾರ ಭೋಜನ ವಿರಾಮದ ವೇಳೆಗೆ ಅಧಿವೇಶನ ಮುಗಿಸಬೇಕಾದ ಒತ್ತಡ ಇರುವ ಹಿನ್ನೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9-10 ಗಂಟೆವರೆಗೆ ಕಲಾಪ ನಡೆಸುವ ನಿರೀಕ್ಷೆಯಿದೆ.