ಕುಸುಮ್‌ ಎ ಯೋಜನೆಗೆ ಕೇಂದ್ರದೊಂದಿಗೆ ಮಾತುಕತೆ

KannadaprabhaNewsNetwork | Published : Apr 23, 2025 2:07 AM

ಸಾರಾಂಶ

ಕಡೂರು: ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲು ಕುಸುಮ್ - ಎ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಕಡೂರು: ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲು ಕುಸುಮ್ - ಎ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಕಡೂರು ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್‌ನ ಅಮೃತ ಮಹೋತ್ಸವ ಹಾಗೂ ರೈತ ಬಜಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ತಮ್ಮ ಜಾಗದಲ್ಲಿ ಸೋಲಾರ್ ಹಾಕಿಕೊಳ್ಳಬೇಕು. ಅಲ್ಲಿನ ವಿದ್ಯುತ್ ಅವರೇ ಬಳಕೆ ಮಾಡಿಕೊಳ್ಳಬೇಕು, ಹೆಚ್ಚುವರಿಯಾಗಿ ವಿದ್ಯುತ್ ಉತ್ಪಾದನೆ ಆದಲ್ಲಿ ಅದನ್ನು ಸರ್ಕಾರವೇ ಖರೀದಿ ಮಾಡಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಯೋಚಿಸಲಾಗಿದ್ದು, ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಕುಸುಮ್ - ಬಿ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ರೈತರು ಬೋರ್‌ವೆಲ್ ಕೊರೆಸಬೇಕು, ಅದರಲ್ಲಿ ನೀರು ಬಂದಿರುವುದು ಖಾತ್ರಿಯಾದರೆ ಈ ಸಂಬಂಧ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಪರಿಶೀಲನೆ ನಡೆಸಿ ಯೋಜನೆ ಕಾರ್ಯರೂಪಕ್ಕೆ ತರಲು 12 ಮಂದಿ ಗುತ್ತಿಗೆದಾರರನ್ನು ಗುರುತು ಮಾಡಲಾಗಿದೆ. ಅವರುಗಳು ಬೋರ್‌ವೆಲ್‌ಗೆ ಮೋಟಾರ್, ಪ್ಯಾನಲ್ ಹಾಗೂ ಪೈಪ್ ಅಳವಡಿಸಲಿದ್ದಾರೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ.20 ರಷ್ಟು ಹಣವನ್ನು ರೈತರು ಭರಿಸಬೇಕು, ಇನ್ನುಳಿದ ಶೇ.50ರಷ್ಟು ಹಣ ರಾಜ್ಯ ಸರ್ಕಾರ ಭರಿಸುತ್ತದೆ. ಇನ್ನುಳಿಕೆ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದ ಅವರು, ಈ ವರ್ಷದಲ್ಲಿ 40 ಸಾವಿರ ಪಂಪ್‌ಸೆಟ್‌ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಆದರೆ, 19,500 ಮೆಗಾವ್ಯಾಟ್ ಬೇಡಿಕೆ ಇದೆ. ರೈತರು ಹೆಚ್ಚು ಪಂಪ್‌ಸೆಟ್ ಹಾಕಿಕೊಳ್ಳುತ್ತಿದ್ದಾರೆ. ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಿ ಮಾಡಲಾಗುತ್ತಿದೆ. ವಿದ್ಯುತ್ ಸಂಗ್ರಹಕ್ಕಾಗಿ 100 ಸಬ್‌ಸ್ಟೇಷನ್ ನಿರ್ಮಾಣ ಮಾಡಲಾಗುವುದು. ನೆನಗುದಿಗೆ ಬಿದ್ದಿದ್ದ ಕುಸುಮ್- ಸಿ ಯೋಜನೆಯನ್ನು ಕೇಂದ್ರ ಇಂಧನ ಸಚಿವರೊಂದಿಗೆ ಮಾತುಕತೆ ನಡೆಸಿ ಚಾಲನೆ ತರಲಾಗಿದೆ ಎಂದರು.

ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ಸಬ್‌ಸ್ಟೇಷನ್‌ಗಳಲ್ಲಿ 3 ಸಾವಿರ ಮೆಗಾ ವ್ಯಾಟ್ ವಿದ್ಯುತ್‌ ಅನ್ನು ಸಂಗ್ರಹಿಸಲು ಅವಕಾಶ ಇದೆ. ಕಡೂರಿನಲ್ಲಿ ಕುಸುಮ್- ಸಿ ಯಡಿಯಲ್ಲಿ 7 ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು. ಒಂದು ಸಬ್ ಸ್ಟೇಷನ್ ನಿರ್ಮಾಣಕ್ಕೆ 40 ಎಕರೆ ಜಾಗ ಬೇಕು. ಸಂಗ್ರಹವಾಗುವ 3 ಸಾವಿರ ಮೆಗಾವ್ಯಾಟ್ ವಿದ್ಯುತ್‌ನಲ್ಲಿ 1,500 ಮೆಗಾವ್ಯಾಟ್ ರೈತರಿಗೆ ಕೊಟ್ಟರೆ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಹಿಂದೆ ವಿದ್ಯುತ್‌ಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ, ರೈತರಿಗೆ ದಿನದ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕೊಟ್ಟಿದ್ದರು. ಅದನ್ನು ಉಳಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ. ಪ್ರತಿ ದಿನ ನಿರಂತರವಾಗಿ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ ಎಂದರು.

ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲು ಪಾವಗಡದಲ್ಲಿ 10 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್‌ ನಿರ್ಮಾಣ ಮಾಡಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮತ್ತೆ 10 ಸಾವಿರ ಎಕರೆಯಲ್ಲಿ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ದಿನದ 18 ಗಂಟೆ ಕೆಲಸ ಮಾಡುತ್ತಿರುವ ರೈತರ ಉತ್ಪಾದನೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ಗ್ರಾಹಕರು ಹೆಚ್ಚಿನ ಬೆಲೆ ಕೊಡುತ್ತಿದ್ದಾರೆ. ರೈತ ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳು ಬಂಡವಾಳ ಹಾಕದೆ ಲಾಭದ ಹೆಚ್ಚಿನ ಅಂಶ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಈ ರೀತಿಯ ರೈತ ಬಜಾರ್ ಸ್ಥಾಪನೆ ಮಾಡಬೇಕು ಎಂದರು.

ಸಾವಯವ ಉತ್ಪನ್ನಕ್ಕೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆ ನಿಟ್ಟಿನಲ್ಲಿ ರೈತರು ಬೆಳೆಗಳನ್ನು ಬೆಳೆಯಬೇಕು. ಸರ್ಕಾರ ಬೆಂಬಲ ಬೆಲೆ ನೀಡುತ್ತಿದೆ. ಸರ್ಕಾರದಿಂದ ಎಲ್ಲವೂ ಆಗೋದಿಲ್ಲ, ಹಾಗಾಗಿ ರೈತ ಬಜಾರ್ ಮುಂದೆ ಬಂದರೆ ರೈತರಿಗೆ ಸರಿಯಾದ ಬೆಲೆ ಸಿಗುತ್ತದೆ. ಮತ್ತೆ ಗ್ರಾಹಕರಿಗೆ ಒಳ್ಳೆಯ ಪದಾರ್ಥ ಸಿಗಲಿದೆ ಎಂದು ಹೇಳಿದರು.

ಕಡೂರು ಶಾಸಕ ಕೆ.ಎಸ್.ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

Share this article