ಗುದ್ನೇಪ್ಪನ ಮಠದ ಜಮೀನಿನಲ್ಲಿ ತಾಲೂಕಾಡಳಿತ ಕಟ್ಟಡ

KannadaprabhaNewsNetwork |  
Published : Mar 19, 2024, 12:45 AM IST
18ಕೆಕೆಆರ್3:ತಾಲೂಕು ಆಡಳಿತ ಸೌಧದ ಮಾದರಿ ಚಿತ್ರ(ಸಂಗ್ರಹ ಚಿತ್ರ) | Kannada Prabha

ಸಾರಾಂಶ

ನೂತನ ತಾಲೂಕಿನಲ್ಲಿ ತಹಸೀಲ್ದಾರ್ ಕಾರ್ಯಾಲಯ ಕಟ್ಟಡ, ನ್ಯಾಯಾಲಯದ ಕಟ್ಟಡ ಮತ್ತು ಬುದ್ಧ, ಬಸವ ಅಂಬೇಡ್ಕ‌ರ್ ಭವನ ಸ್ಥಾಪಿಸಲು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ 26.50 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿದೆ.

30 ವರ್ಷ ಗುತ್ತಿಗೆ ಆಧಾರದ ಮೇಲೆ ಜಾಗ ಮಂಜೂರು । ಕೋರ್ಟ್‌, ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ನೂತನ ತಾಲೂಕಿನಲ್ಲಿ ತಹಸೀಲ್ದಾರ್ ಕಾರ್ಯಾಲಯ ಕಟ್ಟಡ, ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಕಟ್ಟಡ ಮತ್ತು ಬುದ್ಧ, ಬಸವ ಅಂಬೇಡ್ಕ‌ರ್ ಭವನ ಸ್ಥಾಪಿಸಲು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ 26.50 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿದೆ. ಈ ಜಾಗದಲ್ಲಿಯೇ ಕಟ್ಟಡ ನಿರ್ಮಾಣವಾಗಲಿವೆ.

ಕುಕನೂರು ಗ್ರಾಮದ ಗುದ್ನೇಪ್ಪನಮಠದ ದೇವಾಲಯದ ಸುಪರ್ದಿಯಲ್ಲಿ ಉಳಿದಿರುವ 56-14 ಗುಂಟೆ ಜಮೀನಿನಲ್ಲಿ ಸಿವಿಲ್ ನ್ಯಾಯಾದೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಕಟ್ಟಡಕ್ಕಾಗಿ 5 ಎಕರೆ, ಪಟ್ಟಣದ ತಹಸೀಲ್ದಾರ ಕಚೇರಿ ಕಟ್ಟಡ (ಮಿನಿ ವಿಧಾನಸೌಧ) ನಿರ್ಮಾಣಕ್ಕಾಗಿ 16-30 ಎಕರೆ, ಕುಕನೂರಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭವನ ಸ್ಥಾಪಿಸಲು 5 ಎಕರೆ ಸೇರಿ ಒಟ್ಟು 26 ಎಕರೆ 30 ಗುಂಟೆ ಜಮೀನನ್ನು ಮಂಜೂರು ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆಗೆ ಕೊಪ್ಪಳ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.

ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಅನ್ವಯ ಧಾರ್ಮಿಕ ಇಲಾಖೆಯ ಆಯುಕ್ತರು, ಕುಕನೂರು ಗ್ರಾಮದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಸಮೂಹ ''ಸಿ'' ವರ್ಗದ ಶ್ರೀ ಗುದ್ದೇಶ್ವರ ದೇವಸ್ಥಾನಕ್ಕೆ ಸೇರಿದ ಕುಕನೂರು ಗ್ರಾಮದ ಸ.ನಂ 78 ರಲ್ಲಿನ ಒಟ್ಟು 26-30 ಎಕರೆ ಜಮೀನಿನನ್ನು ಇಲಾಖೆ ವಿಧಿಸುವ ಇತರೆ ಷರತ್ತುಗಳಿಗೊಳಪಟ್ಟು ಗುತ್ತಿಗೆ ಹಾಗೂ ಬಾಡಿಗೆ ಮಾಸಿಕವಾಗಿ ಒಂದು ಎಕರೆಗೆ ₹1,000 ಗಳಂತೆ ಬಾಡಿಗೆ ನಿಗದಿಪಡಿಸಿ, 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡಲು ಆದೇಶಿಸಿದ್ದಾರೆ.

ಪಟ್ಟಣದ ಗುದ್ನೇಪ್ಪನಮಠದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಈ ಹಿಂದೆ ಜಿಲ್ಲಾಧಿಕಾರಿಗಳು, ಶಾಸಕ ಬಸವರಾಜ ರಾಯರಡ್ಡಿ ಸ್ಥಳ ಪರಿಶೀಲನೆ ಮಾಡಿದ್ದರು. ಆ ವೇಳೆ ಗುದ್ನೇಪ್ಪನಮಠದ ಗ್ರಾಮಸ್ಥರು ಭೂಮಿ ನೀಡುವುದಿಲ್ಲ ಎಂದು ತಕರಾರು ಸಹ ಮಾಡಿದ್ದರು. ಸದ್ಯ ಗುತ್ತಿಗೆ ಆಧಾರದ ಮೇಲೆ ಜಮೀನು ನೀಡಲು ಧಾರ್ಮಿಕ ಇಲಾಖೆ ಮಂಜೂರಾತಿ ನೀಡಿದ್ದು, ಗುದ್ನೇಪ್ಪನಮಠದ ಗುದ್ನೇಶ್ವರ ದೇವಾಲಯದ ಧಾರ್ಮಿಕ ದತ್ತಿ ಇಲಾಖೆ ಜಮೀನಿನಲ್ಲಿ ತಾಲೂಕಾಡಳಿತ ಕಟ್ಟಡ ನಿರ್ಮಾಣವಾಗಲಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ