ದಲಿತ ಪರ ಸಂಘಟನೆಗಳಿಂದ ತಮಟೆ ಚಳವಳಿ

KannadaprabhaNewsNetwork | Updated : Feb 21 2024, 02:02 AM IST

ಸಾರಾಂಶ

ರಾಮನಗರ: ದಲಿತ ಮುಖಂಡರ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಿ ದೌರ್ಜನ್ಯ ನಡೆಸಿದ ಕೆಲ ವಕೀಲರ ವಿರುದ್ಧ ಜಾತಿ ನಿಂದನೆ ದೂರು ನೀಡಿದರೂ ಪ್ರಕರಣ ದಾಖಲಿಸದ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್‌ ತನ್ವೀರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ತಮಟೆ ಚಳವಳಿ ನಡೆಸಿದರು.

ರಾಮನಗರ: ದಲಿತ ಮುಖಂಡರ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಿ ದೌರ್ಜನ್ಯ ನಡೆಸಿದ ಕೆಲ ವಕೀಲರ ವಿರುದ್ಧ ಜಾತಿ ನಿಂದನೆ ದೂರು ನೀಡಿದರೂ ಪ್ರಕರಣ ದಾಖಲಿಸದ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್‌ ತನ್ವೀರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ತಮಟೆ ಚಳವಳಿ ನಡೆಸಿದರು.

ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಐಜೂರು ವೃತ್ತದಿಂದ ಬೆಳಗ್ಗೆ ತಮಟೆ ಚಳವಳಿಯಲ್ಲಿ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಮತ್ತೊಂದು ದ್ವಾರಕ್ಕೆ ಮಧ್ಯಾಹ್ನ ತಲುಪಿದರು.

ಈ ವೇಳೆ ಕಾರ್ಯಕರ್ತರು ನಾವು ಕುರಿಗಳಲ್ಲ, ಹುಲಿಗಳು.., ಜೈ ಭೀಮ್ , ಜೈ ಜೈ ಜೈ ಭೀಮ್... ಎಂಬ ಘೋಷಣೆ ಕೂಗುತ್ತಾ ಹಳೇಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕೊನೆಗೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದೊಳಗೆ ಕಳುಹಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯ ದ್ವಾರದಲ್ಲಿ ವಕೀಲರು ಪ್ರತಿಭಟನಾ ಧರಣಿಯಲ್ಲಿ ತೊಡಗಿದ್ದರೆ, ಉತ್ತರ ಭಾಗದಲ್ಲಿರುವ ಕಚೇರಿ ದ್ವಾರಕ್ಕೆ ತಮಟೆ ಚಳವಳಿಯಲ್ಲಿ ದಲಿತರು ಆಗಮಿಸಿದರು. ತಮಟೆ. ನಗಾರಿ ಶಬ್ದ ಹಾಗೂ ಸಂವಿಧಾನ ಪೀಠಿಕೆ ಹಾಡು ನೆರೆದಿದ್ದವರ ಮೈನವಿರೇಳುವಂತೆ ಮಾಡಿತು. ಅಲ್ಲದೆ, ದಲಿತ ಯುವಕರು ತಮಟೆ ಬಾರಿಸುವ ಮೂಲಕ ತಮ್ಮೊಳಗಿನ ನೋವನ್ನು ಹೊರ ಹಾಕಿದರು.

ದಲಿತ ಮುಖಂಡರು ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರಲ್ಲದೆ ಜೈ ಭೀಮ್ ಘೋಷಣೆ ಕೂಗಿ ವಕೀಲರ ಪ್ರತಿಭಟನೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನಮ್ಮ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಿ ದೌರ್ಜನ್ಯವೆಸಗಿರುವ ಕೆಲ ವಕೀಲರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸದ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಫೆ.6ರಂದು ಜಿಲ್ಲೆಯ ಕೆಲ ದಲಿತ ಮುಖಂಡರು, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳ ಅನುಮತಿ ಪಡೆದು

ರಾಮನಗರದ ವಕೀಲರ ಸಂಘಕ್ಕೆ ತೆರಳಿ ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಶಾಂತಿಯುತವಾಗಿ ಚರ್ಚಿಸಿ ನಮ್ಮ ರಾಮನಗರದಲ್ಲಿ ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ತಾವೆಲ್ಲರೂ ಚಿಂತಿಸಬೇಕು ಎಂದು ತಿಳಿಸಲು ಕಚೇರಿ ಒಳಗಡೆ ಹೋಗಿದ್ದರು. ಆಗ ದಲಿತ ಮುಖಂಡರನ್ನು ಮೊದಲೇ ನೋಡಿದ್ದ ಕೆಲ ವಕೀಲರು ಏಯ್ ಇವರನ್ನೆಲ್ಲಾ ಯಾರು ಕಚೇರಿ ಒಳಗೆ ಬಿಟ್ಟಿದ್ದು ಹೊರಗೆ ತಳ್ಳಿ ಎಂದು ತಮ್ಮ ಅಂತರಾಳದಲ್ಲಿ "ಜಾತಿ'''' ಮನಸ್ಥಿತಿ ಇಟ್ಟುಕೊಂಡು, ಸಮಾಜದಲ್ಲಿ ಬೇರೆ ಮುಖವಾಡ ಧರಿಸಿ ನಾಟಕವಾಡುತ್ತಿರುವ ಕೆಲ ವಕೀಲರು ದಲಿತ ಮುಖಂಡರ ವಿರುದ್ಧ ಬಾಯಿಗೆ ಬಂದ ಹಾಗೆ ಬೈದು.

ಏಕವಚನದಲ್ಲಿ ಗದರಿಸಿ, ಸಂಘದ ಆವರಣದಿಂದ ಹೊರಗಡೆ ನಡೆಯಿರಿ ಎಂದು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ದೂರಿದರು.

ನಮ್ಮ ಸಮುದಾಯದ ಮುಖಂಡರ ಬಗ್ಗೆ ಕೀಳಾಗಿ ಮಾತನಾಡಿ, ಅಗೌರವದಿಂದ ನಡೆದುಕೊಂಡಿರುವ ಅನಾಗರಿಕ ಮನಸ್ಥಿತಿ ಹೊಂದಿರುವವರು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಸಂವಿಧಾನವನ್ನು ಅಪಾಯದಂಚಿಗೆ ತಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅವರ ನಡೆ ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ. ಈ ಕೂಡಲೇ ವಕೀಲರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಹಾಗೂ ಪಿಎಸ್‌ಐ ತನ್ವೀರ್ ಅವರನ್ನು ಅಮಾನತ್ತು ಮಾಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ದಲಿತ ಮುಖಂಡರಿಂದ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರಾದ ಶಿವಕುಮಾರಸ್ವಾಮಿ, ಶಿವಶಂಕರ್, ಕೋಟೆ ಕುಮಾರ್, ಹರೀಶ್ ಬಾಲು, ವೆಂಕಟೇಶ್, ಕಿರಣ್, ಪುನೀತ್, ಪಿ.ಜೆ. ಗೋವಿಂದರಾಜು, ಗುಡ್ಡೆ ವೆಂಕಟೇಶ್, ಚಲುವರಾಜು, ಬಾನಂದೂರು ಕುಮಾರ್, ಬಿವಿಎಸ್ ಕುಮಾರ್, ಹರೀಶ್, ಶೇಖರ್, ವಿನಯ್ ಕುಮಾರ್, ಗಾಯಕ ಸರ್ವೋತ್ತಮ್ ಮತ್ತಿತರರು ಭಾಗವಹಿಸಿದ್ದರು.20ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಮಂಗಳವಾರ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.

Share this article