ಭಾನುವಾರ ಬೆಳಿಗ್ಗೆಯಿಂದಲೇ ಮತದಾನ । ಮದ್ಯಾಹ್ನ 3 ಗಂಟೆಯ ನಂತರ ಮತ ಎಣಿಕೆ ಕಾರ್ಯ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಪ್ರತಿಷ್ಠತ ಚನ್ನಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದ್ದು, ಭಾನುವಾರ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ನಗರದ ಬಾಲಕರ ಸರ್ಕಾರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಟಿಎಪಿಸಿಎಂಎಸ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಿಗದಿಯಾಗಿತ್ತು. ಒಟ್ಟು 12 ನಿರ್ದೇಶಕ ಬಲದ ಟಿಎಪಿಸಿಎಂಎಸ್‌ನಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದಂತೆ ಎ ತರಗತಿಯ 5 ಸ್ಥಾನಗಳು ಹಾಗೂ ಬಿ ತರಗತಿಯ 6 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು.ಭಾನುವಾರ ಬೆಳಗ್ಗೆಯಿಂದ ಮತದಾನ ನಡೆದು ಸಂಜೆ 3 ಗಂಟೆಯ ನಂತರ ಮತ ಎಣಿಕೆ ಕಾರ್ಯ ನಡೆಯಿತು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಉಮೇಶ್ ಫಲಿತಾಂಶ ಪ್ರಕಟಿಸಿದರು.
ಸಂಘದ ಎ ತರಗತಿಯ ಐದು ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿದ್ದ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ಮಳೂರುಪಟ್ಟಣ ರವಿ, ತಗಚಗೆರೆ ಪವನ್, ವಿ.ಎಚ್.ಮಧುಕರ್ ಹಾಗೂ ಅರಳಾಪುರ ಸುರೇಶ್ ಚುನಾಯಿತರಾದರು.ಬಿ ತರಗತಿಯ ಸಾಮಾನ್ಯ ಕ್ಷೇತ್ರದಿಂದ ಎಂ.ಎನ್.ರಾಜಶೇಖರ್, ಮಹಿಳಾ ಮೀಸಲು ಕ್ಷೇತ್ರದಿಂದ ಶಿಲ್ಪಾ ಮಹೇಶ್, ಪೂಜಾ ಲೋಕೇಶ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಇ.ತಿ.ಶ್ರೀನಿವಾಸ್, ಹಿಂದುಳಿದ ಎ ವರ್ಗ ಕ್ಷೇತ್ರದಿಂದ ಕೆ. ಮಂಜುನಾಥ್ ಹಾಗೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪುಟ್ಟಸ್ವಾಮಿ ಚುನಾಯಿತರಾದರು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ರೇವ ಹೆಗ್ಗಡೆ ಈ ಹಿಂದೆಯೇ ಅವಿರೋಧ ಆಯ್ಕೆಗೊಂಡಿದ್ದರು.
ಸಂಘದ 1422 ಮತದಾರರ ಪೈಕಿ 987 ಜನ ತಮ್ಮ ಮತ ಚಲಾಯಿಸಿದರು. ಅಕ್ಕಿ ಹಗರಣದ ಹಿನ್ನೆಲೆ ಕಾಂಗ್ರೆಸ್ ಚುನಾವಣೆಯನ್ನು ಬಹಿಷ್ಕರಿಸಿದ್ದರೆ ಕೆಲವು ಜನ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದರಿಂದ ಜೆಡಿಎಸ್ ಬೆಂಬಲಿತರು ನಿರಾಯಾಸ ಗೆಲುವು ಸಾಧಿಸಿ ಮತ್ತೆ ಸಂಘದ ಆಡಳಿತ ಚುಕ್ಕಾಣಿ ಹಿಡಿದರು.ಪುರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಪಕ್ಷದ ಬೆಂಬಲಿತರನ್ನು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು.