ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ತರಾವರಿ ತಾಪತ್ರೆ

KannadaprabhaNewsNetwork | Published : Oct 28, 2024 1:14 AM

ಸಾರಾಂಶ

ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಿಡಿದ ವೈದ್ಯ ಸಿಬ್ಬಂದಿ ಕೊರತೆ ಗ್ರಹಣ ಇನ್ನೂ ಬಿಟ್ಟಿಲ್ಲ. ಬಡ ರೋಗಿಗಳಿಗೆ ವಿಟಮಿನ್ ಬಿ, ಪ್ಯಾರಸಿಟಮಾಲ್ ನಂತಹ ಸಾಮಾನ್ಯ ಮಾತ್ರೆಗಳೂ ಸಹ ಇಲ್ಲಿ ಸಿಗುತ್ತಿಲ್ಲ! ಹತ್ತಾರು ಕಿ.ಮೀ ದೂರದ ಹಳ್ಳಿಗಳಿಂದ ಆಸ್ಪತ್ರೆಯತ್ತ ಮುಖ ಮಾಡುವ ಬಡರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಸಿಗದೇ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಿಡಿದ ವೈದ್ಯ ಸಿಬ್ಬಂದಿ ಕೊರತೆ ಗ್ರಹಣ ಇನ್ನೂ ಬಿಟ್ಟಿಲ್ಲ. ಬಡ ರೋಗಿಗಳಿಗೆ ವಿಟಮಿನ್ ಬಿ, ಪ್ಯಾರಸಿಟಮಾಲ್ ನಂತಹ ಸಾಮಾನ್ಯ ಮಾತ್ರೆಗಳೂ ಸಹ ಇಲ್ಲಿ ಸಿಗುತ್ತಿಲ್ಲ! ಹತ್ತಾರು ಕಿ.ಮೀ ದೂರದ ಹಳ್ಳಿಗಳಿಂದ ಆಸ್ಪತ್ರೆಯತ್ತ ಮುಖ ಮಾಡುವ ಬಡರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಸಿಗದೇ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಲೂಕು ಆಡಳಿತ ವೈದ್ಯಾಧಿಕಾರಿಯೇ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾಗಿ ಹೆಚ್ಚುವರಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದಂತೆ ಹೋಮಿಯೋಪತಿ ವೈದ್ಯ ಡಾ.ಅಶೋಕ ಪರೋಕ್ಷವಾಗಿ ಸಮುದಾಯ ಆರೋಗ್ಯ ಕೇಂದ್ರದ ಸಂಪೂರ್ಣ ಹೊಣೆಗಾರಿಕೆ ಹೊತ್ತಿದ್ದಾರೆ. ಅಗತ್ಯ ಔಷಧೋಪಚಾರ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರೆ ಅವರು ತಾಲೂಕು ಆಡಳಿತಾಧಿಕಾರಿ ಡಾ.ಕಾಶಿ ಅವರತ್ತ ಬೊಟ್ಟು ಮಾಡುತ್ತಾರೆ. ಮುಂದೆ ಎಲ್ಲ ಸರಿಪಡಿಸುತ್ತೇವೆ ಎಂಬುದು ಡಾ.ಕಾಶಿ ಅವರ ಸಿದ್ದ ಮಾದರಿ ಉತ್ತರ.ಎಲ್ಲ ವಿಭಾಗಗಳಿಗೂ ಬೀಗ

ಹೊರ ಮತ್ತು ಒಳ ರೋಗಿಗಳಿಗೆ ಚೀಟಿ ಕೊಡುವ ವಿಭಾಗ, ಔಷಧಿ ವಿತರಣಾ ವಿಭಾಗ, ನರ್ಸಿಂಗ್ ಕೌಂಟರ್, ಚುಚ್ಚುಮದ್ದು ಕೊಠಡಿ, ಪ್ರಯೋಗಾಲಯ, ಸಾಮಾನ್ಯ ವಾರ್ಡ್ ಬಿಟ್ಟರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಉಳಿದೆಲ್ಲಾ ವಿಭಾಗಗಳ ಕೊಠಡಿಗಳಿಗೆ ಬೀಗ ಜಡಿಯಲಾಗಿದೆ. ಮುಖ್ಯವಾಗಿ ಲಸಿಕಾ ವಿಭಾಗ, ಆಪರೇಷನ್ ವಿಭಾಗ, ಪ್ರಸವ ನಂತರದ ವಾರ್ಡ್, ಹೆರಿಗೆ ವಿಭಾಗ, ಪ್ರಸವ ಪೂರ್ವ ವಾರ್ಡ್, ತುರ್ತು ಚಿಕಿತ್ಸಾ ಕೊಠಡಿಗಳಿಗೆ ಶಾಶ್ವತವಾಗಿ ಬೀಗ ಹಾಕಲಾಗಿದೆ. ಈ ಭಾಗದಲ್ಲಿ ಕ್ಷಯ ಮತ್ತು ಮಲೇರಿಯಾ ಆಗಾಗ ಉಲ್ಬಣಿಸುತ್ತದೆ. ದಿನವೂ ಸುರಿಯುತ್ತಿರುವ ಮಳೆಯಿಂದಾಗಿ ಪ್ರತಿ ಗ್ರಾಮಗಳಲ್ಲಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಕ್ಷಯ ಮತ್ತು ಮಲೇರಿಯಾದಂತಹ ರೋಗಗಳಿಗೂ ಇಲ್ಲಿ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಒಳರೋಗಿಗಳನ್ನು ದಾಖಲಿಸಿಕೊಂಡರೂ ತುರ್ತು ಚಿಕಿತ್ಸೆ ನೀಡುತ್ತಿಲ್ಲ. ಈ ಹಿಂದೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ ನೂರಾರು ಬಡ ರೋಗಿಗಳು ಧಾವಿಸಿ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಒಪಿಡಿ ಪಟ್ಟಿ ಮೇಲೆ ಕಣ್ಣಾಡಿಸಿದರೆ ಹತ್ತಾರು ರೋಗಿಗಳ ಹೆಸರು ಸಹ ಕಾಣಿಸುವುದಿಲ್ಲ. ಹೀಗಾಗಿಯೇ ಈ ಆಸ್ಪತ್ರೆ ಸುತ್ತಮುತ್ತ ಹಲವು ಖಾಸಗಿ ಕ್ಲಿನಿಕ್‌ಗಳು ಆರಂಭವಾಗಿವೆ. ಅಲ್ಲಿ ರೋಗಿಗಳ ಸಾಲು ಇರುತ್ತದೆ! ಆದರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಸಾಮಾನ್ಯ ವಾರ್ಡ್ ರೋಗಿಗಳಿಲ್ಲದೇ ಬಿಕೋ ಎನ್ನುತ್ತಿದೆ.

ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಏನೇ ಕೇಳಿದರೂ ಇಲ್ಲಿನ ಸಿಬ್ಬಂದಿ ನಮಗೇನೂ ಗೊತ್ತಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಅಧೀಕ್ಷಕ ಮಲ್ಲಿಕಾರ್ಜುನ್ ಅವರನ್ನು ಕೇಳಿದರೆ, ಕೆಲವೊಂದು ಸೌಲಭ್ಯ ಇಲ್ಲ. ಜೀವರಕ್ಷಕ ಸೌಲಭ್ಯ ಇವೆ. ವೈದ್ಯರ ಕೊರತೆ ನೀಗಿಸಲು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂಬ ಉತ್ತರ ನೀಡುತ್ತಾರೆ.

ಹೋಬಳಿಯಲ್ಲಿ ಬಡ ರೈತಾಪಿ ವರ್ಗ ಹೆಚ್ಚಿದೆ. ಶೇಂಗಾ ಕೊಯ್ಲಿಗೆ ಬಂದಿದೆ. ರಾತ್ರಿವೇಳೆ ಪೈರು ಗಸ್ತು ನಡೆಸುವ ರೈತರು ಹಾವು ಕಡಿತಕ್ಕೆ ಒಳಗಾಗುತ್ತಾರೆ. ಅವರ ಜೀವ ಉಳಿಸುವ ಎಎಸ್‌ವಿ (ಆಂಟಿ ಸ್ನೇಕ್ ವೆನೋಮಸ್) ಚುಚ್ಚುಮದ್ದು ತೀರಾ ಅಗತ್ಯ. ಆದರೆ, ಈ ಚುಚ್ಚುಮದ್ದಿನ ಸೌಲಭ್ಯ ಕೂಡ ಇಲ್ಲ ಎಂಬುದಾಗಿ ಔಷಧ ವಿತರಣಾ ಫಲಕದಲ್ಲಿ ನಮೂದಿಸಲಾಗಿದೆ. ರೋಗನಿರೋಧ ಚುಚ್ಚುಮದ್ದುಗಳಾದ ಪಿಪಿಎಫ್-4ಎಲ್, ಪಿಪಿಎಫ್-20ಎಲ್, ಪಿಪಿಎಫ್-40ಎಲ್‌ಗಳು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಪಟ್ಟಣದಲ್ಲಿ ಈಚೆಗೆ ಬೀದಿನಾಯಿಗಳ ದಾಳಿ ಕೂಡ ಹೆಚ್ಚಿದೆ. ನಾಯಿ ಕಡಿತಕ್ಕೆ ತಕ್ಷಣ ನೀಡಬೇಕಾದ ಎಬಿಆರ್ ಚುಚ್ಚುಮದ್ದು ಕೂಡ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೂರೈಕೆ ಮಾಡಿಲ್ಲ.

ಇದಲ್ಲದೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೂಡ ತಜ್ಞವೈದ್ಯರ ಕೊರತೆಯಿಂದ ನಲುಗಿದೆ. ಇಲ್ಲೂ ಕೂಡ ಗರ್ಭಿಣಿಯರಿಗೆ, ಬಾಣಂತಿಯರಿಗೆ, ನವಜಾತ ಶಿಶುಗಳಿಗೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ. ಹಾಗಾಗಿ, ದೂರದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಯಂತಹ ಮಹಾನಗರಗಳಲ್ಲಿನ ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸುವಂತಹ ಸ್ಥಿತಿ ಇಲ್ಲಿನ ಬಡ ಜನರಿಗೆ ಒದಗಿದೆ.ಸರ್ಕಾರ ತಜ್ಞವೈದ್ಯರ ಖಾಲಿ ಹುದ್ದೆಗಳನ್ನು ತುಂಬದೇ ಇರುವುದು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಹೆಚ್ಚುವರಿ ಕರ್ತವ್ಯ ನಿಯೋಜನೆ ಮೇಲೆ ಬರುವ ತಜ್ಞವೈದ್ಯರಿಗೆ ಸೇವಾ ಮನೋಭಾವ ಕಡಿಮೆ. ಹಾಗಾಗಿ ಕಾಯಂ ತಜ್ಞವೈದ್ಯರನ್ನು ಸರ್ಕಾರ ನೇಮಕ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಇಂಥಾ ಆಸ್ಪತ್ರೆಗಳ ದುಸ್ಥಿತಿಯತ್ತ ಗಮನಹರಿಸಬೇಕು.

- ನೇರಲಗುಂಟೆ ತಿಪ್ಪೇಸ್ವಾಮಿ, ಮಾಜಿ ಶಾಸಕ ಈಗಾಗಲೇ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಆಸ್ಪತ್ರೆಯಲ್ಲಿ ವಿಶೇಷ ಸಭೆ ನಡೆಸಿ ಕುಂದುಕೊರತೆ ಬಗ್ಗೆ ಪರಿಶೀಲಿಸಿದ್ದಾರೆ. ಈ ಕುರಿತು ಶಾಸಕರ ಗಮನ ಸೆಳೆಯುವ ಕೆಲಸ ಕೂಡ ಮಾಡಿದ್ದಾರೆ. ತಜ್ಞವೈದ್ಯರ ನೇಮಕದ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆದಿದ್ದಾರೆ.

- ಓ.ಶ್ರೀನಿವಾಸ್ ಮುಖ್ಯಾಧಿಕಾರಿ, ಪ.ಪಂ ನಾಯಕನಹಟ್ಟಿ

Share this article