ಕಾರ್ಕಳ: ಅಯೋಧ್ಯೆಯ ಶ್ರೀರಾಮನ ದೇವಾಲಯದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾನುವಾರ ಕಾರ್ಕಳ ತಾಲೂಕಿನ ನಂದಳಿಕೆಯ ಸುಬ್ರಹ್ಮಣ್ಯ ಭಟ್, ತತ್ವ ಹೋಮವನ್ನು ನೆರವೇರಿಸಿದರು.ಕ್ಷೇತ್ರದಲ್ಲಿ ತತ್ವ ಹೋಮವನ್ನು ನಡೆಸಲು ಆಹ್ವಾನ ಬಂದಿದ್ದು, ಅದರಂತೆ ನಂದಳಿಕೆಯ ಸುಬ್ರಹ್ಮಣ್ಯ ಭಟ್ ಅವರು ಅಯೋಧ್ಯೆಗೆ ತೆರಳಿ ಶ್ರೀರಾಮನ ಪುಣ್ಯ ನೆಲೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ತತ್ವ ಹೋಮವನ್ನು ನೆರವೇರಿಸಿದ್ದಾರೆ.
*ಅಯೋಧ್ಯೆಯಲ್ಲಿ ಮಂಗಳೂರಿನ ವಿದ್ವಾನ್ ನಾಗೇಂದ್ರ ಭಾರದ್ವಾಜ್ ತಂಡ
ಅಯೋಧ್ಯೆಯಲ್ಲಿ ಮಾರ್ಚ್ 10ರ ವರೆಗೆ ನಡೆಯುತ್ತಿರುವ ಶ್ರೀರಾಮನ ಮಂಡಲೋತ್ಸವ ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ಕರಾವಳಿಯ ವಿವಿಧ ಋತ್ವಿಜರ ತಂಡ ಭಾಗವಹಿಸುತ್ತಿದೆ.ಜ್ಯೋತಿಷ್ಯ ವಿದ್ವಾನ್ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಇವರ ನೇತೃತ್ವದ ಸುಮಾರು 22 ಮಂದಿ ತಂಡ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಿರತವಾಗಿದೆ. ಇವರ ಜತೆಗೆ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥರ ಶಿಷ್ಯ ವೃಂದವೂ ಇದೆ.ನಾಗೇಂದ್ರ ಭಾರದ್ವಾಜ್ ತಂಡ ಭಾನುವಾರ ಅಯೋಧ್ಯೆ ತಲುಪಿದ್ದು, ಇನ್ನು ಒಂದು ವಾರ ಕಾಲ ಅಯೋಧ್ಯೆಯಲ್ಲಿ ಮಂಡಲೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಸೇವೆ ಸಲ್ಲಿಸಲಿದೆ. ನಾಗೇಂದ್ರ ಭಾರದ್ವಾಜ್ ಅವರು ಸೋಮವಾರ ಶ್ರೀರಾಮದೇವರ ಪಲ್ಲಕಿ ಉತ್ಸವದಲ್ಲಿ ಪ್ರಮುಖವಾಗಿ ಪಾಲ್ಗೊಂಡಿದ್ದರು. ತಂಡದಲ್ಲಿ ಹರಿ ಉಪಾಧ್ಯಾಯ ವಾಮಂಜೂರು, ಮಂಗಳಾದೇವಿ ಪ್ರಧಾನ ಅರ್ಚಕ ಚಂದ್ರಶೇಖರ ಐತಾಳ್ ಸುರತ್ಕಲ್ ಸುಬ್ರಹ್ಮಣ್ಯ ಕಾರಂತರು ಮತ್ತಿತರರಿದ್ದರು. ಅಯೋಧ್ಯೆ ಮಂಡಲೋತ್ಸವದಲ್ಲಿ ಒಬ್ಬೊಬ್ಬ ಕನ್ನಡಿಗ ಋತ್ವಿಜರಿಗೆ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಳ್ಳಲು ಎರಡರಿಂದ ಮೂರು ದಿನಗಳಷ್ಟೆ ಅವಕಾಶ ನೀಡಲಾಗುತ್ತದೆ. ಮಾ.10ರ ವರೆಗೂ ಕರಾವಳಿಯಿಂದ ಕನ್ನಡಿಗ ಪುರೋಹಿತರು ಅಯೋಧ್ಯೆಯ ಮಂಡಲ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಮಂಡಲೋತ್ಸವ ಸಮಿತಿ ಮೂಲಗಳು ತಿಳಿಸಿವೆ.
ಅಷ್ಟ ಪ್ರಭಾವಳಿ ಸಮರ್ಪಣೆ:ಅಯೋಧ್ಯೆ ಶ್ರೀರಾಮನ ಉತ್ಸವಕ್ಕೆ ಮಂಗಳೂರಿನ ಉದ್ಯಮಿ ರವಿ ಪ್ರಸನ್ನ ಅವರು ಅಷ್ಟ ಪ್ರಭಾವಳಿ ಸಮರ್ಪಿಸಿದ್ದಾರೆ.ಮಂಗಳೂರಿನ ರವಿ ಪ್ರಸನ್ನ ಅವರು ಶ್ರೀರಾಮನ ಉತ್ಸವಕ್ಕೆ ಈ ಪ್ರಭಾವಳಿ ನೀಡಿದ್ದಾರೆ. ಈ ಪ್ರಭಾವಳಿಯಲ್ಲಿ ಎರಡು ದಿನಗಳ ಕಾಲ ಶ್ರೀರಾಮನ ಉತ್ಸವ ನಡೆಸಲಾಗಿದೆ ಎಂದು ಅಯೋಧ್ಯೆ ಮಂಡಲೋತ್ಸವದ ನೇತೃತ್ವ ವಹಿಸಿರುವ ಉಡುಪಿ ಪೇಜಾವರ ಮಠಾಧೀಶ, ಅಯೋಧ್ಯೆ ತೀರ್ಥಕ್ಷೇತ್ರ ಟ್ರಸ್ಟ್ ಟ್ರಸ್ಟಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.