ಇಂದಿನಿಂದಲೇ ಹೊಸ ಪಾಲಿಕೆಗಳಿಂದ ತೆರಿಗೆ ಸಂಗ್ರಹ

KannadaprabhaNewsNetwork |  
Published : Sep 03, 2025, 02:00 AM IST

ಸಾರಾಂಶ

ನಾಗರಿಕ ಸ್ನೇಹಿ ಆಡಳಿತ ಹಾಗೂ ಆಡಳಿತ ವಿಕೇಂದ್ರೀಕರಣಕ್ಕಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ತಂದಿದ್ದೇವೆ. ಬುಧವಾರದಿಂದಲೇ ಆಯಾ ಪಾಲಿಕೆಯಿಂದಲೇ ಪ್ರತ್ಯೇಕ ತೆರಿಗೆ ಸಂಗ್ರಹ ಸೇರಿದಂತೆ 5 ಪಾಲಿಕೆಗಳ ಆಡಳಿತ ಶುರುವಾಗಲಿದೆ. ನ.1ರಂದು ಹೊಸ ಐದೂ ಪಾಲಿಕೆಗಳ ಭವ್ಯ ಕಟ್ಟಡಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಗರಿಕ ಸ್ನೇಹಿ ಆಡಳಿತ ಹಾಗೂ ಆಡಳಿತ ವಿಕೇಂದ್ರೀಕರಣಕ್ಕಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ತಂದಿದ್ದೇವೆ. ಬುಧವಾರದಿಂದಲೇ ಆಯಾ ಪಾಲಿಕೆಯಿಂದಲೇ ಪ್ರತ್ಯೇಕ ತೆರಿಗೆ ಸಂಗ್ರಹ ಸೇರಿದಂತೆ 5 ಪಾಲಿಕೆಗಳ ಆಡಳಿತ ಶುರುವಾಗಲಿದೆ. ನ.1ರಂದು ಹೊಸ ಐದೂ ಪಾಲಿಕೆಗಳ ಭವ್ಯ ಕಟ್ಟಡಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇದೇ ವೇಳೆ, ‘ಚುನಾವಣಾ ಆಯೋಗಕ್ಕೆ ಚುನಾವಣೆ ಸಿದ್ಧತೆ ನಡೆಸಲು ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವಂತೆ ನ.1ಕ್ಕೆ ವಾರ್ಡ್ ಪುನರ್ ವಿಂಗಡಣೆ ಮಾಡಲಾಗುವುದು. ನ.30ಕ್ಕೆ ವಾರ್ಡ್‌ವಾರು ಮೀಸಲಾತಿ ಅಧಿಸೂಚನೆ ಪ್ರಕಟ ಮಾಡುತ್ತೇವೆ. ಬಳಿಕ ರಾಜ್ಯ ಚುನಾವಣಾ ಆಯೋಗವು ಐದು ಪಾಲಿಕೆಗಳಿಗೂ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ಮಾಡಲಿದೆ’ ಎಂದು ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸೆ.2 ಬೆಂಗಳೂರು ಮಹಾನಗರದ ಪಾಲಿಗೆ ವಿಶೇಷವಾದ ದಿನ. ಈ ದಿನದಿಂದ ಬೆಂಗಳೂರಿನಲ್ಲಿ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಬುಧವಾರದಿಂದಲೇ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣ ಆಯಾ ಪಾಲಿಕೆಗೆ ಸೇರಲಿದೆ. ಈ ತೆರಿಗೆ ಹಣ ಜಿಬಿಎಗಾಗಲಿ ಅಥವಾ ರಾಜ್ಯ ಸರ್ಕಾರಕ್ಕಾಗಲಿ ಬರುವುದಿಲ್ಲ. ಯಾವುದಾದರೂ ಪಾಲಿಕೆಗೆ ಆದಾಯ ಕಡಿಮೆ ಇದ್ದರೆ ಸರ್ಕಾರ ನೆರವಾಗಬೇಕು ಎಂದು ಸ್ಪಷ್ಟಪಡಿಸಿದರು.

500 ನಾಯಕರು ಬೆಳೆಯಲಿದ್ದಾರೆ:ಒಂದು ಪಾಲಿಕೆಯನ್ನು 5 ಪಾಲಿಕೆ ಮಾಡಿದ್ದೇವೆ. 27 ವಿಭಾಗಗಳನ್ನು 50 ವಿಭಾಗ, 75 ಉಪ ವಿಭಾಗಗಳನ್ನು 150 ಉಪ ವಿಭಾಗ ಮಾಡಿದ್ದೇವೆ. ಒಂದು ಪಾಲಿಕೆಗೆ ಗರಿಷ್ಠ 150 ವಾರ್ಡ್‌ ರಚಿಸಲು ಅವಕಾಶ ನೀಡಿದ್ದು, ಸರಾಸರಿ 100 ವಾರ್ಡ್‌ ಎಂದಾದರೂ 500 ವಾರ್ಡ್ ಆಗಲಿದೆ. 500 ಹೊಸ ನಾಯಕರು ಬೆಳೆಯಲಿದ್ದಾರೆ. ಇದರಲ್ಲಿ ಶೇ.50 ರಷ್ಟು ಮಹಿಳೆಯರು ಇರುತ್ತಾರೆ. ನಾನು ರಾಜಕಾರಣದ ದೃಷ್ಟಿಯಿಂದ ಇದನ್ನು ಮಾಡಿಲ್ಲ ಹೊಸ ನಾಯಕರನ್ನು ಬೆಳೆಸುವ ಅವಕಾಶವಿದೆ ಎಂದು ಮಾಡಿದ್ದೇನೆ. ಬೆಂಗಳೂರಿನಲ್ಲೇ ಪಾಲಿಕೆ ಸದಸ್ಯರಿಂದ ಶಾಸಕರಾಗಿರುವವರು ಸುಮಾರು 10 ಜನರಿಲ್ಲವೇ? ಎಂದು ಡಿ.ಕೆ ಶಿವಕುಮಾರ್‌ ಪ್ರಶ್ನಿಸಿದರು.

2023ರ ಜು.18 ರಂದು ಬ್ರ್ಯಾಂಡ್‌ ಬೆಂಗಳೂರು ಸಮಿತಿ ರಚನೆ ಮಾಡಿದ್ದರಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆವರೆಗೆ ನಡೆದಿರುವ ಪ್ರಮುಖ ಘಟನಾವಳಿ ಹಾಗೂ ಬೆಳವಣಿಗೆಗಳನ್ನು ಶಿವಕುಮಾರ್‌ ವಿವರಿಸಿದರು.ಮೇಯರ್‌ ಅವಧಿ ಎರಡೂವರೆ ವರ್ಷ:

2011 ಜನಗಣತಿ ಪ್ರಕಾರ ವಾರ್ಡ್ ರಚನೆ ಮಾಡಲಾಗುವುದು. 2011ರ ಜನಗಣತಿ ಪ್ರಕಾರ 20,000 ಜನಸಂಖ್ಯೆ ಆಧಾರವಾಗಿಟ್ಟುಕೊಂಡು ವಾರ್ಡ್‌ ರಚನೆ ಮಾಡಲಾಗುವುದು. ಜಿಬಿಎಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಕರೆಯಬೇಕು. ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಜಿಬಿಎ ಉಪಾಧ್ಯಕ್ಷನಾಗಿದ್ದು, ಕಾರ್ಯ ನಿರ್ವಾಹಕ ಸಮಿತಿಗೆ ಅಧ್ಯಕ್ಷರಾಗಿ ಇರುತ್ತೇನೆ. ಮೇಯರ್‌ ಅವಧಿ ಒಂದು ವರ್ಷ ಬದಲಿಗೆ ಎರಡೂವರೆ ವರ್ಷ ಇರಲಿದೆ ಎಂದು ಹೇಳಿದರು.

ಒಂದೇ ರೀತಿಯ ಕಟ್ಟಡ,

ವಿನ್ಯಾಸಕ್ಕೆ ಆಹ್ವಾನಐದು ಪಾಲಿಕೆಗಳಿಗೂ ಒಂದೇ ರೀತಿಯ ಭವ್ಯ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅತ್ಯುತ್ತಮ ವಾಸ್ತುಶಿಲ್ಪ ವಿನ್ಯಾಸದ ಸಿದ್ಧತೆಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ತಮ್ಮ ಸಲಹೆ ಹಾಗೂ ವಿನ್ಯಾಸ ಕಳುಹಿಸಬಹುದು. ಅತ್ಯುತ್ತಮ ವಿನ್ಯಾಸಕ್ಕೆ 5 ಲಕ್ಷ ಬಹುಮಾನ ನೀಡಲು ಸೂಚಿಸಿದ್ದೇನೆ. ಇನ್ನು ಜಿಬಿಎ ಲೋಗೋಗಳಿಗೂ ಸಲಹೆ ನೀಡಲು ಅವಕಾಶ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದರು.

ಮುಂದಿನ ದಿನಗಳಲ್ಲಿ

ವ್ಯಾಪ್ತಿ ವಿಸ್ತರಣೆ: ಡಿಕೆಶಿ

ಮುಂದಿನ ದಿನಗಳಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದ್ದೇವೆ. ಕಾನೂನಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಆ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ. ಆಯಾ ಪಾಲಿಕೆಗಳು ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಿವೆ. ಈಗ ಹಾಲಿ ಇದ್ದ ಪಾಲಿಕೆ ವ್ಯಾಪ್ತಿಗೆ ಮಾತ್ರ ಜಿಬಿಎ ರಚಿಸಿ, ಐದು ಪಾಲಿಕೆ ಮಾಡಿದ್ದೇವೆ. ಆನೇಕಲ್ ಕ್ಷೇತ್ರಕ್ಕೆ ಸೇರಿದ್ದ ಒಂದು ವಾರ್ಡ್ ಬಿಟ್ಟುಹೋಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ ಎಂದು ಡಿಕೆಶಿ ತಿಳಿಸಿದರು.

ಯತೀಂದ್ರ ಬೆಂಗಳೂರು

ಮತದಾರ: ಡಿಸಿಎಂ ಸ್ಪಷ್ಟ

ಪ್ರಾಧಿಕಾರದ ಸದಸ್ಯರಾಗಿ ಯತೀಂದ್ರ ಸಿದ್ದರಾಮಯ್ಯ ಹಾಗೂ ನಸೀರ್ ಅಹ್ಮದ್ ಅವರ ನೇಮಕ ಯಾವ ಮಾನದಂಡದ ಮೇಲೆ ಆಗಿದೆ ಎಂಬ ಪ್ರಶ್ನೆಗೆ, ‘ಬೆಂಗಳೂರು ನಗರದಲ್ಲಿ ಮತದಾರರಾಗಿರುವವರು, ಇಲ್ಲಿನ ಸಂಸ್ಥೆಗಳಿಂದ ಆರಿಸಿರುವವರು ಆಯ್ಕೆಯಾಗಿದ್ದಾರೆ. ಯತೀಂದ್ರ ಅವರ ಮತ ಬೆಂಗಳೂರಿನಲ್ಲಿ ಇರಬಹುದು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ವಾಸಿಸುವ, ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವವರು ಇಲ್ಲಿ ಸದಸ್ಯರಾಗಿರುತ್ತಾರೆ’ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ