ಮಂಡ್ಯದಲ್ಲಿ ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ: ಎಚ್.ಎಸ್.ಮಂಜು ಆರೋಪ

KannadaprabhaNewsNetwork | Published : Mar 12, 2024 2:03 AM

ಸಾರಾಂಶ

ತೆರಿಗೆ ಸಂಗ್ರಹಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಕಳೆದ ಬಾರಿ ಸಭೆಯಲ್ಲಿ ಸೂಚಿಸದಂತೆ ಈ ವೇಳೆಗೆ ಕಾರ್ಯರೂಪಕ್ಕೆ ತಂದಿದ್ದರೆ ನಮಗೊಂದು ಸ್ಪಷ್ಟ ಚಿತ್ರಣ ಸಿಗುತ್ತಿತ್ತು. ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡರೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆಂದು ನಿರೀಕ್ಷಿಸಲಾಗದು.

ಕನ್ನಡಪ್ರಭ ವಾರ್ತೆ ಮಂಡ್ಯನಗರಸಭೆಯಿಂದ ತೆರಿಗೆ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿಲ್ಲ. ಕಳೆದ ಸಾಲಿನಲ್ಲಿ ದಂಡವನ್ನು ಹೊರತುಪಡಿಸಿದರೆ ಶೇ.೬೦ರಷ್ಟು ತೆರಿಗೆ ಸಂಗ್ರಹವೂ ಆಗಿಲ್ಲ. ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹಣೆಯಲ್ಲೂ ತೀವ್ರ ಹಿನ್ನಡೆಯಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಮತ್ತು ಸದಸ್ಯ ಎಚ್.ಎಸ್.ಮಂಜು ಆರೋಪಿಸಿದರು.

ಸೋಮವಾರ ಧರಣಪ್ಪ ಸಭಾಂಗಣದಲ್ಲಿ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿ, ಆಸ್ತಿ ತೆರಿಗೆ ಸಮರ್ಪಕವಾಗಿ ನಡೆಯದೆ ನಗರಸಭೆ ಆದಾಯ ಕುಂಠಿತಗೊಂಡಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಉದ್ಯಮದಾರರು ಉದ್ದಿಮೆ ಶುಲ್ಕ ಕಟ್ಟಲು ಸಿದ್ಧರಿದ್ದರೂ ಸಂಗ್ರಹಿಸುವವರೇ ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಸ್ತ್ರೀಶಕ್ತಿ ಸಂಘದವರನ್ನು ನಿಯೋಜಿಸಿ:

ನಾನು ಕಳೆದ ಬಾರಿಯ ಸಭೆಯಲ್ಲೇ ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹಕ್ಕೆ ಸ್ತ್ರೀಶಕ್ತಿ ಸಂಘದವರನ್ನು ನಿಯೋಜಿಸಿಕೊಳ್ಳುವಂತೆ ಆಯುಕ್ತರಿಗೆ ತಿಳಿಸಿದ್ದೆ. ಅವರು ಆ ಬಗ್ಗೆ ಆಸಕ್ತಿ ವಹಿಸಿಲ್ಲ. ನಾನು ಮಂಗಳೂರಿನಲ್ಲಿದ್ದ ಮಾಡಿದ್ದ ಈ ಪ್ರಯೋಗ ಯಶಸ್ವಿಯಾಗಿದೆ. ಪ್ರಾಯೋಗಿಕವಾಗಿ ಮೂರ್ನಾಲ್ಕು ವಾರ್ಡ್‌ಗಳಲ್ಲಿ ಸ್ತ್ರೀಶಕ್ತಿ ಸಂಘದವರನ್ನು ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹಿಸಲು ನಿಯೋಜಿಸಿ. ಅವರು ಸಂಗ್ರಹಿಸುವ ಒಟ್ಟು ಮೊತ್ತಕ್ಕೆ ಅನುಗುಣವಾಗಿ ಶೇಕಡಾವಾರು ಕಮಿಷನ್ ಹಣವನ್ನು ನಿಗದಿಪಡಿಸಿ. ಇದು ಯಶಸ್ವಿಯಾದಲ್ಲಿ ಅದನ್ನು ಎಲ್ಲಾ ವಾರ್ಡ್‌ಗಳಿಗೂ ವಿಸ್ತರಿಸುವಂತೆ ಸಲಹೆ ನೀಡಿದರು.

ತೆರಿಗೆ ಸಂಗ್ರಹಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಕಳೆದ ಬಾರಿ ಸಭೆಯಲ್ಲಿ ಸೂಚಿಸದಂತೆ ಈ ವೇಳೆಗೆ ಕಾರ್ಯರೂಪಕ್ಕೆ ತಂದಿದ್ದರೆ ನಮಗೊಂದು ಸ್ಪಷ್ಟ ಚಿತ್ರಣ ಸಿಗುತ್ತಿತ್ತು. ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡರೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆಂದು ನಿರೀಕ್ಷಿಸಲಾಗದು. ಅದಕ್ಕಾಗಿ ಸ್ತ್ರೀಶಕ್ತಿ ಸಂಘದವರನ್ನು ಈಗಲಾದರೂ ಕರೆಸಿಕೊಂಡು ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹಣೆಗೆ ನಿಯೋಜಿಸುವಂತೆ ತಿಳಿಸಿದರು.

ತರಕಾರಿ ಮಾರುಕಟ್ಟೆಗೆ ೨ ಕೋಟಿ ರು. ಹೆಚ್ಚು ಅನುದಾನವೇಕೆ?

ತರಕಾರಿ ಮಾರುಕಟ್ಟೆ ಕಾಮಗಾರಿಯನ್ನು ೮ ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಎರಡು ಹಂತದಲ್ಲಿ ಅನುಮೋದನೆ ನೀಡುವಾಗಲೂ ರಸ್ತೆ, ಚರಂಡಿ, ಒಳಚರಂಡಿಯನ್ನು ಸೇರಿಸಲಾಗಿದೆ. ಇದೀಗ ಮತ್ತೆ ರಸ್ತೆ, ಚರಂಡಿ, ಒಳಚರಂಡಿಗೆ ೨ ಕೋಟಿ ರು. ಹೆಚ್ಚುವರಿ ಅನುದಾನ ನಿಗದಿಪಡಿಸಿರುವುದು ಸದಸ್ಯರಿಗೆ ಅನುಮಾನ ಮೂಡುವಂತೆ ಮಾಡಿದ್ದು ಇದರ ಬಗ್ಗೆ ಸ್ಥಳಪರಿಶೀಲನೆ ನಡೆಸಿ ತನಿಖೆಗೆ ಒಳಪಡಿಸುವಂತೆ ಸದಸ್ಯ ಎಚ್.ಎಸ್.ಮಂಜು ಆಗ್ರಹಿಸಿದರು.

ನಗರಸಭೆ ಅಧಿಕಾರಿಗಳು ಸದಸ್ಯರ ಜೊತೆಗೆ ಶಾಸಕರು, ಅಧ್ಯಕ್ಷರನ್ನೂ ದಾರಿತಪ್ಪಿಸುತ್ತಿದ್ದಾರೆ. ಮೊದಲ ಅಂದಾಜುಪಟ್ಟಿಯಲ್ಲೇ ರಸ್ತೆ, ಚರಂಡಿ, ಒಳಚರಂಡಿ ಸೇರಿದ್ದರೂ ಅದನ್ನು ಏಕೆ ನಿರ್ಮಿಸಲಿಲ್ಲ. ವಿದ್ಯುತ್ ಕಾಮಗಾರಿಗಳನ್ನು ಸೇರಿಸದೆ ಬಿಟ್ಟಿದ್ದೇಕೆ. ಅಧಿಕಾರಿಗಳ ನಡೆ ಸಂಶಯಾಸ್ಪದವಾಗಿದ್ದು ಮಾರುಕಟ್ಟೆ ಕಾಮಗಾರಿ ವಿಳಂಬಕ್ಕೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುವಂತೆ ಒತ್ತಾಯಿಸಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ತರಕಾರಿ ಮಾರುಕಟ್ಟೆಯಲ್ಲಿ ೧೭೫ ಮಂದಿ ಇದ್ದು, ೧೨೫ ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ ೫೦ ಮಂದಿಗೆ ಹಾಲಿ ಎಪಿಎಂಸಿ ಮಾರುಕಟ್ಟೆಯಲ್ಲೇ ವ್ಯಾಪಾರ ನಡೆಸುವುದಕ್ಕೆ ಅವಕಾಶ ಕಲ್ಪಿಸೋಣ ಎಂದರು.

Share this article