ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹ ಮಹಿಳೆಯರ ಹೆಗಲಿಗೆ

KannadaprabhaNewsNetwork | Published : Jul 4, 2024 1:10 AM

ಸಾರಾಂಶ

ಜಿಲ್ಲೆಗಳಲ್ಲಿನ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತೆರಿಗೆ ಸಂಗ್ರಹದ ಜವಾಬ್ದಾರಿ ವಹಿಸಿಕೊಳ್ಳುವ ಕುರಿತಂತೆ ಅಗತ್ಯ ಮಾಹಿತಿ ಮತ್ತು ಅನುಮತಿಯನ್ನು ತಮ್ಮ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳಿಂದ ಪಡೆಯಬಹುದು.

ಕಾರವಾರ: ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿನ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ವಸೂಲಿ, ನೀರಿನ ಬಳಕೆ ಶುಲ್ಕದ ಬಾಕಿ ಸಾವಿರಾರು ಕೋಟಿ ರು.ಗಳನ್ನು ವಸೂಲಿ ಮಾಡಲು ರಾಜ್ಯದಲ್ಲಿನ ಮಹಿಳಾ ಸ್ವಹಾಯ ಸಂಘಗಳ ಸೇವೆ ಪಡೆಯಲು ನಿರ್ಧರಿಸಿದೆ.ಬೆಂಗಳೂರು ನಗರವನ್ನು ಹೊರತುಪಡಿಸಿ , 315 ನಗರ ಸ್ಥಳೀಯ ಸಂಸ್ಥೆಗಳಿವೆ. ಅವುಗಳಲ್ಲಿ 10 ಮಹಾನಗರ ಪಾಲಿಕೆಗಳು, 61 ನಗರಸಭೆಗಳು, 126 ಪುರಸಭೆಗಳು, 114 ಪಟ್ಟಣ ಪಂಚಾಯಿತಿಗಳು ಮತ್ತು 4 ನೋಟಿಫೈಡ್ ಪ್ರದೇಶಗಳಿವೆ.2025ರ ಅಂತ್ಯಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಜನಸಂಖ್ಯೆ ಸುಮಾರು 202.58 ಲಕ್ಷವಾಗಲಿದೆ. ಸುಮಾರು 51.51 ಲಕ್ಷ ಮನೆಗಳನ್ನು ಒಳಗೊಂಡಿವೆ. ಪ್ರಸ್ತುತ 30.05 ಲಕ್ಷ ಮನೆಗಳಿಗೆ ಈಗಾಗಲೇ ಕುಡಿಯುವ ನೀರಿನ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಅವಶ್ಯಕ ಕುಡಿಯುವ ನೀರು ಸರಬರಾಜು ಮಾಡುವುದರ ಜತೆಗೆ ಬಳಕೆಗೆ ತಕ್ಕಂತೆ ನೀರಿನ ಶುಲ್ಕ ಸಂಗ್ರಹ ಮಾಡುವ ಅನಿವಾರ್ಯತೆ ಇದೆ.

ಪ್ರಸಕ್ತ ಸಾಲಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಆಸ್ತಿಗಳ ಮೇಲೆ ವಸೂಲಿ ಮಾಡಬೇಕಾದ ಆಸ್ತಿ ತೆರಿಗೆ ಮೊತ್ತ ₹1860.17 ಕೋಟಿ ಆಗಿದೆ. ಬಾಕಿ ಇರುವ ನೀರಿನ ಬಳಕೆ ಶುಲ್ಕ ₹1308.35 ಕೋಟಿ ಸೇರಿದಂತೆ ಒಟ್ಟು ₹3,168.52 ಕೋಟಿಗಳನ್ನು ವಸೂಲಿ ಮಾಡುವ ಅವಶ್ಯಕತೆಯಿದೆ. ಈ ಶುಲ್ಕವನ್ನು ವಸೂಲಿ ಮಾಡಲು ರಾಜ್ಯಾದ್ಯಂತ ಸ್ಥಳೀಯ ಮಹಿಳಾ ಸ್ವ ಸಹಾಯ ಗುಂಪುಗಳ ಸೇವೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರಸ್ತುತ ವಾರ್ಷಿಕ ಬೇಡಿಕೆ ಸಹಿತ ವಸೂಲಿ ಮಾಡುವ ಜವಾಬ್ದಾರಿಯ ಜತೆಗೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮತ್ತು ವಾರ್ಷಿಕ ಬೇಡಿಕೆಗಳಿಗನುಗುಣವಾಗಿ ಆಸ್ತಿಗಳಿಂದ ವಸೂಲಿ ಮಾಡಬೇಕಾದ ಆಸ್ತಿ ತೆರಿಗೆಯನ್ನು ಸಮರ್ಪಕ ವಸೂಲಿ ಮಾಡುವ ಹೊಣೆ ನೀಡಲಾಗಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮಹಿಳಾ ಪ್ರತಿನಿಧಿಸುವ ಸ್ವ- ಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ಸ್ತ್ರೀ-ಶಕ್ತಿ ಗುಂಪುಗಳಿಂದ ಸೇವೆಯನ್ನು ಬಳಸಿಕೊಂಡು, ಪಸ್ತುತ ವಾರ್ಷಿಕ ಬೇಡಿಕೆ ಸಹಿತ ಬಾಕಿ ಸಂಗ್ರಹ, ವಸೂಲಾತಿ ಮಾಡುವ ಮೊತ್ತದ ಶೇ. 5ರಷ್ಟನ್ನು ಈ ಸ್ವ ಸಹಾಯ ಗುಂಪುಗಳಿಗೆ ಪ್ರೋತ್ಸಾಹಧನ ರೂಪದಲ್ಲಿ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ.

ರಾಜ್ಯಾದ್ಯಂತ ತೆರಿಗೆ ವಸೂಲಾತಿಗಾಗಿ ಜಿಲ್ಲಾವಾರು ತಂಡಗಳನ್ನು ರಚಿಸಿ ಬಾಕಿ ಇರುವ ಆಸ್ತಿ ತೆರಿಗೆ ವಸೂಲಾತಿ ಮಾಡಿರುವ ಮಾಹಿತಿ ಜತೆಗೆ ನೀರಿನ ಬಳಕೆ ಶುಲ್ಕ ವಸೂಲಾತಿ ಮಾಡಿರುವ ಮಾಹಿತಿಯೊಂದಿಗೆ, ಪ್ರತಿ ತಿಂಗಳು ಕೈಗೊಂಡ ಪ್ರಗತಿಯ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು. ಈ ಜವಾಬ್ದಾರಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳಿಗೆ ನೀಡಲಾಗಿದೆ. ಜಿಲ್ಲೆಗಳಲ್ಲಿನ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತೆರಿಗೆ ಸಂಗ್ರಹದ ಜವಾಬ್ದಾರಿ ವಹಿಸಿಕೊಳ್ಳುವ ಕುರಿತಂತೆ ಅಗತ್ಯ ಮಾಹಿತಿ ಮತ್ತು ಅನುಮತಿಯನ್ನು ತಮ್ಮ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳಿಂದ ಪಡೆಯಬಹುದು.ಮಹಿಳಾ ಸಬಲೀಕರಣ: ಇದು ಸ್ವಸಹಾಯ ಸಂಘಗಳ ಬಲವರ್ಧನೆಗೆ ಸಹಕಾರಿಯಾಗಲಿದ್ದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ಕಾರಣವಾಗಲಿದೆ. ಜಿಲ್ಲೆಯಲ್ಲಿ ಈ ಕಾರ್ಯವನ್ನು ತಕ್ಷಣದಿಂದಲೇ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲೆಯ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರ ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

Share this article