ಹಾನಗಲ್ಲ ತಾಲೂಕಿನಲ್ಲಿ ವಿದ್ಯುತ್ ಒವರ್ ಲೋಡ್‌ನಿಂದ ಸುಡುತ್ತಿರುವ ಟಿಸಿ, ರೈತರು ಹೈರಾಣ

KannadaprabhaNewsNetwork | Published : Mar 17, 2025 12:33 AM

ಸಾರಾಂಶ

ಫೆಬ್ರವರಿ ತಿಂಗಳಿನಿಂದ ಅತಿ ಹೆಚ್ಚು ಟಿಸಿಗಳು ಸುಟ್ಟು, ಸಕಾಲಿಕವಾಗಿ ಟಿಸಿ ಸಿಗದೇ ನೀರಿಲ್ಲದೆ ಬೆಳೆಯುತ್ತಿರುವ ಪೈರು ಒಣಗಲು ಕಾರಣವಾಗುತ್ತಿದೆ. ಇದು ಕೃಷಿಕ ಹಾಗೂ ಹೆಸ್ಕಾಂ ನಡುವೆ ಹಲವು ರೀತಿ ಘರ್ಷಣೆಗೆ ಕಾರಣವೂ ಆಗುತ್ತಿದೆ.

ಮಾರುತಿ ಶಿಡ್ಲಾಪುರಹಾನಗಲ್ಲ: ಟಿಸಿ ಮ್ಯಾಲಿಂದ ಮ್ಯಾಲೆ ಸುಡತಾವರಿ, ಆಫೀಸಿಗೆ ಓಡ್ಯಾಡಿ ಸಾಕಾಗೇತಿ. ಟಿಸಿ ಸುಟ್ರ ಕೈಗೆ ಬಂದ ಬೆಳಿ ಬಾಯಿಗೆ ಬರದಂಗ ಆಕೇತಿ. ನಮಗಂತೂ ಏನೂ ತೋಚತಾನೇ ಇಲ್ಲ. ಸಿಟ್ಟು ಮಾಡಕೊಂಡರೂ ಪ್ರಯೋಜನ ಇಲ್ರಿ. ಬಂದಿದ್ದ ಅನುಭವಿಸೋದ ಅಷ್ಟ ನೋಡ್ರಿ...- ಇದು ಲಕಮಾಪುರ ಗ್ರಾಮದ ರೈತ ಭೀಮಪ್ಪ ಅಂಬಿಗೇರ ಅವರ ಅಳಲು. ತಾಲೂಕಿನಲ್ಲಿ ಒಂದು ವರ್ಷದ ಅವಧಿಯಲ್ಲಿ 1300ಕ್ಕೂ ಅಧಿಕ ಟಿಸಿಗಳು ಸುಟ್ಟಿವೆ. ಫೆಬ್ರವರಿಯಿಂದ ಮೇ ವರೆಗೆ ಶೇ. 70ರಷ್ಟು ಟಿಸಿ ಸುಡುತ್ತವೆ. ಒವರ್‌ ಲೋಡ್‌ ಹಾಗೂ ಅನಧಿಕೃತ ಪಂಪಸೆಟ್‌ಗಳೇ ಇದಕ್ಕೆ ಕಾರಣ. ಬಿರು ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ತಾಲೂಕಿನ ಹೆಸ್ಕಾಂ ಹೈರಾಣಾಗಿದೆ. ರೈತರಿಗೆ ವಿದ್ಯುತ್ ಗೋಳು, ಬೆಳೆ ಒಣಗುತ್ತಿರುವುದಕ್ಕೆ ಪರಿಹಾರವಿಲ್ಲದಾಗಿದೆ.

ತಾಲೂಕಿನಲ್ಲಿ ಧರ್ಮಾ ಜಲಾಶಯ ಬಿಟ್ಟರ ಬೇಸಿಗೆಗೆ ಯಾವುದೇ ಜಲಮೂಲಗಳಿಲ್ಲ. ಅಲ್ಲಲ್ಲಿ ಕೆಲವು ಕೆರೆಗಳಲ್ಲಿ ನೀರಿದ್ದರೂ ಪೂರ್ಣ ನೀರಾವರಿ ಸಾಧ್ಯವಿಲ್ಲ. ತಾಲೂಕಿನ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಕೊಳವೆ ಬಾವಿಗಳನ್ನೇ ಅವಲಂಬಿಸಿ ಬೇಸಿಗೆ ನೀರಾವರಿಗೆ ಮುಂದಾಗುತ್ತಾರೆ. ಅದರಲ್ಲೂ ಕಡಿಮೆ ನೀರನ್ನಾಶ್ರಯಿಸಿದ ಗೋವಿನಜೋಳವೇ ಪ್ರಮುಖ ಬೆಳೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಯಾದ ಅಡಕೆಯತ್ತ ಕೃಷಿಕರು ವಾಲಿದ್ದಾರೆ. ಆದರೆ ಇವೆಲ್ಲಕ್ಕೂ ನೀರಿಗಾಗಿ ವಿದ್ಯುತ್ತನ್ನೆ ಅವಲಂಬಿಸಿದ್ದಾರೆ.

ಫೆಬ್ರವರಿ ತಿಂಗಳಿನಿಂದ ಅತಿ ಹೆಚ್ಚು ಟಿಸಿಗಳು ಸುಟ್ಟು, ಸಕಾಲಿಕವಾಗಿ ಟಿಸಿ ಸಿಗದೇ ನೀರಿಲ್ಲದೆ ಬೆಳೆಯುತ್ತಿರುವ ಪೈರು ಒಣಗಲು ಕಾರಣವಾಗುತ್ತಿದೆ. ಇದು ಕೃಷಿಕ ಹಾಗೂ ಹೆಸ್ಕಾಂ ನಡುವೆ ಹಲವು ರೀತಿ ಘರ್ಷಣೆಗೆ ಕಾರಣವೂ ಆಗುತ್ತಿದೆ. ತಾಪಂ ಕೆಡಿಪಿ ಸಭೆಯಲ್ಲಿ ಶಾಸಕರ ಸಮ್ಮುಖದಲ್ಲಿಯೂ ರೈತರು ಹೆಸ್ಕಾಂ ಅಧಿಕಾರಿಗಳನ್ನೊಳಗೊಂಡು ರೈತರು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಯತ್ನವನ್ನೂ ನಡೆಸಿದರು.ತಾಲೂಕಿನಲ್ಲಿ 22 ಸಾವಿರ ಅಧಿಕೃತ ಕೊಳವೆ ಬಾವಿಗಳಿವೆ. ಅನಧಿಕೃತ ಕೊಳವೆ ಬಾವಿಗಳ ಸಂಖ್ಯೆಯೂ 12 ಸಾವಿರದಷ್ಟಿದೆ. ಇವನ್ನೆಲ್ಲ ನಿರ್ವಹಿಸಲು ತಾಲೂಕಿನಲ್ಲಿ 33 ಕೆವಿಯ 8, 110 ಕೆವಿಯ 2 ವಿದ್ಯುತ್ ವಿತರಣಾ ಕೇಂದ್ರಗಳಿವೆ. ಇಲ್ಲಿಂದ ವಿದ್ಯುತ್ ನಿರ್ವಹಣೆಗೆ 5120 ಟಿಸಿಗಳಿವೆ. ಆದರೆ ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ ಟಿಸಿಗಳ ಸಾಮರ್ಥ್ಯದ ಇನ್ನೂ ಅರ್ಧಕ್ಕೂ ಹೆಚ್ಚು ಕೊಳವೆ ಬಾವಿಗಳಿರುವುದು ಹಾಗೂ ವಿದ್ಯುತ್ ವೋಲ್ಟೇಜ್ ಕಡಿತವಾಗುವುದರಿಂದ ಟಿಸಿಗಳು ಅತಿ ಹೆಚ್ಚು ಸುಡುತ್ತಿರುವುದು ಸಮಸ್ಯೆಯಾಗಿದೆ. ಕೆಲವು ಸಂದರ್ಭದಲ್ಲಿ ಹೊಸ ಟಿಸಿ ಹಾಕಿದ ಕೆಲವೇ ಗಂಟೆಗಳಲ್ಲಿ ಮತ್ತೆ ಅದೇ ಟಿಸಿ ಸುಡುತ್ತಿರುವುದು ಹೆಸ್ಕಾಂ ಅಧಿಕಾರಿಗಳಿಗೆ ತಲೆನೋವಾಗಿದೆ.ವಿದ್ಯುತ್ ವೋಲ್ಟೇಜ್ ಒತ್ತಡ ತಪ್ಪಿಸಲು ಬಮ್ಮನಹಳ್ಳಿ ಹಾಗೂ ಬೆಳಗಾಲಪೇಟೆ ವಿದ್ಯುತ್ ವಿತರಣಾ ಕೇಂದ್ರಗಳ ಉನ್ನತೀಕರಣದ ಕಾರ್ಯ ನಡೆದಿದೆ. ಅಲ್ಲದೆ ಗೊಂದಿ, ಕೂಸನೂರಿನಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೆಂದ್ರಗಳ ಸ್ಥಾಪನೆಗೂ ಯತ್ನ ನಡೆದಿದೆ. ಆದರೆ ಇವೆಲ್ಲ ಸಕಾಲಿಕವಾಗಿ ಕಾಮಗಾರಿ ನಡೆದರೆ ಈ ಟಿಸಿ ಸುಡುವ ಹಾಗೂ ಅದರಿಂದಾಗುವ ಸಮಸ್ಯೆಗಳನ್ನು ತಡೆಯಬಹುದು. ಹಾನಗಲ್ಲಿನಲ್ಲಿಯೇ ಹೆಸ್ಕಾಂನಿಂದ ಸುಟ್ಟ ಟಿಸಿಗಳನ್ನು ಮತ್ತೆ ಸಿದ್ಧಗೊಳಿಸುವ ಕಾರ್ಯವೂ ನಡೆದಿದೆ. ಇಲ್ಲಿ 3 ದಿನಕ್ಕೆ 12ರಿಂದ 15 ಟಿಸಿಗಳನ್ನು ಸಿದ್ಧತೆ ಮಾಡಿ ಕೊಡಬಹುದು. ಇನ್ನು ಹಾವೇರಿಯಿಂದಲೂ ಟಿಸಿ ಬರುತ್ತವೆ. ಆದರೆ ಇದೆಲ್ಲವನ್ನೂ ಮೀರಿ ಟಿಸಿ ಸುಡುತ್ತಿರುವುದರಿಂದ ರೈತರು ಹೆಸ್ಕಾಂ ಕಚೇರಿಗೆ ಅಲೆದಾಡುವಂತಾಗಿದೆ.

ಪರಿಹಾರ ಸಾಧ್ಯ: ಶಕ್ತಿಮೀರಿ ಟಿಸಿಗಳನ್ನು ಹೊಂದಿಸಿ ಕೊಡುತ್ತಿದ್ದೇವೆ. ವಿದ್ಯುತ್ ವೋಲ್ಟೇಜ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಟಿಸಿ ಹೆಚ್ಚು ಸುಡುತ್ತಿರುವುದರಿಂದ ಬೇಡಿಕೆ ಪೂರೈಸಲು ವಿಳಂಬವಾಗುತ್ತಿದೆ. ರೈತರನ್ನೂ ಸಮಾಧಾನ ಮಾಡಿ ಟಿಸಿ ಹೊಂದಿಸಿ ಕೊಡುತ್ತಿದ್ದೇವೆ. ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಯಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಹಾನಗಲ್ಲನ ಹೆಸ್ಕಾಂ, ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್ ಸಾಗರ ಗಣೇಶಗುಡಿ ತಿಳಿಸಿದರು.ಸ್ಪಂದಿಸುತ್ತೇನೆ: ಹೊಸದಾಗಿ ಹಾನಗಲ್ಲಿಗೆ ಬಂದಿದ್ದೇನೆ. ಎರಡ್ಮೂರು ದಿನಗಳಲ್ಲಿ ಇಲ್ಲಿಯ ವಿದ್ಯುತ್ ಸಮಸ್ಯೆಗಳನ್ನು ಅಭ್ಯಸಿಸಿ ಖಂಡಿತ ಪರಿಹಾರಕ್ಕೆ ಮುಂದಾಗುತ್ತೇನೆ. ಗ್ರಾಹಕರ ಸಹಕಾರವೂ ಬೇಕು. ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಹೆಸ್ಕಾಂನ ಎಇಇ ವಿ.ಎಸ್. ಮರಿಗೌಡರ ತಿಳಿಸಿದರು.

Share this article