ಕನ್ನಡಪ್ರಭ ವಾರ್ತೆ ಹೊಸದುರ್ಗ
ಅಧ್ಯಾಪಕರು ಶಾಲಾ ಅವಧಿಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿ ಶ್ರೀಮಠದಲ್ಲಿ ಶನಿವಾರ ಮಕ್ಕಳ ಶಿಕ್ಷಣದಲ್ಲಿ ಯಾವುದೇ ಕುಂದುಕೊರತೆಯಾಗದಂತೆ ನೋಡಿಕೊಳ್ಳಲು ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಅಧ್ಯಾಪಕರ ಸಭೆ ನಡೆಸಿ ಮಾತನಾಡಿದರು.
ಪ್ರತಿ ತಂದೆ ತಾಯಿಗೆ ತನ್ನ ಮಗು ಓದಿ ಹೆಚ್ಚುಅಂಕ ಪಡೆಯಬೇಕು ಎಂಬ ಆಸೆ ಇರುತ್ತದೆ. ಬಹಳಷ್ಟು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ. ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಿ, ಶಕ್ತಿಮೀರಿ ಮಕ್ಕಳ ವಿದ್ಯಾಭ್ಯಾಸ ಉತ್ತಮ ರೀತಿಯಲ್ಲಿ ಮಾಡಬೇಕೆಂಬ ಮಹದಾಸೆ ಹೊಂದಿದ್ದಾರೆ. ಸಾಣೇಹಳ್ಳಿಯಲ್ಲಿ ಕಲಿತ ಮಕ್ಕಳು ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಬದುಕಬಲ್ಲರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿದೆ. ಕಾರಣ ಇಲ್ಲಿ ದೊರೆಯುವ ಸಂಸ್ಕಾರ ಮತ್ತು ಸಂಸ್ಕೃತಿ ಶಿಕ್ಷಣದಿಂದ ಹಾಗಾಗಿ ಪಟ್ಟಣ ಪ್ರದೇಶದಿಂದ ಇಂತಹ ಹಳ್ಳಿಗೆ ಬಂದು ಶಾಲೆಗೆ ಸೇರಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.ಶಾಲಾ ಶಿಕ್ಷಣದ ಬುನಾದಿ ಸರಿಯಾಗಿದೆಯೇ ಎಂಬುದನ್ನು ತಿಳಿಯಲು ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಿರುವ ಒಂದು ಮಾನದಂಡ ಪರೀಕ್ಷೆಗಳು, ಒಂದನೇ ತರಗತಿಯಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳ ಕಲಿಯುವಿಕೆ ಮಟ್ಟ ಇಳಿಮುಖವಾಗುತ್ತಿದೆ. ಆದ್ದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ಎಲ್ಲ ಅಧ್ಯಾಪಕರು ತೆಗೆದುಕೊಂಡು ಮಕ್ಕಳ ಕಲಿಕೆ ಸುಧಾರಿಸಬೇಕು. ಪರೀಕ್ಷಾ ವಿಧಾನ ಬದಲಾಯಿಸಿ ಅಚ್ಚುಕಟ್ಟಾಗಿ ಬಿಗಿಯಾಗಿ ನಡೆಸಬೇಕು. ಆಗ ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಯುವುದು. ಪ್ರತಿಯೊಬ್ಬ ಶಿಕ್ಷಕರು ಸಮಯ ಪಾಲನೆ, ಶಿಸ್ತು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ಶಿಕ್ಷಕರು ಇಲ್ಲಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ಅವರ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕು. ಆಗ ಮಾತ್ರ ಶಿಕ್ಷಣ ಸುಧಾರಣೆ ಆಗಲಿಕ್ಕೆ ಸಾಧ್ಯ ಎಂದರು.
ಸಭೆಯಲ್ಲಿ ಉಭಯ ಶಾಲೆ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.