ನಾಳೆಯಿಂದ ಧಾರವಾಡದಲ್ಲಿ ಶಿಕ್ಷಕರ ಸಮಾವೇಶ

KannadaprabhaNewsNetwork |  
Published : Feb 23, 2024, 01:46 AM IST
22ಡಿಡಬ್ಲೂಡಿ6ಸ್ವಾಮಿ ವಿಜಯಾನಂದ ಸರಸ್ವತಿ | Kannada Prabha

ಸಾರಾಂಶ

ಭಗವಾನ್ ಶ್ರೀ ರಾಮಕೃಷ್ಣ ಮಂದಿರದ 19ನೇ ವಾರ್ಷಿಕೋತ್ಸವ ಅಂಗವಾಗಿ ಫೆ. 24ರಿಂದ ಮೂರು ದಿನಗಳ ಕಾಲ ಶಿಕ್ಷಕರ ಸಮಾವೇಶ, ಭಕ್ತ ಸಮ್ಮೇಳನ, ದುರ್ಗಾ ಪೂಜೆ ಹಾಗೂ ಯುವ ಸಮಾವೇಶ ಧಾರವಾಡದಲ್ಲಿ ನಡೆಯಲಿದೆ.

ಧಾರವಾಡ: ರಾಮಕೃಷ್ಣ ವಿವೇಕಾನಂದ ಆಶ್ರಮವು ಭಗವಾನ್ ಶ್ರೀ ರಾಮಕೃಷ್ಣ ಮಂದಿರದ 19ನೇ ವಾರ್ಷಿಕೋತ್ಸವ ಅಂಗವಾಗಿ ಫೆ. 24ರಿಂದ ಮೂರು ದಿನಗಳ ಕಾಲ ಶಿಕ್ಷಕರ ಸಮಾವೇಶ, ಭಕ್ತ ಸಮ್ಮೇಳನ, ದುರ್ಗಾ ಪೂಜೆ ಹಾಗೂ ಯುವ ಸಮಾವೇಶ ಆಯೋಜಿಸಿದೆ ಎಂದು ಸ್ವಾಮಿ ವಿಜಯಾನಂದ ಸರಸ್ವತಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಚೆನ್ನಬಸವೇಶ್ವರ ನಗರದಲ್ಲಿರುವ ಆಶ್ರಮದ ಆವರಣದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಫೆ. 24ರಂದು ನಡೆಯಲಿರುವ ಶಿಕ್ಷಕರ ಸಮಾವೇಶದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಕರ ಕರ್ತವ್ಯ. ಮಕ್ಕಳ ಹಿತದೃಷ್ಟಿಯಿಂದ ನಿರ್ವಹಿಸಬೇಕಾದ ಜವಾಬ್ದಾರಿ ಮತ್ತು ಬೌದ್ಧಿಕ ಜ್ಞಾನಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಕಲಿಸುವ ಕುರಿತು ತರಬೇತಿ ನೀಡಲಾಗುವುದು. ಉದ್ಘಾಟನೆಯನ್ನು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ನೆರವೇರಿಸುವರು. ಸಂಜೆ ಭಕ್ತಿ ಸಂಗೀತವನ್ನು ಮೈಸೂರು ರಾಮಚಂದ್ರಾಚಾರ್ ನಡೆಸಿಕೊಡುವರು ಎಂದರು.

ಫೆ. 24ರಂದು ನಡೆಯಲಿರುವ ಭಕ್ತ ಸಮ್ಮೇಳನ ಹಾಗೂ ಜೀವಂತ ದುರ್ಗಾ ಪೂಜೆಯಲ್ಲಿ ಮಕ್ಕಳ ಪಾಲನೆ, ಬೆಳವಣಿಗೆ, ಶಿಕ್ಷಣ ಮತ್ತು ಅವರ ಉತ್ತಮ ಭವಿಷ್ಯದ ಬಗ್ಗೆ ಹೆತ್ತವರಲ್ಲಿ ಜಾಗೃತಿ ಉಂಟು ಮಾಡುವ ಜತೆಗೆ ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಸಲಹೆ-ಸೂಚನೆ ನೀಡಲಾಗುವುದು. ಕಲಬುರ್ಗಿ ವಿವೇಕಾನಂದ ಆಶ್ರಮದ ಸ್ವಾಮಿ ಮಹೇಶ್ವರಾನಂದ ಮಹಾರಾಜ್ ಸಾನ್ನಿಧ್ಯ ವಹಿಸುವರು. ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶ್ರೀಗಳು ಉದ್ಘಾಟಿಸುವರು.

ಫೆ. 26ರಂದು ಬೆಳಗ್ಗೆ 10ಕ್ಕೆ ಯುವ ಸಮಾವೇಶವು ರಾಣಿಬೆನ್ನೂರು ರಾಮಕೃಷ್ಣ ಆಶ್ರಮದ ಸ್ವಾಮಿ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಲಕ್ಷಣ ಉಪ್ಪಾರ, ವಿಜ್ಞಾನಿ ಡಾ. ಎಸ್.ಎಂ. ಶಿವಪ್ರಸಾದ ಉಪನ್ಯಾಸ ನೀಡಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಶಿಕ್ಷಕರು, ಭಕ್ತರು, ಸಾರ್ವಜನಿಕರು ಹಾಗೂ ಯುವ ಸಮೂಹ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದು ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೋಹನ ರಾಮದುರ್ಗ, ಆಶೋಕ, ಪಾಟೀಲ, ಸೌರಭ ಅಗಳಗಟ್ಟಿ, ಸುಭಾಸ ಗೌಡರ, ಚಂದ್ರಕಾಂತ ಪಾಟೀಲ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...