ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರ ಪರದಾಟ

KannadaprabhaNewsNetwork | Published : Jul 6, 2024 12:47 AM
Follow Us

ಸಾರಾಂಶ

ಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೂತನ ತಾಲೂಕುಗಳಲ್ಲಿನ ಆರ್ಎಂಎಸ್ಎ (ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ) ಪ್ರೌಢ ಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ರಾಜ್ಯಾದ್ಯಂತ ರಚನೆಯಾಗಿರುವ ನೂತನ ತಾಲೂಕುಗಳಲ್ಲಿ ಕೆಲವು ಕಡೆ ಡಿಡಿಒ ಕೋಡ್ ಮ್ಯಾಪಿಂಗ್ ಆಗದಿರುವುದರಿಂದ 2024-25ನೇ ಸಾಲಿನಲ್ಲಿ ಈ ಸಮಸ್ಯೆ ಎದುರಾಗಿದೆ. ಹಳೆ ತಾಲೂಕುಗಳಲ್ಲಿ ಆಗುತ್ತಿದ್ದ ಸಂಬಳದ ಲಿಸ್ಟ್ನಿಂದ ಹೊರ ತೆಗೆಯಲಾಗಿದ್ದು, ಹೊಸ ಡಿಡಿಒ ಕೋಡ್ನಲ್ಲಿ ಸೇರ್ಪಡೆ ಆಗದಿರುವುದರಿಂದ ಹಲವಾರು ಶಿಕ್ಷಕರು ಸಂಬಳಕ್ಕಾಗಿ ಪರದಾಡುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೂತನ ತಾಲೂಕುಗಳಲ್ಲಿನ ಆರ್‌ಎಂಎಸ್‌ಎ (ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ) ಪ್ರೌಢ ಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ರಾಜ್ಯಾದ್ಯಂತ ರಚನೆಯಾಗಿರುವ ನೂತನ ತಾಲೂಕುಗಳಲ್ಲಿ ಕೆಲವು ಕಡೆ ಡಿಡಿಒ ಕೋಡ್ ಮ್ಯಾಪಿಂಗ್ ಆಗದಿರುವುದರಿಂದ 2024-25ನೇ ಸಾಲಿನಲ್ಲಿ ಈ ಸಮಸ್ಯೆ ಎದುರಾಗಿದೆ. ಹಳೆ ತಾಲೂಕುಗಳಲ್ಲಿ ಆಗುತ್ತಿದ್ದ ಸಂಬಳದ ಲಿಸ್ಟ್‌ನಿಂದ ಹೊರ ತೆಗೆಯಲಾಗಿದ್ದು, ಹೊಸ ಡಿಡಿಒ ಕೋಡ್‌ನಲ್ಲಿ ಸೇರ್ಪಡೆ ಆಗದಿರುವುದರಿಂದ ಹಲವಾರು ಶಿಕ್ಷಕರು ಸಂಬಳಕ್ಕಾಗಿ ಪರದಾಡುತ್ತಿದ್ದಾರೆ.

ರಾಜ್ಯದ ವಿವಿಧೆಡೆ ಸಮಸ್ಯೆ:

ವಿಜಯಪುರ ಜಿಲ್ಲೆಯಲ್ಲಿ ರಚನೆಯಾದ ಆರು ತಾಲೂಕುಗಳಲ್ಲಿ ಡಿಡಿಒ ಸಮಸ್ಯೆ ಎದುರಾಗಿದೆ. ಜಿಲ್ಲೆಗೆ ಅಂದಾಜು ಐದೂವರೇ ಕೋಟಿ ರುಪಾಯಿ ವೇತನ ಬಿಡುಗಡೆ ಆಗಬೇಕಿದೆ. ಅದರಂತೆ ಕಲಬುರಗಿ ಜಿಲ್ಲೆಯಲ್ಲೂ ತೊಂದರೆಯಾಗಿದ್ದು, ಅಲ್ಲಿಯೂ ಐದೂವರೇ ಕೋಟಿ ವೇತನ ಪಾವತಿಯಾಗಬೇಕು. ಜೊತೆಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಭಾಗದಲ್ಲಿ ಒಂದೂವರೆ ಕೋಟಿ ವೇತನ ಬರಬೇಕಿದೆ. ಹೀಗೆ ಒಟ್ಟು ರಾಜ್ಯಾದ್ಯಂತ ಬೇರೆ ಬೇರೆ ತಾಲೂಕುಗಳಲ್ಲೂ ಆಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಒಟ್ಟು ₹58 ಕೋಟಿ ಹಣ ಆರ್‌ಎಂಎಸ್‌ಎ ಪ್ರೌಢಶಾಲಾ ಶಿಕ್ಷಕರ ವೇತನಕ್ಕಾಗಿ ಬರಬೇಕಿದೆ.

ವೇತನ ಆಗದಿರುವುದಕ್ಕೆ ಕಾರಣಗಳೇನು?:

ಹೊಸ ತಾಲೂಕುಗಳ ಆಡಳಿತದಲ್ಲಿ ಡಿಡಿಒ ಮ್ಯಾಪಿಂಗ್ ಆಗದಿರುವುದು, ತಾಪಂಗಳಲ್ಲಿ ಆಡಳಿತ ವ್ಯವಸ್ಥೆ ನಿರ್ವಹಣೆ ಆಗದಿರುವುದು. ಆಡಳಿತ ವ್ಯವಸ್ಥೆಯ ಕುಸಿತದಿಂದ ಸಮಸ್ಯೆ ಆಗಿದೆ. ಕೇಂದ್ರದಿಂದ ಎಸ್‌ಎಸ್‌ಕೆಗೆ ಬಂದ ಹಣ ಅಲ್ಲಿಂದ ಆರ್ಥಿಕ ಇಲಾಖೆಗೆ ಹೋಗಿ ಅಲ್ಲಿಂದ ಜಿಪಂಗೆ ಹೋಗುತ್ತದೆ. ನಂತರ ಅಲ್ಲಿಂದ ತಾಪಂಗೆ ಬರುತ್ತದೆ. ಹೀಗೆ ಎಲ್ಲ ಹಂತಗಳು ಮುಗಿದ ಬಳಿಕ ಖಜಾನೆ ಇಲಾಖೆಗೆ ಬಂದಮೇಲೆ ಮಾತ್ರ ಸಂಬಳ ಆಗುತ್ತದೆ. ಆದರೆ ತಾಪಂನಿಂದ ಬಿಇಒ ಕಚೇರಿಗೆ ಸಮನ್ವಯತೆ ಕೊರತೆ ಹಾಗೂ ಡಿಡಿಪಿಐ ಕಚೇರಿಯಿಂದ ಜಿಪಂಗೆ ಸಮನ್ವಯತೆ ಕೊರತೆಯಿಂದ ವೇತನ ತಡೆಹಿಡಿಯಲಾಗಿದೆ. ಸಂಬಂಧಿಸಿದ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಮಸ್ಯೆ ಎದುರಾಗಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ.

ನಿತ್ಯ ಶಿಕ್ಷಕರು ಕರೆಮಾಡಿ ಗೋಳು ತೋಡಿಕೊಳ್ಳುತ್ತಿರುವುದರಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕ್ಷೇತ್ರಿಯ ಪ್ರಮುಖ ಬಾಲಕೃಷ್ಣ ಭಟ್, ಕಾರ್ಯದರ್ಶಿ ಅರುಣ ಶಹಾಪುರ ಸೇರಿ ಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನದ ಎಸ್‌ಡಿಪಿ (ಸ್ಟೇಟ್ ಪ್ರೊಜೆಕ್ಟ್ ಡೈರೆಕ್ಟರ್) ಅಧಿಕಾರಿ ರಮೇಶ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ತಾಲೂಕುಗಳಲ್ಲಿ ಇದೀಗ ಡಿಡಿಓ ಮ್ಯಾಪಿಂಗ್:

ಈಗಾಗಲೇ ಬಿಜೆಪಿ ಸರ್ಕಾರ ಇದ್ದಾಗ ಕೆಲವು ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಕೆಲವು ನೂತನ ತಾಲೂಕುಗಳಿಗೆ ಅನುಮೋದನೆ ಸಿಕ್ಕಿದೆ. ಕಳೆದ ವರ್ಷ ಹಳೆಯ ತಾಲೂಕುಗಳ ಹೆಡ್‌ಗಳಲ್ಲೇ ವೇತನ ಪಾವತಿಸಲಾಗಿತ್ತು. ಈ ಬಾರಿ ನೂತನ ತಾಲೂಕುಗಳಿಗೆ ಅನುಮೋದನೆ ಕೊಡಬೇಕು ಎಂಬ ಸರ್ಕಾರದ ನಿರ್ದೇಶನದ ಮೇರೆಗೆ ಶಿಕ್ಷಣ ಇಲಾಖೆ ಹಾಗೂ ಜಿಪಂಗಳು ನಿರ್ಧರಿಸಿದ್ದವು. ಹೀಗಾಗಿ 2024ರ ಏಪ್ರಿಲ್‌ನಲ್ಲಿ ಆಯಾ ತಾಪಂಗಳಲ್ಲಿ ನೂತನ ಡಿಡಿಒ ಕೋಡ್‌ ರಚಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಬಹುತೇಕ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಇವೆ ಸಮಸ್ಯೆಗಳು:

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಈ ಶಿಕ್ಷಕರದ್ದಷ್ಟೇ ಅಲ್ಲದೇ ಅನುದಾನ ವ್ಯಾಪ್ತಿಯಲ್ಲೂ ಸಮಸ್ಯೆ ಎದುರಾಗಿದೆ. ಸೇವೆ ಸಲ್ಲಿಸಿ ಈಗಾಗಲೇ ನಿವೃತ್ತಿ ಆದ ಶಿಕ್ಷಕರ ಅಂತಿಮ ಪರಿಹಾರ, ಶಿಕ್ಷಕರ ಗಳಿಕೆ ರಜೆಯ ನಗದೀಕರಣ ಸೇರಿದಂತೆ ವಿವಿಧ ಸಮಸ್ಯೆಗಳಿದ್ದು, ಇಲಾಖೆಯಲ್ಲಿನ ಬೇರೆ ಬೇರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಕಷ್ಟು ನಿವೃತ್ತ ಶಿಕ್ಷಕರು ಗೋಳಾಡುತ್ತಿದ್ದಾರೆ.

---------------------

ಕೋಟ್....

ಕಳೆದ ನಾಲ್ಕು ತಿಂಗಳಿನಿಂದ ವೇತನವಿಲ್ಲದೆ ನೂತನ ತಾಲೂಕುಗಳ ಆರ್‌ಎಂಎಸ್‌ಎ ಪ್ರೌಢಶಾಲಾ ಶಿಕ್ಷಕರಿಗೆ ಸಂಕಷ್ಟ ಎದುರಾಗಿದೆ. ಊಟ, ಬಟ್ಟೆಗೂ ಹಣ ಇಲ್ಲದಂತಾಗಿದೆ. ಮಕ್ಕಳ ಶಾಲೆ, ಕುಟುಂಬ ನಿರ್ವಹಣೆ ಮಾಡುವುದೇ ತಲೆನೋವಾಗಿದೆ. ಮೇಲಾಧಿಕಾರಿಗಳು ತಕ್ಷಣ ವೇತನ ಬಿಡುಗಡೆ ಮಾಡಿ, ತೊಂದರೆಯಿಂದ ನಮ್ಮನ್ನು ಪಾರು ಮಾಡಬೇಕಿದೆ.

- ಹೆಸರು ಹೇಳಲಿಚ್ಚಿಸದ ನೊಂದ ಶಿಕ್ಷಕ.

ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ತಿಂಗಳಾನುಗಟ್ಟಲೇ ಸಂಬಳ ಬರದಿದ್ದರೆ ಖಂಡಿತವಾಗಿ ಸಮಸ್ಯೆ ಎದುರಾಗುತ್ತದೆ. ಸಂಬಳವನ್ನೇ ನೆಚ್ಚಿಕೊಂಡು ಕುಟುಂಬ ನಡೆಸುವುದರಿಂದ ನಾಲ್ಕು ತಿಂಗಳ ವೇತನವಿಲ್ಲದೆ ಶಿಕ್ಷಕರು ಗೋಳಾಡುತ್ತಿದ್ದಾರೆ. ತಿಂಗಳ ಕಂತುಗಳು, ಆಸ್ಪತ್ರೆಯ ಖರ್ಚುಗಳು, ದಿನನಿತ್ಯದ ಖರ್ಚಿಗೆ ಹಣವಿಲ್ಲದೆ ತೊಂದರೆಯಾಗಿದೆ. ಇನ್ನುಮುಂದೆ ಆಯಾ ತಿಂಗಳ ಸಂಬಳ ಆಯಾ ತಿಂಗಳೇ ಕೊಡುವಂತಹ ವ್ಯವಸ್ಥೆ ಸರ್ಕಾರದಿಂದ ಆಗಬೇಕಿದೆ.

- ಅರುಣ ಶಹಾಪುರ, ವಿಧಾನ ಪರಿಷತ್ ಮಾಜಿ ಸದಸ್ಯ.

---------

ಆರ್‌ಎಂಎಸ್‌ಎ ಪ್ರೌಢ ಶಾಲಾ ಶಿಕ್ಷಕರಿಗೆ ತಾಲೂಕು ಪಂಚಾಯತಿಗಳಲ್ಲಿ ಲಿಂಕ್ ಡಾಕುಮೆಂಟ್ ಆಗದ ಕಾರಣ ಸಮಸ್ಯೆ ಆಗಿದೆ. ವಿಜಯಪುರ ಸೇರಿದಂತೆ ಕೆಲವು ಕಡೆ ಈ ಸಮಸ್ಯೆ ಆಗಿದೆ. ಇನ್ನೊಂದು ವಾರದಲ್ಲಿ ಡಿಡಿಓ ಕೋಡ್ ಸರಿಪಡಿಸಿ ವೇತನ ಬಿಡುಗಡೆ ಮಾಡಲಾಗುವುದು. ಶಿಕ್ಷಕರಿಗೆ ಬರುವ ತಿಂಗಳಿನಿಂದ ಯಾವುದೇ ರೀತಿಯಿಂದ ಸಮಸ್ಯೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ನಿಡಲಾಗಿದೆ.

- ರಮೇಶ, ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನ ಬೆಂಗಳೂರು.