ಶಿರಸಿ: ಕಳೆದ ಹನ್ನೆರಡು ವರ್ಷಗಳಿಂದ ತನ್ನ ಕಾರ್ಯಚಟುವಟಿಕೆಯ ಮೂಲಕ ಸಕ್ರಿಯವಾಗಿ ಶೈಕ್ಷಣಿಕ ಏಳ್ಗೆಗೆ ಕಾರಣವಾಗುತ್ತಿರುವ ಶಿರಸಿಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿಕ್ಷಕರ ಸಂಪನ್ಮೂಲ ವೇದಿಕೆಯಾದ ಸ್ಫೂರ್ತಿಗೆ ಜ.18ರ ಶನಿವಾರ ಚಾಲನೆ ನೀಡಲಿದೆ ಎಂದು ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ ತಿಳಿಸಿದ್ದಾರೆ.
ಸಾಧನಾ ಸ್ಫೂರ್ತಿ ಅಡಿಯಲ್ಲಿ ಪ್ರತಿಭಾವಂತ ಮಕ್ಕಳು, ಶಿಕ್ಷಕರನ್ನು ಗುರುತಿಸಿ ಹೊರ ಪ್ರದೇಶಕ್ಕೆ ಪರಿಚಯಿಸಲು ಭಾವನಾ ಸ್ಫೂರ್ತಿ ಎಂಬ ಇ ಪತ್ರಿಕೆ ಪ್ರಕಟಿಸಿ ಮೊಬೈಲ್ ಮೂಲಕ ಅಂಥ ಸಾಧನೆಗಳನ್ನು ನಾಡಿನ ಹಲವೆಡೆ ಪರಿಚಯಿಸುವದಾಗಿದೆ. ಶಿಕ್ಷಕರ ಸಾಧನೆ ಜೊತೆಗೆ ಮಕ್ಕಳ ಕವನ, ಶಿಕ್ಷಕರ, ಮಕ್ಕಳ ಸಾಧನೆ, ಅಧಿಕಾರಿಗಳ ಕಾರ್ಯ, ಶಾಲಾ ಚಟುವಟಿಕೆ, ಶಾಲಾ ಆವಾರ, ಬಿಸಿಯೂಟದ ವಿಶೇಷತೆ, ಹಸಿರು ಶಾಲೆ ಸೇರಿದಂತೆ ಅನೇಕ ವರದಿಗಳು ಇರಲಿವೆ. ವಾನಳ್ಳಿ ಪ್ರೌಢ ಶಾಲೆಯ ಗಣಿತ ಶಿಕ್ಷಕ, ಮುಖ್ಯಾಧ್ಯಾಪಕ ರಾಘವ ಅನಂತ ಹೆಗಡೆ ಐತಾಳಿಮನೆ ಅವರು ನಿರ್ಮಾಣ ಮಾಡಿದ ಗಣಿತ ಕ್ವಿಜ್ ಗೇಮ್ ಮಕ್ಕಳ ಕುತೂಹಲ ಹೆಚ್ಚಿಸುವ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಗಳ ಏರಿಕೆಗೆ ಸಹಕಾರಿ ಆಗಲಿದೆ. ಇದರ ಭಾಗವಾಗಿ ಜ್ಞಾನ ಸ್ಫೂರ್ತಿ ಎಂಬ ವಿಭಾಗ ಆರಂಭಿಸಲಾಗಿದ್ದು, ಪ್ರಥಮ ಹಂತವಾಗಿ ಈ ಪ್ರಯೋಗ ನಡೆಯಲಿದೆ ಎಂದ ಎಂ.ಎಸ್. ಹೆಗಡೆ, ಸಾವಿರಕ್ಕೂ ಅಧಿಕ ಪ್ರಶ್ನೆಗಳು ಒಳಗೊಂಡ ಈ ತಂತ್ರಜ್ಞಾನ ಪವರ್ ಪಾಯಿಂಟ್ ವಿತ್ ವಿಬಿ ಕೋಡ್ ವ್ಯವಸ್ಥೆಯಲ್ಲಿದ್ದು, ಪ್ರತೀ ತರಗತಿಯ ಮಕ್ಕಳನ್ನು ಐದು ತಂಡವಾಗಿಸಿಕೊಂಡು ಇಲ್ಲಿ ಆಟದ ಮಾದರಿಯಲ್ಲಿ ಗಣಿತದ ಪಾಠ ಮಾಡಿಕೊಳ್ಳಬಹುದಾಗಿದೆ. ನೋಡಿದ, ಆಡಿದ ಸಂಗತಿ ಮಗುವಿನ ನೆನಪಿನಂಗಳದಲ್ಲಿ ಹೆಚ್ಚು ಉಳಿಯುತ್ತದೆ ಎಂಬ ಆಶಯದಲ್ಲಿ ತಂತ್ರಜ್ಞಾನ ಬಳಸಿ ಆರು ತಿಂಗಳ ಶ್ರಮದಿಂದ ಇದನ್ನು ನಿರ್ಮಾಣ ಮಾಡಲಾಗಿದೆ. ಒಂದಂಕ, ಎರಡು, ಮೂರು ಅಂಕ, ನಾಲ್ಕು ಹಾಗೂ ಅದಕ್ಕೂ ಅಧಿಕ ಅಂಕದ ಪ್ರಶ್ನೆಗಳ ಗುಂಪೂ ಇದೆ. ವಾನಳ್ಳಿ ಶಾಲೆಯ ಮಕ್ಕಳ ಗಣಿತದ ಪ್ರಗತಿ ಗಮನಿಸಿ ಇದನ್ನು ಎಲ್ಲರಿಗೂ ಹಂಚಲು ಡಯಟ್ ಮುಂದಾಗಿದೆ. ಗಣಿತದ ಜೊತೆಗೆ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲ ವಿಷಯದಿಂದ ಇದನ್ನು ಸಜ್ಜುಗೊಳಿಸಬಹುದಾಗಿದೆ ಎಂದು ಹೇಳಿದರು.
ಕಲೆಯನ್ನು ಬೆಳೆಸಬೇಕು, ಅದಕ್ಕೂ ಶಿಕ್ಷಕರ ಕೊಡುಗೆ ಇರಬೇಕು ಎಂಬ ಆಶಯದಲ್ಲಿ ಯಕ್ಷ ಸ್ಫೂರ್ತಿ ಕೆಲಸ ಮಾಡಲಿದೆ. ಕನ್ನಡದ ಭಾಷಾ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಈ ಕಲೆಯಲ್ಲಿ ನಮ್ಮ ಶಿಕ್ಷಕರೂ ಪಾಲ್ಗೊಳ್ಳುವಂತೆ ಆಗಬೇಕು. ಈ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣವಾಗಬೇಕು. ಶಿಕ್ಷಕರ ಮೂಲಕ ಮಕ್ಕಳಿಗೆ ಇದು ತಲುಪಬೇಕು ಎಂಬ ಕಾರಣಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ಕಲಾವಿದರನ್ನು ಸಂಘಟಿಸಿ ಉತ್ತೇಜಿಸಲು ಯೋಜಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿ.ಎಸ್. ಭಟ್ಟ ಪಂಚಲಿಂಗ, ನಾರಾಯಣ ಭಾಗವತ್, ಈಶ್ವರ ನಾಯ್ಕ, ಭಾಸ್ಕರ ಹೆಗಡೆ, ರಾಘವ ಹೆಗಡೆ, ಸನ್ಮೇಷ ಪಾಟೀಲ, ನಿಲೇಕಣಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ ನಾಯ್ಕ ಇತರರು ಇದ್ದರು.