ಗರ್ಭಿಣಿಯರ ಸಾವು ತಡೆಗೆ ವೈದ್ಯಾಧಿಕಾರಿಗಳು ಹಾಗೂ ಸ್ತ್ರೀ ತಜ್ಞರು ಒಟ್ಟಿಗೆ ತಂಡ ರಚಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ

KannadaprabhaNewsNetwork |  
Published : Mar 06, 2025, 12:35 AM ISTUpdated : Mar 06, 2025, 12:15 PM IST
Pregnancy

ಸಾರಾಂಶ

ಜಿಲ್ಲೆಯಲ್ಲಿ ಗರ್ಭಿಣಿಯರಿಗೆ ಉತ್ತಮ ಆರೈಕೆ ಹಾಗೂ ಚಿಕಿತ್ಸೆ ನೀಡುವ ದೃಷ್ಟಿಯಿಂದ ಆರು ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸ್ತ್ರೀ ತಜ್ಞರು ಒಟ್ಟಿಗೆ ತಂಡವನ್ನು ರಚಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. 

 ಕೋಲಾರ  : ಗರ್ಭಿಣಿಯರ ಸಾವು ತಡೆಯಲು ವೈದ್ಯಾಧಿಕಾರಿಗಳ ತಂಡ ರಚನೆ ಮಾಡಿದ್ದು, ಜಿಲ್ಲೆಯಲ್ಲಿ ತಕ್ಷಣ ಆರೈಕೆ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಹೆಚ್‌ಒ ಡಾ.ಜಿ.ಶ್ರೀನಿವಾಸ್ ತಿಳಿಸಿದರು.ನಗರ ಹೊರವಲಯದ ತೇರಳ್ಳಿಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಮಾಧ್ಯಮದವರಿಗೆ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮದ ಕುರಿತ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ

ಎಂತಹ ಕಠಿಣ ಸಂದರ್ಭದಲ್ಲೂ ಗರ್ಭಿಣಿಯರಿಗೆ ಉತ್ತಮ ಆರೈಕೆ ಹಾಗೂ ಚಿಕಿತ್ಸೆ ನೀಡುವ ದೃಷ್ಟಿಯಿಂದ ಆರು ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸ್ತ್ರೀ ತಜ್ಞರು ಒಟ್ಟಿಗೆ ತಂಡವನ್ನು ರಚಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಗರ್ಭಿಣಿಯರ ಸಾವು ನೋವು ಜರುಗದಂತೆ, ಮತ್ತು ಹೆರಿಗೆ ನಂತರ ಮಕ್ಕಳ ಆರೈಕೆಗೆ ಎಲ್ಲ ರೀತಿಯ ತಂತ್ರಜ್ಞಾನದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲೂ ಉತ್ತಮ ಸೇವೆಯೊಂದಿಗೆ ಔಷಧಿಗಳು ಸಹ ದೊರಕುವ ರೀತಿ ಮಾಡಲಾಗಿದೆ. ಯಾವುದೇ ರೀತಿಯ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ದೊರಕುವುದು. ವಿನಾಕಾರಣ ಖಾಸಗಿ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲ. ಕೆಲವು ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಮುಂದಾಗಿರುವ ವಿಷಯ ತಿಳಿದಿದೆ. ಅವರ ಮೇಲೆ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದು ನಮಗೆ ಅರಿವಿದೆ ಎಂದರು.

ಜನತೆಯ ಆರೋಗ್ಯ ರಕ್ಷಣೆ ಉದ್ದೇಶ

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಮಾತನಾಡಿ, 30  ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮನೆ ಮನೆಗೆ ತೆರಳಿ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಮತ್ತು ಪರೀಕ್ಷೆ ಮಾಡಲಾಗುತ್ತದೆ. ಯೋಜನೆಯಡಿಯಲ್ಲಿ ಎಲ್ಲಾ ಸಾರ್ವಜನಿಕರ ಆರೋಗ್ಯ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕ ವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ ಎಂದರು.ಕೋಲಾರದಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಜನತೆಯ ಮನೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ಸಲ್ಲಿಸುವುದು ರಾಜ್ಯ ಸರ್ಕಾರದ ಯೋಜನೆಯಾಗಿದೆ. ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರನ್ನು ಒಳಗೊಂಡ 150  ತಂಡಗಳು ವಾರದಲ್ಲಿ 3 ದಿನ ಪ್ರತಿ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿ ಉಚಿತ ಔಷಧಿ ತಲುಪಿಸಲಾಗುತ್ತದೆ.

 ಕ್ಯಾನ್ಸರ್‌ ಚಿಕಿತ್ಸೆಗೂ ವ್ಯವಸ್ಥೆ

ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದೆ. ರಕ್ತದೊತ್ತಡ ಮಧುಮೇಹ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಗರ್ಭ ಕೊರಳಿನ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳು ನಿದ್ರಾಹೀನತೆ ಈ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಲಿದ್ದಾರೆ. ಕ್ಯಾನ್ಸರ್ ಚಿಹ್ನೆ ಲಕ್ಷಣಗಳು ಕಂಡುಬಂದಲ್ಲಿ ತಜ್ಞ ವೈದ್ಯರ ಮೂಲಕ ರೋಗ ನಿರ್ಣಯ ಖಾತ್ರಿಪಡಿಸಿ ಮುಂದಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಕೊಪ್ಪಳ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಉಲ್ಬಣಗೊಂಡಿದ್ದು ಜಿಲ್ಲೆಯ ಜನತೆ ಭಯಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಲ್ಲಿ ಹಕ್ಕಿಜ್ವರ ಹರಡದಂತೆ ಎಚ್ಚರ ವಹಿಸಲಾಗಿದೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸಿದರೆ ಯಾವುದೇ ಸೋಂಕು ಹರಡುವುದಿಲ್ಲ ಎಂದು ಹೇಳಿದರು.ನಾನಾ ರೋಗಗಳ ಬಗ್ಗೆ ಮಾಹಿತಿ

ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಡಾ.ಎನ್.ಜಿ.ನಾರಾಯಣಸ್ವಾಮಿ ಮಾತನಾಡಿ, ಕುಷ್ಟರೋಗ, ಮೆದುಳು ಜ್ವರ, ಮಾನಸಿಕ ಕಾಯಿಲೆ, ಡೆಂಗೀ, ಚಿಕನ್ ಗುನ್ಯಾ, ಮಲೇರಿಯಾ ಕಾಯಿಲೆಗಳ ನಿಯಂತ್ರಣ ಹಾಗೂ ಜಾಗರೂಕತೆ ಮತ್ತು ಹವಾಮಾನ ವೈಪರಿತ್ಯ ಮತ್ತು ಮಾನವನ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.ತಾಲೂಕು ಆರೋಗ್ಯ ಅಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಡಾ.ಚಾರಣಿ, ಡಾ.ಚಂದನ್, ಡಾ.ಪ್ರಸನ್ನಕುಮಾರ್ ಡಾ.ರಾಜೇಶ್, ವಾರ್ತಾ ಇಲಾಖೆ ಅಧಿಕಾರಿ ಮಂಜೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ