ಕೃಷ್ಣ ಎನ್. ಲಮಾಣಿ
ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್‌ಗಳನ್ನು ನಾನ್ ಡಿಸ್ಟ್ರಕ್ಟಿವ್ ಟೆಸ್ಟಿಂಗ್ (ಎನ್‌ಡಿಟಿ) ನಡೆಸಿ, ಇದರ ಆಧಾರದಲ್ಲಿ ಹೊಸ ಗೇಟ್ ಅಳವಡಿಸಲು ಹೊಸದಿಲ್ಲಿಯ ಪರಿಣಿತ ತಜ್ಞ ಎ.ಕೆ. ಬಜಾಜ್ ನೇತೃತ್ವದ ತಾಂತ್ರಿಕ ಪರಿಶೀಲನಾ ಸಮಿತಿ ತುಂಗಭದ್ರಾ ಮಂಡಳಿಗೆ ವಿಸ್ತೃತ ವರದಿ ಸಲ್ಲಿಸಿದೆ.ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದ ಬಳಿಕ ತಾಂತ್ರಿಕ ಪರಿಶೀಲನಾ ಸಮಿತಿಯ ಆರು ಸದಸ್ಯರನ್ನೊಳಗೊಂಡ ತಂಡ ಸೆ.9, 10ರಂದು ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿತ್ತು. ಈಗ ಈ ಸಮಿತಿ ಜಲಾಶಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತುಂಗಭದ್ರಾ ಮಂಡಳಿಗೆ ಸೆ.17ರಂದು ವರದಿ ಸಲ್ಲಿಸಿದೆ. ಹಾಗಾಗಿ ಈ ಬಗ್ಗೆ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ.
ಗೇಟ್ ಮರು ಸ್ಥಾಪನೆಗೆ ಸಲಹೆ:ಡ್ಯಾಂನ 33 ಕ್ರಸ್ಟ್‌ಗೇಟ್ ಬಲವರ್ಧನೆಗೆ ಎನ್‌ಡಿಟಿ ಪರೀಕ್ಷೆ ನಡೆಸುವ ಅಗತ್ಯವಿದೆ. ಈ ವರದಿ ಅನ್ವಯ ಕ್ರಸ್ಟ್‌ಗೇಟ್‌ಗಳನ್ನು ಮರು ನಿರ್ಮಿಸಿ ಅಳವಡಿಸಬೇಕಿದೆ. ಹೊಸ ಗೇಟ್ ನಿರ್ಮಾಣ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೂ ಮುನ್ನ ಡ್ಯಾಂಗೆ ಧಕ್ಕೆಯಾಗದಂತೆ ಎನ್‌ಡಿಟಿ ಪರೀಕ್ಷೆ ನಡೆಸಬೇಕಿದೆ. ಇದರಿಂದ ಜಲಾಶಯದ ಗಟ್ಟಿತನದ ಬಗ್ಗೆ ತಿಳಿಯಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗೇಟ್‌ಗಳು 45ರಿಂದ 50 ವರ್ಷ ಬಾಳಿಕೆ ಬರುತ್ತವೆ. ಆದರೆ, ತುಂಗಭದ್ರಾ ಡ್ಯಾಂ ಗೇಟ್ ಈ ಮಿತಿ ದಾಟಿವೆ. ಕ್ರಸ್ಟ್ ಗೇಟ್ ಬದಲಿಸುವುದರತ್ತ ಹೆಜ್ಜೆ ಹಾಕಲು ಮಂಡಳಿಗೆ ಸಮಿತಿ ಸಲಹೆ ನೀಡಿದೆ.ನೀರಿನ ರಭಸವೇ ಕಾರಣ:
ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬೀಳಲು ಡ್ಯಾಂನ ನೀರಿನ ರಭಸವೇ ಕಾರಣ ಎಂದು ಅಂದಾಜಿಸಲಾಗಿದೆ. ಇಂತಹ ಸಂಭಾವ್ಯ ಅವಘಡ ಸಂಭವಿಸದಂತೆ ನಿಗಾ ವಹಿಸಲು ವರದಿಯಲ್ಲಿ ಸೂಚಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ಸ್ಟಾಪ್ ಲಾಗ್‌ಗೆ ಸಲಹೆ:
ಜಲಾಶಯದಲ್ಲಿ ಸಂಭಾವ್ಯ ಅವಘಡ ತಪ್ಪಿಸಲು ಸ್ಟಾಪ್ ಲಾಗ್ ಗೇಟ್ ಲಭ್ಯತೆ ಬಗ್ಗೆ ವರದಿಯಲ್ಲಿ ಸಲಹೆ ನೀಡಲಾಗಿದೆ. ಪರ್ಯಾಯ ಗೇಟ್ ನಿರ್ಮಾಣ ಬಗ್ಗೆಯೂ ಉಲ್ಲೇಖಿಸಲಾಗಿದೆ. ಆದರೆ, ಜಲಾಶಯದ ಈಗಿನ ಡಿಸೈನ್‌ನಲ್ಲಿ ಪರ್ಯಾಯ ಗೇಟ್ ಮಾಡಲು ಆಗಲ್ಲ. ಹೊಸ ಗೇಟ್ ನಿರ್ಮಾಣ ವೇಳೆ ತಜ್ಞರು ಯಾವ ಸಲಹೆ ನೀಡುತ್ತಾರೋ ಅದರ ಆಧಾರದಲ್ಲಿ ಇದು ನಿರ್ಧಾರವಾಗಲಿದೆ.ತುಂಗಭದ್ರಾ ಮಂಡಳಿ ಬಳಿ 2 ಸ್ಟಾಪ್ ಲಾಗ್ ಗೇಟ್ ಸಿದ್ಧಗೊಂಡಿವೆ. ಇನ್ನೊಂದು ಗೇಟ್‌ನ ಎಲಿಮೆಂಟ್ ಸಿದ್ಧಪಡಿಸಲು ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್, ಕೊಪ್ಪಳದ ಹೊಸಹಳ್ಳಿಯ ಹಿಂದೂಸ್ಥಾನ ಎಂಜಿನಿಯರ್ಸ್‌ಗೆ ವಹಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ತಿಳಿಸಿದರು.
ತುಂಗಭದ್ರಾ ಡ್ಯಾಂಗೆ ಪರಿಣತ ತಜ್ಞ ಎ.ಕೆ. ಬಜಾಜ್ ನೇತೃತ್ವದ ತಂಡ ಆಗಮಿಸಿ ಪರಿಶೀಲಿಸಿತ್ತು. ಈ ಸಮಿತಿ ಜಲಾಶಯದಲ್ಲಿ ಎನ್‌ಡಿಟಿ ಪರೀಕ್ಷೆ ನಡೆಸಲು ವರದಿ ನೀಡಿದೆ. 3 ರಾಜ್ಯಗಳ ನೀರಾವರಿ ತಜ್ಞರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುತ್ತಾರೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ.