ಕನ್ನಡಪ್ರಭ ವಾರ್ತೆ ಚಾಮರಾಜನಗರಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಸಿ ಬೋಧನಾ ಕಲಿಕಾ ಚಟುವಟಿಕೆ ರೂಪಿಸಿದರೆ ಕಲಿಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಅಭಿಪ್ರಾಯಪಟ್ಟರು.ನಗರದ ಮಹಾಮನೆಯಲ್ಲಿ ಸೇವಾ ಮಂದಾರ, ಎನ್ಇಕೆಕೆ ಬೋಸ್ಟನ್, ರೈಟ್ ಟು ಲಿವ್ ಸಂಸ್ಥೆ, ಅನಿಕೇತನ ವೇದಿಕೆ, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ 30 ಸರ್ಕಾರಿ ಶಾಲೆಗಳಿಗೆ ಆಲ್ಇನ್ ಪ್ರೊಜೆಕ್ಟರ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಶಿಕ್ಷಣ ಕ್ಷೇತ್ರ ಮತ್ತು ತಂತ್ರಜ್ಞಾನ ಒಂದಕ್ಕೊಂದು ಪೂರಕವಾಗಿದ್ದು, ತಂತ್ರಜ್ಞಾನ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು, ತರಗತಿಗಳಲ್ಲಿ ಉಲ್ಲಾಸದ ಕಲಿಕಾ ವಾತಾವರಣ ಮೂಡಿಸಲು ಪ್ರೇರಕವಾಗಿದೆ ಎಂದರು. ಖಾಸಗಿ ಶಾಲೆಗಳಲ್ಲಿ ಇರುವಂತಹ ಸ್ಮಾರ್ಟ್ ಕ್ಲಾಸ್, ತಂತ್ರಜ್ಞಾನದ ಬಳಕೆಯ ವಿಧಾನವನ್ನು ಸರ್ಕಾರಿ ಶಾಲೆಗಳಲ್ಲೂ ಅಳವಡಿಸಲಾಗುತ್ತಿದೆ. ಹಲವಾರು ಯೋಜನೆಗಳ ಮೂಲಕ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಲ್ಯಾಪ್ ಟಾಪ್, ಪ್ರೊಜೆಕ್ಟರ್, ಇತ್ಯಾದಿ ಗಳನ್ನು ಒದಗಿಸಲಾಗುತ್ತಿದೆ. ಇಲಾಖೆ, ಸರ್ಕಾರದ ಜೊತೆಗೆ ಹಲವು ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ, ದಾಖಲಾತಿ, ಹಾಜರಾತಿ, ಫಲಿತಾಂಶ ಉತ್ತಮವಾಗಲು ಶ್ರಮಿಸುತ್ತಿವೆ ಎಂದು ಅಭಿಪ್ರಾಯಪಟ್ಟರು. ಅನಿಕೇತನ ವೇದಿಕೆ ಮತ್ತು ಮಹಾಮನೆ ಬಳಗದವರು ತಾಲೂಕಿನ 87 ಸರ್ಕಾರಿ ಶಾಲೆಗಳಿಗೆ ಪ್ರೊಜೆಕ್ಟರ್ ನೀಡಿ, ತಾಲೂಕಿನ ಶಿಕ್ಷಣ ವ್ಯವಸ್ಥೆಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಬೆಂಬಲ ನೀಡಿದ್ದಾರೆ. ಈ ಎರಡು ಸಂಸ್ಥೆಗಳ ಕಾರ್ಯ ಅಭಿನಂದನೀಯ. ಅವರ ಕಾರ್ಯಗಳು ಇತರರಿಗೂ ಪ್ರೇರಣೆ ನೀಡಲಿ. ಪ್ರೊಜೆಕ್ಟರ್ ಪಡೆದಿರುವ ಶಾಲೆಗಳ ಶಿಕ್ಷಕರು ಅವುಗಳನ್ನು ವ್ಯವಸ್ಥಿತವಾಗಿ, ಪರಿಣಾಮಕಾ ರಿಯಾಗಿ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಡಯಟ್ ಪ್ರಾಂಶುಪಾಲ ಕಾಶೀನಾಥ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಶಿಕ್ಷಣ ಇಂದಿನ ಅವಶ್ಯಕತೆಯಾಗಿದ್ದು, ಪೋಷಕರ ನಿರೀಕ್ಷೆಯನ್ನು ಪೂರೈಸುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು, ಉಳಿಸಲು ಉತ್ತಮ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.ಅನಿಕೇತನ ವೇದಿಕೆಯ ಅಧ್ಯಕ್ಷ ಹೆಗ್ಗಡಹಳ್ಳಿಯ ಸುರೇಶ್ ಮಾತನಾಡಿ, ತಂದೆಯ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ, ಹಲವು ದೇಶ ವಿದೇಶದಲ್ಲಿ ಇರುವ ಶಿಕ್ಷಣದ ಬಗ್ಗೆ ಕಾಳಜಿ ಇರುವ ಮಿತ್ರರ ಸಹಕಾರದಿಂದ ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಕಲಿಕೆಗೆ ಸಹಾಯಕವಾಗುವಂತಹ ಪ್ರೊಜೆಕ್ಟರ್, ಕಲಿಕಾ ಸಾಮಗ್ರಿಗಳು, ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಸೇವಾ ಕಾರ್ಯವನ್ನು ಇಡೀ ಚಾಮರಾಜನಗರ ಜಿಲ್ಲೆಗೆ ವಿಸ್ತರಣೆ ಮಾಡುವ ಯೋಜನೆ ಇದೆ. ಇದರ ಸದುಪಯೋಗ ವಿದ್ಯಾರ್ಥಿಗಳಿಗೆ ಆದರೆ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇ ಗೌಡ ಮಾತನಾಡಿ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿರುವ ಸಂಘ ಸಂಸ್ಥೆಗಳ ಕಾರ್ಯವನ್ನು ಶ್ಲಾಘೀಸಿದರು.ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸ್ಥಾಪನೆಯಾಗಿ ಇಪ್ಪತೈದು ವರ್ಷಗಳನ್ನು ಪೂರೈಸುತ್ತಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಶಾಲೆಗಳಿಗೆ ಪ್ರೊಜೆಕ್ಟರ್ ವಿತರಣಾ ಕಾರ್ಯಕ್ರಮ ಉತ್ತಮ ಶೈಕ್ಷಣಿಕ ಕಾರ್ಯಕ್ರಮವಾಗಿದ್ದು, ಇದಕ್ಕೆ ಸಹಕರಿಸಿದ ಅನಿಕೇತನ ವೇದಿಕೆಯವರಿಗೆ ಧನ್ಯವಾದ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ರವರನ್ನು ಮಹಾಮನೆ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಹರವೆ ಬಸವರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೊತ್ತಲವಾಡಿ ಮಹಾದೇವಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಂದಿಗೌಡನಹಳ್ಳಿ ನಾಗರಾಜು ,ಶಿಕ್ಷಣ ಸಂಯೋಜಕ ಪರಶಿವಮೂರ್ತಿ, ಸಂಘದ ಪದಾಧಿಕಾರಿಗಳಾದ ಮಾದಲಾಂಬಿಕೆ, ನಿರ್ಮಲ, ಜ್ಯೋತಿ, ಬಸವರಾಜಪ್ಪ, ದೊಡ್ಡರಾಯಪೇಟೆ ನಾಗರಾಜು, ಕೆ ಎಸ್ ಮಹಾದೇವ ಸ್ವಾಮಿ, ಮೂಗೂರು ಸುಂದ್ರಪ್ಪ,ಬಿ.ನಾಗೇಂದ್ರ, ರಾಮಸಮುದ್ರ ನಂಜುಂಡಸ್ವಾಮಿ, ಶಿಕ್ಷಕರ ಸಂಘದ ಮಹದೇವಸ್ವಾಮಿ, ಎಲ್ಲಾ 30 ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಭಾಗವಸಿದ್ದರು.