ತೇಗೂರು ಸಂವರ್ಧನಾ ಕೇಂದ್ರಕ್ಕೆ ರಾಜ್ಯದ ಏಕೈಕ ಕೋಣ ಉತ್ಪಾದನಾ ಘಟಕ ಗರಿ

KannadaprabhaNewsNetwork | Published : Jan 11, 2025 12:45 AM

ಸಾರಾಂಶ

1910ರಲ್ಲಿ ಜಾನುವಾರು ಕ್ಷೇತ್ರವೆಂದು ಶುರುವಾದ ಈ ಕೇಂದ್ರವು 1976ರಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವಾಗಿ ಪರಿವರ್ತನೆಯಾಯಿತು. ಒಟ್ಟು 356 ಎಕರೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಧಾರವಾಡ:

ಹೈನೋದ್ಯಮಕ್ಕೆ ಪ್ರೋತ್ಸಾಹ ಹಾಗೂ ಎಮ್ಮೆ ತಳಿ ಸಂವರ್ಧನೆಯ ಹಿನ್ನೆಲೆಯಲ್ಲಿ ಇಲ್ಲಿಯ ತೇಗೂರು ಬಳಿ 1976ರಲ್ಲಿ ಸ್ಥಾಪನೆಯಾಗಿರುವ ಎಮ್ಮೆ ತಳಿ ಸಂವರ್ಧಾನಾ ಕೇಂದ್ರವು ರಾಜ್ಯದ ಏಕೈಕ ಕೋಣ ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿದೆ.

ರಾಜ್ಯದ ಘನೀಕೃತ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ ಉತ್ಕೃಷ್ಟ ಹಾಲಿನ ಇಳುವರಿ ಹೊಂದಿದ ಎಮ್ಮೆಗಳು ಅದರಲ್ಲೂ ವಿಶೇಷವಾಗಿ ಮುರ್ರಾ ಹಾಗೂ ಸೂರ್ತಿ ತಳಿಗೆ ಜನಿಸಿದ ಕೋಣದ ಕರುಗಳನ್ನು ನೀಡುವುದು, ನಂತರ ಈ ಕೋಣಗಳಿಂದ ವೀರ್ಯವನ್ನು ಸಂಗ್ರಹಿಸಿ ಸಂಸ್ಕರಿಸಿದ ಕಡ್ಡಿಗಳನ್ನು ರಾಜ್ಯದ ಎಲ್ಲ ಪಶು ವೈದ್ಯಕೀಯ ಸಂಸ್ಥೆಗಳಿಗೆ, ಕೃತಕ ಗರ್ಭಧಾರಣ ಮಾಡಲು ಉಪಯೋಗಿಸಲಾಗುತ್ತಿದೆ.

1910ರಲ್ಲಿ ಜಾನುವಾರು ಕ್ಷೇತ್ರವೆಂದು ಶುರುವಾದ ಈ ಕೇಂದ್ರವು 1976ರಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವಾಗಿ ಪರಿವರ್ತನೆಯಾಯಿತು. ಒಟ್ಟು 356 ಎಕರೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶುಕ್ರವಾರ ಈ ಕೇಂದ್ರಕ್ಕೆ ಭೇಟಿಯಾದ ಮಾಧ್ಯಮ ತಂಡಕ್ಕೆ ಕೇಂದ್ರದ ಉಪನಿರ್ದೇಶಕ ಡಾ. ಬಸವರಾಜ ನರೇಗಲ್‌ ಈ ಮಾಹಿತಿ ನೀಡಿದರು.

ಕೇಂದ್ರವು ಬರೀ ಎಮ್ಮೆ ತಳಿ ಸಂವರ್ಧನೆ ಮಾತ್ರವಲ್ಲದೇ, 2019ರಿಂದ ಅಳಿವಿನ ಅಂಚಿನಲ್ಲಿರುವ ದೇಸಿ ಆಕಳು ತಳಿ ಕೃಷ್ಣಾವ್ಯಾಲಿ ಸಂವರ್ಧನೆ ಸಹ ಮಾಡಲಾಗುತ್ತಿದೆ. 2022ರಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಹಂದಿ ಉತ್ಪಾದನಾ ಘಟಕವನ್ನು ಇಲ್ಲಿ ಶುರು ಮಾಡಿದ್ದು ಯಶಸ್ವಿಯಾಗಿದೆ ಎಂದರು.

ಹಲವು ಹಂದಿ ತಳಿ:

ಪ್ರಮುಖವಾಗಿ ಮಾಂಸ ಹಾಗೂ ಮರಿ ಉತ್ಪಾದನೆಯಲ್ಲಿ ಉತ್ಕೃಷ್ಟವಾದ ವಿದೇಶಿ ಹಂದಿ ತಳಿಗಳಾದ ಯಾರ್ಕಶೈರ್, ಡ್ಯೂರಾಕ್‌ ಮತ್ತು ಲ್ಯಾಂಡ್‌ರೇಸ್‌ ಹಂದಿಗಳನ್ನು ಪಾಲನೆ ಮಾಡಲಾಗುತ್ತಿದೆ. ಆಸಕ್ತ ಹಂದಿ ಸಾಕಾಣಿಕೆದಾರರಿಗೆ 3ರಿಂದ 4 ತಿಂಗಳ ಶುದ್ಧ ಹಾಗೂ ಮಿಶ್ರತಳಿ ಹಂದಿ ಮರಿಗಳನ್ನು ಪಾಲನೆಗಾಗಿ ವಿತರಿಸಲಾಗುತ್ತಿದೆ. ಕಿತ್ತೂರು ಸೇರಿದಂತೆ ದೇವರಕೊಂಡನಹಳ್ಳಿ, ಯರಿಕೊಪ್ಪದಲ್ಲಿ ಹಂದಿಗಳ ಫಾರ್ಮಗಳು ಶುರುವಾಗಿದ್ದು ತುಂಬ ಬೇಡಿಕೆ ಇದೆ. ಆದರೆ, ಬೇಡಿಕೆ ಪೂರೈಸಲು ಎರಡು ಹೆಚ್ಚುವರಿ ಹಂದಿ ಶೆಡ್‌ಗಳ ಅಗತ್ಯತೆಯನ್ನು ಅವರು ವಿವರಿಸಿದರು.

ಮೇವಿನ ಬೆಳೆಯೂ ಇದೆ:

ಎಮ್ಮೆ, ಆಕಳು, ಕರುಗಳಿಗೆ ಆಹಾರಕ್ಕಾಗಿ ಕ್ಷೇತ್ರದಲ್ಲಿ ಬೆಳೆಸಲಾಗಿರುವ ಮೇವಿನ ಬೆಳೆ ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ, ಸೂಪರ್‌ ಹೈಬ್ರೀಡ್‌ನೇಪಿಯರ್‌, ಕಾಫ್ಸ್‌, ಗಿನಿಹುಲ್ಲು, ಗ್ರೇಝಿಂಗ್‌ಗಿನಿ, ಮೆಕ್ಕೆಜೋಳ, ಅಲಂಸಂದಿ ಅಂತಹ ಹೆಚ್ಚು ಇಳುವರಿ ಬರುವ ಮೇವು ಬೆಳೆಯಲಾಗುತ್ತಿದೆ. ಆಸಕ್ತ ಹೈನೋದ್ಯಮಿಗಳಿಗೆ ಮೇವಿನ ಬೀಜ, ಬೇರು ಮತ್ತು ಕಾಂಡಗಳನ್ನು ಇಲಾಖೆ ನಿಗದಿಪಡಿಸಿದ ದರದಲ್ಲಿ ನೀಡುತ್ತಿದೆ. ಹೆಚ್ಚುವರಿ ಹಸಿರು ಮೇವನ್ನು ರಸಮೇವನ್ನಾಗಿ ಪರಿವರ್ತಿಸಿ ಬೇಸಿಗೆ ಮತ್ತು ಮೇವು ಅಭಾವದ ಸಂದರ್ಭಗಳಲ್ಲಿ ಜಾನುವಾರುಗಳಿಗೆ ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಘಟಕವಿದ್ದು ಪ್ರಾತ್ಯಕ್ಷಿಕೆಯೊಂದಿಗೆ ಆಸಕ್ತರಿಗೆ ವಿವರಿಸಲಾಗುತ್ತಿದೆ ಎಂದರು.

ಭೇಟಿ ವೇಳೆ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ರಾಜು ಪಾಟೀಲ, ಡಾ.ಅನಿಲ ಶೀಲವಂತರಮಠ ಇದ್ದರು. -------

ಕೇಂದ್ರದ ಬೇಡಿಕೆಗಳು..

ಎಮ್ಮೆ ತಳಿ ಸಂವರ್ಧನಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಪ್ರತಿ ತಿಂಗಳು ₹ 50 ಸಾವಿರದಷ್ಟು ವಿದ್ಯುತ್‌ ಬಿಲ್‌ ತುಂಬಲು ಪರದಾಟ ನಡೆದಿದೆ. ಹೆಸ್ಕಾಂನವರು ವಿದ್ಯುತ್‌ ಸಂಪರ್ಕ ಕಟ್‌ ಮಾಡುತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರು, ಹಂದಿ ಮರಿಗಳಿಗೆ ಕಾವು ನೀಡಲು ನಿರಂತರ ವಿದ್ಯುತ್‌ ಸಮಸ್ಯೆಯಾಗುತ್ತಿದೆ. ಜೊತೆಗೆ ಕಾಯಂ ಸಿಬ್ಬಂದಿ, ಹಂದಿ ಮರಿಗಳಿಗಾಗಿ ಎರಡು ಪ್ರತ್ಯೇಕ ಶೆಡ್‌ಗಳ ನಿರ್ಮಾಣದ ಅಗತ್ಯವಿದೆ.

ಡಿಸಿ ದಿವ್ಯಪ್ರಭು ಭೇಟಿ:

ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ರಾಜ್ಯದ ಏಕೈಕ ಎಮ್ಮೆ ತಳಿ ಸಂವರ್ಧನಾ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಅಲ್ಲಿನ ಕಾರ್ಯಗಳನ್ನು ವೀಕ್ಷಿಸಿದರು. ಮುರ್ರಾ, ಸೂರ್ತಿ ಎಮ್ಮೆ ತಳಿ, ಅವುಗಳ ಕೋಣದ ಮರಿಗಳು, ಕೃಷ್ಣಾ ವ್ಯಾಲಿ ತಳಿ, ತಲಾ 200-300 ಕೆಜಿ ತೂಕದ ವಿವಿಧ ತಳಿಯ ಹಂದಿಗಳನ್ನು ವೀಕ್ಷಿಸಿ ಅವುಗಳ ಆರೋಗ್ಯ, ಆಹಾರ ಕುರಿತಾಗಿ ಮಾಹಿತಿ ಪಡೆದರು. ಜತೆಗೆ ಕೇಂದ್ರದ ಅಗತ್ಯ, ಬೇಡಿಕೆಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಮಗೆ ಸಲ್ಲಿಸಲು ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಜಾನುವಾರಗಳಿದ್ದು, ಈ ಪೈಕಿ 50 ಸಾವಿರ ಎಮ್ಮೆಗಳಿವೆ. ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಈ ಕೇಂದ್ರ ಕಾರ್ಯೋನ್ಮುಖವಾಗಿದೆ. ಯುವ ಜನಾಂಗ ಹೈನೋದ್ಯಮದ ಮೂಲಕ ಸಮಗ್ರ ಕೃಷಿ ಮಾಡಬೇಕು. ಅವರಿಗೆ ಬೇಕಾದ ತಳಿ, ತರಬೇತಿಯನ್ನು ಪಶುಪಾಲನಾ ಇಲಾಖೆ ಮಾಡಲಿದೆ ಎಂದರು.

Share this article