ರಾಣಿಬೆನ್ನೂರು: ಭತ್ತ ಒಂದು ಪ್ರಮುಖ ಆಹಾರ ಧಾನ್ಯ ಬೆಳೆಯಾಗಿದ್ದು, ಉತ್ತಮ ಇಳುವರಿ ಪಡೆಯಲು ಬೀಜೋಪಚಾರದಿಂದ ಹಿಡಿದು ಕೊಯ್ಲಿನವರೆಗೆ ರೋಗ ಮತ್ತು ಕೀಟ ನಿರ್ವಹಣೆ ಬಹಳ ಮುಖ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಹೇಳಿದರು.
ತಾಲೂಕಿನ ಫತ್ತೇಪುರ ಗ್ರಾಮದ ಪ್ರಗತಿಪರ ರೈತ ನಾಗರಾಜ ಇವರ ಕ್ಷೇತ್ರದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೊಸ ಭತ್ತದ ತಳಿ ಆರ್.ಎನ್.ಆರ್-15048 (ತೆಲಂಗಾಣ ಸೋನಾ) ತಳಿಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಆರ್.ಎನ್.ಆರ್-15048 (ತೆಲಂಗಾಣ ಸೋನಾ) ಭತ್ತದ ತಳಿಯು ಕಡಿಮೆ ಸಕ್ಕರೆ ಅಂಶವುಳ್ಳ ಹಾಗೂ ಸಕ್ಕರೆ ರಹಿತ ಭತ್ತದ ತಳಿಯಾಗಿದ್ದು ಉತ್ತಮವಾದ ಧಾನ್ಯ ಮತ್ತು ಉತ್ತಮ ಅಡುಗೆ ಗುಣಮಟ್ಟದಿಂದಾಗಿ ಹೆಚ್ಚಿನ ಮಾರುಕಟ್ಟೆ ಬೆಲೆಯನ್ನು ಪಡೆಯುತ್ತದೆ. ತೆಲಂಗಾಣ ಸೋನಾ ಎಂದೂ ಕರೆಯಲ್ಪಡುವ ಆರ್‌ಎನ್‌ಆರ್ 15048 ಬೆಂಕಿ ಮತ್ತು ಕೊಳೆ ರೋಗಕ್ಕೆ ಹೆಚ್ಚು ನಿರೋಧಕವಾಗಿದೆ.
ಇದು ಸಣ್ಣ ತೆಳ್ಳಗಿನ ಧಾನ್ಯವಾಗಿದೆ ಮತ್ತು ಇದು ಛಿದ್ರವಾಗದ ವಿಧವಾಗಿದೆ. ಅದಕ್ಕಾಗಿ ಸಸಿ ಮಡಿ ತಯಾರಿಯ ಮುಂಚಿತವಾಗಿ ಬಿತ್ತನೆ ಬೀಜವನ್ನು 2 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ. ಮತ್ತು 0.1 ಗ್ರಾಂ ಸ್ಟೆಪ್ಟೋಸೈಕ್ಲಿನ್ ಮತ್ತು 0.1 ಗ್ರಾಂ ಮೈಲುತುತ್ತೆ ಮತ್ತು 0.12 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲೂ.ಪಿ. ಒಂದು ಲೀಟರ್ ನೀರಿನಲ್ಲಿ ಕರಗಿಸಿದ ದ್ರಾವಣದಲ್ಲಿ 20 ನಿಮಿಷಗಳ ಕಾಲ ನೆನೆಸಿ ನಂತರ ಸಸಿ ಮಡಿಗೆ ಚೆಲ್ಲಬೇಕು.
ಸಸಿಗಳ ವಯಸ್ಸು 21 ರಿಂದ 25 ದಿನ ಆದಾಗ ನಾಟಿ ಮಾಡಬೇಕು. ಕಳೆಗಳ ನಿಯಂತ್ರಣಕ್ಕಾಗಿ ಭತ್ತದ ಗದ್ದೆಗಳಲ್ಲಿ ಹುಲ್ಲು ಜಾತಿ ಕಳೆಗಳು ಕಡಿಮೆ ಇದು, ಹೆಚ್ಚು ಅಗಲ ಎಲೆ ಕಸಗಳಿಂದ ಕೂಡಿದ್ದರೆ 2,4-ಡಿ ಸೋಡಿಯಂ ಉಪ್ಪು 80 ಡಬ್ಲೂ.ಪಿ. (ಪ್ರತಿ ಎಕರೆಗೆ 1.0 ಕಿ.ಗ್ರಾಂ) 200 ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿ ನಿಯಂತ್ರಿಸಬಹುದು. ಭತ್ತದ ಗದ್ದೆಗಳ ಸಮೀಪ ಹತ್ತಿ ಬೆಳೆ ಇರುವಲ್ಲಿ ಈ ಕಳೆನಾಶಕವನ್ನು ಉಪಯೋಗಿಸಬಾರದು ಎಂದರು.
ಕೇಂದ್ರದ ಮಣ್ಣು ವಿಷಯ ತಜ್ಞೆ ಡಾ. ರಶ್ಮಿ ಸಿ. ಎಂ. ಮಾತನಾಡಿ, ಸಸಿ ಮಡಿಯಲ್ಲಿ ಪೋಷಕಾಂಶಗಳ ನಿರ್ವಹಣೆಗೆ ಸಂಯುಕ್ತ ಗೊಬ್ಬರ 15:15:15 3 ಗುಂಟೆಗೆ 3 ಕೆ.ಜಿ ಯಂತೆ ಬಳಸಬೇಕು. ಪ್ರತಿ 100 ಚದರ ಮೀಟರ್ ಕ್ಷೇತ್ರಕ್ಕೆ 1 ಕಿ. ಗ್ರಾಂ ಸಾರಜನಕ, 0.4 ಕಿ. ಗ್ರಾಂ ರಂಜಕ ಮತ್ತು 0.5 ಕಿ. ಗ್ರಾಂ ಪೋಟ್ಯಾಷ್ ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು 250 ಕಿ. ಗ್ರಾಂ ಕೊಟ್ಟಿಗೆ ಗೊಬ್ಬರದೊಡನೆ ಬೆರೆಸಬೇಕು.
ಮಣ್ಣಿನಲ್ಲಿ ತಂಪು ಹವೆ ಇರುವ ಪ್ರದೇಶದಲ್ಲಿ ಶಿಫಾರಸ್ಸಾದ ಎರಡರಷ್ಟು ರಂಜಕ ಒದಗಿಸುವುದರಿಂದ ಉತ್ತಮ ಸಸಿಗಳನ್ನು ಪಡೆಯಲು ಸಾಧ್ಯ. ಸಸಿ ನಾಟಿ ಮಾಡುವ 6 ದಿನಗಳ ಮುಂಚೆ ಪ್ರತಿ 100 ಚದರ ಮೀಟರ್ ಕ್ಷೇತ್ರಕ್ಕೆ 0.3-0.6 ಕಿ. ಗ್ರಾಂ ಸಾರಜನಕವನ್ನೊದಗಿಸುವ ರಾಸಾಯನಿಕ ಗೊಬ್ಬರಗಳನ್ನು ಮೇಲ್ಗೊಬ್ಬರವಾಗಿ ಕೊಡಬೇಕು. ಬಿತ್ತನೆಯಾದ 20-25 ದಿನಗಳಿಗೆ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ಸಸಿಗಳನ್ನು ನಾಟಿ ಮಾಡಿದಾಗ ಲಘುಪೋಷಕಾಂಶಗಳ ಶೇ. 1ರ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು.
ಮುಖ್ಯ ಭೂಮಿಗೆ ನಾಟಿ ಮಾಡಿದ 20 ದಿನಗಳ ಅವಧಿಯಲ್ಲಿ 20:20:20 ಗೊಬ್ಬರವನ್ನು ನೀಡಬೇಕು. ಹಸಿರೆಲೆ ಗೊಬ್ಬರವನ್ನು ಒದಗಿಸಲು ಎಕರೆಗೆ 4 ಟನ್ ಎಲೆ ಮತ್ತು ಎಳೆ ಕಾಂಡಗಳನ್ನು ಮಾತ್ರ ನಾಟಿಗೆ 3 ವಾರಗಳ ಮುಂಚೆ ಮಣ್ಣಿನಲ್ಲಿ ಬೆರೆಸಬೇಕು. ಭತ್ತದಲ್ಲಿ ಎಕರೆಗೆ 10 ಕಿ. ಗ್ರಾಂ ಸತುವಿನ ಸಲ್ಫೇಟ್ ಮತ್ತು 10 ಕಿ. ಗ್ರಾಂ ಕಬ್ಬಿಣದ ಸಲ್ಫೇಟ್ ಬಳಸುವುದರಿಂದ ಲಘು ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು ಎಂದರು.ಕ್ಷೇತ್ರೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ಸುಮಾರು 25ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.