ದೇವಸ್ಥಾನಗಳು ಸಾರ್ವಜನಿಕರ ಸೊತ್ತು, ಸರ್ಕಾರದ್ದಲ್ಲ: ಹಿರೇಮಗಳೂರು ಕಣ್ಣನ್

KannadaprabhaNewsNetwork | Updated : Feb 12 2024, 01:31 AM IST

ಸಾರಾಂಶ

ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಇಲ್ಲ ಎಂದು ಸರ್ಕಾರ ಹೇಳಿದಾಗ ಯಾಕೆ ಯಾರೂ ಪ್ರಶ್ನಿಸಲಿಲ್ಲ. ಹೇಗೆ ಬೇಕಾದರೂ ಬಟ್ಟೆ ಹಾಕಿಕೊಂಡು ದೇವಸ್ಥಾನಕ್ಕೆ ಬರುವುದಾದರೆ ಧಾರ್ಮಿಕ ಸ್ವಾತಂತ್ರ್ಯ ಉಳಿಯುವುದಾದರೂ ಹೇಗೆ?ದೇವಸ್ಥಾನಗಳು ಸಂಸ್ಕಾರದ ಕೇಂದ್ರ ಎಂಬುದನ್ನು ನಾವು ಮರೆಯಬಾರದು. ಮಠಗಳು ಒಂದು ಸಮುದಾಯ ಮತ್ತು ಜಾತಿಯ ಪ್ರತಿನಿಧಿಯಾಗುತ್ತದೆ. ಆದರೆ, ದೇವಸ್ಥಾನಗಳು ಸಮಾಜದ ಪ್ರತಿನಿಧಿ. ಅದು ಜಾತ್ಯತೀತವಾಗಿರಬೇಕು.

ಕನ್ನಡಪ್ರಭ ವಾರ್ತೆ ಮೈಸೂರುದೇವಸ್ಥಾನಗಳು ಸಾರ್ವಜನಿಕರ ಸೊತ್ತು, ಸರ್ಕಾರದಲ್ಲ. ನಿರ್ವಹಣೆಗಾಗಿ ಸರ್ಕಾರಕ್ಕೆ ನೀಡಿದ್ದೇವೆ ಅಷ್ಟೇ ಎಂದು ಚಿಂತಕ ಹಾಗೂ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದರು.

ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಮೈಸೂರು ಮಹಾನಗರವು ಭಾನುವಾರ ಆಯೋಜಿಸಿದ್ದ ಹಿಂದೂ ದೇವಾಲಯ ಭಕ್ತ ಮಂಡಳಿ ಸದಸ್ಯರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳು ನಮ್ಮ ಸಂಸ್ಕೃತಿ, ಪರಂಪರೆ ಉಳಿಸಲು ಪೂರ್ವಿಕರು ಬಿಟ್ಟುಹೋದ ಆಸ್ತಿ ಎಂದು ಹೇಳಿದರು.

ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಇಲ್ಲ ಎಂದು ಸರ್ಕಾರ ಹೇಳಿದಾಗ ಯಾಕೆ ಯಾರೂ ಪ್ರಶ್ನಿಸಲಿಲ್ಲ. ಹೇಗೆ ಬೇಕಾದರೂ ಬಟ್ಟೆ ಹಾಕಿಕೊಂಡು ದೇವಸ್ಥಾನಕ್ಕೆ ಬರುವುದಾದರೆ ಧಾರ್ಮಿಕ ಸ್ವಾತಂತ್ರ್ಯ ಉಳಿಯುವುದಾದರೂ ಹೇಗೆ?ದೇವಸ್ಥಾನಗಳು ಸಂಸ್ಕಾರದ ಕೇಂದ್ರ ಎಂಬುದನ್ನು ನಾವು ಮರೆಯಬಾರದು ಎಂದರು.

ಮಠಗಳು ಒಂದು ಸಮುದಾಯ ಮತ್ತು ಜಾತಿಯ ಪ್ರತಿನಿಧಿಯಾಗುತ್ತದೆ. ಆದರೆ, ದೇವಸ್ಥಾನಗಳು ಸಮಾಜದ ಪ್ರತಿನಿಧಿ. ಅದು ಜಾತ್ಯತೀತವಾಗಿರಬೇಕು. ಪ್ರತಿಯೊಂದು ಮಾನವನ ಉದ್ಧಾರಕ್ಕೆ ಇರುವುದು. ನಾನು ಕನ್ನಡದಲ್ಲಿ ಮಂತ್ರ ಹೇಳುತ್ತೇನೆ ಎಂದು ಕೆಲ ಸಂಪ್ರದಾಯಸ್ಥರಿಗೆ ಸಿಟ್ಟಿದೆ. ನಾವು ಹೇಳುವ ಮಂತ್ರ ಎಲ್ಲರಿಗೂ ಅರ್ಥವಾದರೆ ಮಾತ್ರ ಒಳಗೊಳ್ಳುವಿಕೆ ಸಾಧ್ಯ. ದೇವಸ್ಥಾನವು ಧರ್ಮದರ್ಶಿಗಳ ಪ್ರತಿಷ್ಠೆಗೆ ವೇದಿಕೆಯಾಗಬಾರದು ಎಂದು ಅವರು ತಿಳಿಸಿದರು.

ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ್‌ ಮಠದ್‌ ಮಾತನಾಡಿ, ರಾಜ್ಯದಲ್ಲಿ 33563 ಮುಜರಾಯಿ ದೇವಸ್ಥಾನ, 2.5 ಲಕ್ಷ ಖಾಸಗಿ ದೇವಸ್ಥಾನಗಳಿವೆ. ಈ ಎಲ್ಲವೂ ಸಮಾಜದ ಸುರಕ್ಷೆ, ಸಂಸ್ಕಾರ, ಧಾರ್ಮಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಸಮಿತಿಯ ಉದ್ದೇಶ. ಇವುಗಳ ಕಾರ್ಯಾಚರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದರು.

ನಮ್ಮ ಸಂಸ್ಕೃತಿಯ ಉಳಿವಿಗೆ, ಜನರ ಸಂಸ್ಕಾರದ ಉಳಿವಿಗೆ ದೇವಸ್ಥಾನದ ಅರ್ಚಕ ವೃತ್ತಿಯನ್ನು ಪುರುಷರಿಗೆ ಮೀಸಲಿಡಬೇಕು. ಮಹಿಳೆಯರನ್ನು ಅರ್ಚಕರಾಗಿ ನೇಮಿಸುವ ನಿರ್ಧಾರಗಳೂ ಸೂಕ್ತವಲ್ಲ.

- ಹಿರೇಮಗಳೂರು ಕಣ್ಣನ್, ಚಿಂತಕ

Share this article