ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಅಣೆಕಟ್ಟು ಬಳಿ ನಡೆಸಲುದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್‌ನ್ನು ಜು.15ರವರೆಗೆ ಮುಂದೂಡಲಾಗಿದೆ. ಅಂದು ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿದ್ದು, ನ್ಯಾಯಾಲಯ ನೀಡಬಹುದಾದ ನಿರ್ದೇಶನದ ಮೇರೆಗೆ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.ಶನಿವಾರ ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಆಯೋಜಿಸಿದ್ದ ರೈತಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಟ್ರಯಲ್ ಬ್ಲಾಸ್ಟ್ ನಡೆಸುವ ವಿಚಾರ 2018ರಿಂದಲೂ ಪ್ರಸ್ತಾಪವಾಗುತ್ತಲೇ ಇದೆ. ಕೆಆರ್‌ಎಸ್ ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ರೈತರು ಟ್ರಯಲ್ ಬ್ಲಾಸ್ಟ್ ಬೇಡ ಎಂದು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ನಮಗೆ ಇದರಲ್ಲಿ ಬೇರೆ ಯಾವುದೇ ವಿಶೇಷ ಕಾಳಜಿ ಇಲ್ಲ. ನಮಗೆ ಜಲಾಶಯದ ಸುರಕ್ಷತೆಯೇ ಮುಖ್ಯ ಎಂದರು.‘ವಿಶೇಷ ಸುಗ್ರೀವಾಜ್ಞೆ ತನ್ನಿ’:
ರೈತರ ವಿರೋಧದ ನಡುವೆಯೂ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಅಣೆಕಟ್ಟು ಸುರಕ್ಷತಾ ಸಮಿತಿ ಸದಸ್ಯರು ಸರ್ಕಾರ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸುವಂತೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಗ್ರಹಿಸಿದರು.2018ರಲ್ಲಿ ಕೆಆರ್‌ಎಸ್ ಸಮೀಪದ ಗಣಿಗಾರಿಕೆ ಸ್ಥಳದಲ್ಲಿ ಮಹಾ ಸ್ಫೋಟವೇ ಆಗಿತ್ತು. ಅಣೆಕಟ್ಟೆಗೆ ಗಣಿಗಾರಿಕೆಯಿಂದ ಅಪಾಯವಿದೆ ಎಂಬುದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆಯನ್ನೂ ನೀಡಿತ್ತು. ಹೈಕೋರ್ಟ್ ಕೂಡ ಅಣೆಕಟ್ಟು ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿತ್ತು. ಆಗ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದುಕೊಂಡಿದ್ದೆವು ಎಂದರು.
ಆದರೆ, ಈಗ ಮತ್ತೆ ಟ್ರಯಲ್ ಬ್ಲಾಸ್ಟ್ ನಡೆಸಲು ಸರ್ಕಾರ ಮುಂದಾಗಿದೆ. ಸಚಿವರು 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದೀರಿ. ಹಾಗಾದರೆ 20 ಕಿ.ಮೀ. ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಅವಶ್ಯಕತೆಯೇ ಇಲ್ಲ. ಒಮ್ಮೆ ಟ್ರಯಲ್ ಬ್ಲಾಸ್ಟ್ ನಡೆಸಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟು ಮುಂದೆ ಅಣೆಕಟ್ಟೆಗೆ ಹಾನಿಯಾದರೆ ಮತ್ತೊಂದು ಅಣೆಕಟ್ಟು ಕಟ್ಟಲು ಸಾಧ್ಯವಿಲ್ಲ. ಟ್ರಯಲ್ ಬ್ಲಾಸ್ಟ್ ನಡೆಸದಂತೆ ‘ವಿಶೇಷ ಸುಗ್ರೀವಾಜ್ಞೆ’ ತರಬೇಕು ಎಂದು ಒತ್ತಾಯಿಸಿದರು.ಶ್ರವಣಬೆಳಗೊಳದ ಗೊಮ್ಮಟನ ಸುತ್ತ 8 ಕಿ.ಮೀ. ಗಣಿಗಾರಿಕೆ ನಡೆಸದಂತೆ ಆದೇಶವಿದೆ. ಕೆಆರ್‌ಎಸ್ ಅಣೆಕಟ್ಟು ಮೇಲೆ ಕೋಟ್ಯಂತರ ಜನ ಅವಲಂಬಿತರಾಗಿದ್ದಾರೆ. ಯಾವುದೇ ರೀತಿಯಲ್ಲೂ ಪರೀಕ್ಷಾರ್ಥ ಸ್ಫೋಟ ನಡೆಸುವುದು ಬೇಡ. ಈ ಬಗ್ಗೆ ಸುಗ್ರೀವಾಜ್ಞೆ ತರುವ ಮೂಲಕ ಸಚಿವರು ಮಾದರಿಯಾಗಬೇಕು ಎಂದು ಮನವಿ ಮಾಡಿದರು.
ಗಣಿಗಾರಿಕೆಯಿಂದ ಅಪಾಯ ನಿಶ್ಚಿತ:ರೈತಮುಖಂಡ ಪ್ರಸನ್ನ ಎನ್.ಗೌಡ ಮಾತನಾಡಿ, ವಿಶ್ವದಲ್ಲಿ ಸಾವಿರಾರು ಅಣೆಕಟ್ಟುಗಳಿವೆ. ಗಣಿಗಾರಿಕೆಯಿಂದ ಹಲವು ಅಣೆಕಟ್ಟೆಗಳಿಗೆ ಹಾನಿಯಾಗಿರುವ ಉದಾಹರಣೆ ಇದೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ಕೆಆರ್‌ಎಸ್‌ಗೂ ಹಾನಿಯಾಗುವುದು ನಿಶ್ಚಿತ ಎಂದು ದೃಢವಾಗಿ ಹೇಳಿದರು.
ಕೆಆರ್‌ಎಸ್ ಅಣೆಕಟ್ಟು ಸುರಕ್ಷತೆಗೆ ಸಂಬಂಧಿಸಿದಂತೆ ಅಣೆಕಟ್ಟು ಸುರಕ್ಷತಾ ಕಾಯಿದೆ ಇಲ್ಲಿ ಅನ್ವಯವಾಗುತ್ತಿಲ್ಲ. ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡುವುದರಿಂದ ಭವಿಷ್ಯದಲ್ಲಿ ಅಣೆಕಟ್ಟೆಗೆ ಉಂಟಾಗುವ ಅಪಾಯವನ್ನು ಹೈಕೋರ್ಟ್ಗೆಮನವರಿಕೆ ಮಾಡಿಕೊಡುವಲ್ಲಿ ಸರ್ಕಾರಿ ವಕೀಲರು ವಿಫಲರಾಗಿದ್ದಾರೆ. ಟ್ರಯಲ್ ಬ್ಲಾಸ್ಟ್ ಬೇಡ ಎಂದು ವಕೀಲರು ನ್ಯಾಯಾಲಯದ ಮುಂದೆ ಸಮರ್ಥ ವಾದ ಮಂಡಿಸಿಲ್ಲ ಎಂದು ನೇರವಾಗಿ ಆರೋಪಿಸಿದರು.
ಕೆಆರ್‌ಎಸ್ ಸಮೀಪವಿರುವ ಹತ್ತಾರು ಗಣಿ ಸ್ಥಳಗಳಲ್ಲಿ ಸ್ಫೋಟ ಸಂಭವಿಸಿದರೆ ಕೆಆರ್‌ಎಸ್ ಡ್ಯಾಂಗೆ ತೊಂದರೆಯಾಗುವುದು ನಿಶ್ಚಿತ. ಕೆಆರ್‌ಎಸ್ ನಿಂತಿರುವುದೇ ಕಲ್ಲಿನ ಮೇಲೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆದರೆ ತೊಂದರೆಯಾಗಲಿದೆ. ಈ ಬಗ್ಗೆ ಸುಗ್ರೀವಾಜ್ಞೆ ತರಲು ಸರ್ಕಾರಕ್ಕೆ ಅವಕಾಶವಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರಹಪಡಿಸಿದರು.ಪರೀಕ್ಷಾರ್ಥ ಸ್ಫೋಟದಿಂದ ಹಿಂದೆ ಸರಿಯಿರಿ:
ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಮಾತನಾಡಿ, ವಿಶ್ವ ಸಂಸ್ಥೆ ಇತ್ತೀಚೆಗೆ ಮಾಡಿರುವ ಆದೇಶದಲ್ಲಿ90 ವರ್ಷ ಮೇಲ್ಪಟ್ಟ ಎಲ್ಲಾ ಅಣೆಕಟ್ಟುಗಳ ವಿಸರ್ಜನೆಗೆ ಆದೇಶ ಮಾಡಿದೆ. ಆ ಪಟ್ಟಿಯಲ್ಲಿ ಕೆಆರ್‌ಎಸ್ ಅಣೆಕಟ್ಟು ಕೂಡ ಸೇರಿದೆ. ಇಂತಹ ಸ್ಥಳದಲ್ಲಿ ಟ್ರಯಲ್ ಬ್ಲಾಸ್ಟ್, ನಡೆಸಿ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಟ್ಟು ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಗೆ ಕೆಆರ್‌ಎಸ್ ಜಲಾಶಯ ಮತ್ತು ಬೇಬಿಬೆಟ್ಟ ಸೇರಿದೆ. ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಪಡೆಯದೇ ಟ್ರಯಲ್ ಬ್ಲಾಸ್ಟ್ ಮಾಡುತ್ತಿರುವುದೇ ಕಾನೂನು ಬಾಹಿರ. ಟ್ರಯಲ್ ಬ್ಲಾಸ್ಟ್ ವಿಚಾರದಿಂದ ಹಿಂದೆ ಬನ್ನಿ. 20 ಕಿ.ಮೀ. ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧ ಮಾಡುವಂತೆ ಆಗ್ರಹಪಡಿಸಿದರು.ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾನೀನಿನಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ತಾಂತ್ರಿಕ ಅಧಿಕಾರಿ ಶಿವಪ್ರಸಾದ್ , ಎ.ಎಸ್.ಪಿ ತಿಮ್ಮಯ್ಯ , ರೈತ ನಾಯಕಿ ಸುನಂದಾ ಜಯರಾಂ, ಕೃಷ್ಣಪ್ರಸಾದ್, ಲಿಂಗಪ್ಪಾಜಿ, ಶಿವಪ್ಪ, ಕೋಡಿಹಳ್ಳಿ ಚಂದ್ರಶೇಖರ್, ಕಾಳದೇವೇಗೌಡ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.