ಚಿತ್ರದುರ್ಗ: ಕಾರ್ಬನ್ ಉತ್ಪಾದನೆ ನಿಲ್ಲಿಸದಿದ್ದರೆ ಜಾಗತಿಕ ತಾಪಮಾನ ಮತ್ತಷ್ಟು ಹೆಚ್ಚಲಿದ್ದು, ಜೀವ ಸಂಕುಲಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಚಿಂತಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಕ್ರೀಡಾ ಭವನದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಚಿತ್ರದುರ್ಗ ಪರಿಸರ ಸಮಸ್ಯೆ ಕುರಿತ ರಾಜ್ಯಮಟ್ಟದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನ ಎಲ್ಲ ಉದ್ದಿಮೆದಾರರು ಈ ಕಾರ್ಬನ್ ಉತ್ಪಾದನೆ ನಿಲ್ಲಿಸುವ ಬಗ್ಗೆ ಸ್ಪಷ್ಟ ನಿಲುವು ತಾಳಬೇಕಾದ ಅಗತ್ಯವಿದೆ ಎಂದರು.ಏರುತ್ತಿರುವ ತಾಪಮಾನದಿಂದಾಗಿ ಹವಾಮಾನದಲ್ಲಿ ತೀವ್ರ ತೆರನಾದ ಬದಲಾವಣೆಗಳಾಗುತ್ತಿವೆ. ಬಂಡವಾಳಶಾಹಿ ವ್ಯವಸ್ಥೆ ಪಥ ಬದಲಾಗದಿದ್ದರೆ ಭವಿಷ್ಯದಲ್ಲಿ ಮನುಷ್ಯರು ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಜಲಚರಗಳು ಬೆಲೆ ತೆರಬೇಕಾಗುತ್ತದೆ. ತಾಪಮಾನ ಏರಿಕೆ ಕಮ್ಮಿ ಮಾಡಲು ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡ ನಿರ್ಣಯಗಳು ಪಾಲನೆಯಾಗಬೇಕಾದ ತುರ್ತು ಅನಿವಾರ್ಯತೆ ಇದೆ.
2015ರಲ್ಲಿ ಪ್ಯಾರಿಸ್‍ನಲ್ಲಿ ನಡೆದ ಕಾಪ್ ಸಮಾವೇಶದಲ್ಲಿ ಕಾರ್ಬನ್ ಉತ್ಪಾದನೆ ಕಮ್ಮಿ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 2020ರವೇಳೆಗೆ ಶೇ.45ರಷ್ಟು ಕಾರ್ಬನ್ ಉತ್ಪಾದನೆ ಕಡಿಮೆ ಮಾಡಬೇಕು ಎಂಬುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ದೇಶಗಳು ಒಪ್ಪಿದ್ದವು. ಆದರೆ ಈವರೆಗೆ ಶೇ.5ರಷ್ಟು ಕೂಡ ಕಮ್ಮಿ ಆಗಿಲ್ಲ. ಮುಂದಿನ 2045ರ ವೇಳೆಗೆ ಕಾರ್ಬನ್ ಉತ್ಪಾದನೆ ಸೊನ್ನೆಗೆ ತರಬೇಕು ಎಂಬ ತೀರ್ಮಾನಗಳಾಗಿವೆ. ಆದರೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶ ಬದುಕಬೇಕೆಂದರೆ ಕೈಗಾರಿಕೆಗಳು ಬೇಕು. ಕೈಗಾರಿಕೆಗಳಿಗೆ ಇಂಧನ ಶಕ್ತಿ ಬೇಕು. ಕಾರ್ಬನ್ ಅನ್ನು ಜಾಸ್ತಿ ಉತ್ಪಾದನೆ ಮಾಡದೇ ಪರ್ಯಾಯ ಇಂಧನ ಉತ್ಪಾದನೆ ಮಾಡಲಿಕ್ಕೆ ಅಮೇರಿಕಾದಂತಹ ದೇಶಗಳು ಸಹಕರಿಸಬೇಕಿದೆ ಎಂದರು.ಉದ್ಯಮಿಗಳ ದುರಾಸೆಗಳಿಂದಾಗಿ ಪರಿಸರದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಪೈಪೋಟಿಯ ಸಂದರ್ಭಗಳು ಆಕ್ರಮಣ ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಸಿವೆ. ಕೈಗಾರಿಕೆ ಕ್ರಾಂತಿ ನಂತರ ಐಷರಾಮಿ ಜೀವನಕ್ಕಾಗಿ ಕಾರ್ಪೋರೇಟ್ ಕಂಪನಿಗಳು ತಹತಹಿಸುತ್ತಿದ್ದು ಇದರಿಂದಾಗಿ ಕಾರ್ಬನ್ ಉತ್ಪಾದನೆ ಜಾಸ್ತಿಯಾಗುತ್ತಿದೆ. ಕಾರ್ಬನ್ ಪ್ರಮಾಣವ ಶೂನ್ಯಕ್ಕೆ ತಂದು ನಿಲ್ಲಿಸಬೇಕು. ಭಾರತದಲ್ಲಿ ಕೈಗಾರಿಕೆಗಳು ಇಲ್ಲವೆಂದರೆ ಉದ್ಯೋಗವೇ ಇಲ್ಲವೆಂಬ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ತಾಪಮಾನ ಹೆಚ್ಚಳದ ಕಡೆ ಗಂಭೀರ ದೃಷ್ಟಿ ಹಾಯಿಸಲಾಗುತ್ತಿಲ್ಲ. ಕಾರ್ಪೋರೇಟ್ ಕಂಪನಿಗಳ ಧಾವಂತದಿಂದಾಗಿ ಕಳೆದ ವರ್ಷ ಭಾರತದಲ್ಲಿ 1.67 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇ.40ರಷ್ಟು ಮಂದಿ ನಿರುದ್ಯೋಗಿ ಯುವಕರು ಹಾಗೂ ಸಣ್ಣ ಪುಟ್ಟ ಉದ್ಯಮ ನಡೆಸುವವರು ಸೇರಿದ್ದಾರೆ ಎಂದರು.
50 ವರ್ಷಗಳಲ್ಲಿ ವಾಯು ಆಧಾರಿತ ಇಂಧನ ಮೂಲಗಳನ್ನು ಉತ್ಪಾದನೆಗೆ ಹೋಗುತ್ತೇವೆ. ಆದರೆ ಕಲ್ಲಿದ್ದಲು ನಮ್ಮ ಇಂಧನ ಮೂಲವಾಗಿ ಮುಂದಿನ 50 ವರ್ಷಗಳ ವರೆಗೆ ಇದ್ದೇ ಇರುತ್ತೆ ಎಂದು ಘೋಷಣೆ ಮಾಡಿದವು. ಇದಕ್ಕೆ ಅರಬ್ ದೇಶಗಳು ಕೂಡ ಸಹಮತ ವ್ಯಕ್ತಪಡಿಸಿದವು. ಪರಿಸರದಲ್ಲಿ ಕಾರ್ಬನ್ ಕಮ್ಮಿ ಮಾಡುವಲ್ಲಿ ಸಂಘಟನಾತ್ಮಕ ಪ್ರಯತ್ನ ಮಾಡಬೇಕಿದೆ. ಜಗತ್ತಿನ ಎಲ್ಲಾ ಉದ್ಯಮಿಗಳು ಉದ್ಯಮ ನಿಲ್ಲಿಸಿದರೆ ಇದು ಸಾಧ್ಯವಾಗಲಿದೆ ಎಂದು ಶಿವಸುಂದರ್ ಹೇಳಿದರು.ತಾಪಮಾನ ಏರಿಕೆಯಿಂದ ಜೀವಸಂಕುಲ, ಗಾಳಿ, ನೀರು ಮತ್ತು ಆಹಾರದ ಮೇಲಾಗುತ್ತಿರುವ ದುಷ್ಪರಿಣಾಮಗಳು ವಿಷಯ ಕುರಿತು ಯಲ್ಲಪ್ಪರೆಡ್ಡಿ ವರ್ಚುಯಲ್ ಮೂಲಕ ಮಾತನಾಡಿದರು. ಕೆ.ಜಿ.ಸುರೇಶ್,ಸಂಘಟಕ ಉಳುಮೆ ಪ್ರತಿಷ್ಠಾನದ ಅವಿನಾಶ್, ಚಿತ್ರದುರ್ಗ ವಿಜ್ಞಾನ ಕೇಂದ್ರದ ಜೆ.ಯಾದವರೆಡ್ಡಿ, ಎಂ.ಆರ್.ದಾಸೇಗೌಡ, ಜಲತಜ್ಞ ಎನ್.ಜೆ.ದೇವರಾಜರೆಡ್ಡಿ, ಕವಿ ಚಂದ್ರಶೇಖರ್ ತಾಳ್ಯ,ಕಸಾಪ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಜನಶಕ್ತಿ ಸಂಘಟನೆಯ ಶಫಿವುಲ್ಲಾ, ರೈತ ಸಂಘದ ಧನಂಜಯ, ಸಿದ್ದರಾಜ್ ಜೋಗಿ, ಸಂಜೀವಿನ ಜೀವ ರಕ್ಷಕ ಟ್ರಸ್ಟ್‌ನ ಡಾ.ಸೌಮ್ಯ ಮಂಜುನಾಥಸ್ವಾಮಿ, ಕೆ.ಹೊಳೆಯಪ್ಪ, ಸಂಗೇನಹಳ್ಳಿ ಅಶೋಕ್ ಕುಮಾರ್, ಪಿ.ವಿ.ಮಲ್ಲಿಕಾರ್ಜುನಯ್ಯ, ಪರಮೇಶ್ವರಪ್ಪ, ಸತ್ಯನಾರಾಯಣ ರೆಡ್ಡಿ ಮುಂತಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.