ಕಾಸರಗೋಡಿನಲ್ಲಿ ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ : ಯಕ್ಷಗಾನ ಪ್ರದರ್ಶನ ಉದ್ಘಾಟನೆ

KannadaprabhaNewsNetwork | Published : Aug 28, 2024 12:52 AM

ಸಾರಾಂಶ

ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಎರಡು ದಿನಗಳ ‘ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ-ಯಕ್ಷಗಾನ ಪ್ರದರ್ಶನ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಸರಗೋಡು

ಯಕ್ಷಗಾನ ಕಲೆಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಸಬೇಕು. ಅವರಲ್ಲಿ ಭವಿಷ್ಯದ ಕಲಾವಿದರನ್ನು ರೂಪಿಸಬೇಕು ಎಂಬ ಉದ್ದೇಶವನ್ನು ಯಕ್ಷಗಾನ ಅಕಾಡೆಮಿ ಹೊಂದಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಶನಿವಾರ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ‘ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ-ಯಕ್ಷಗಾನ ಪ್ರದರ್ಶನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಮಾಯಣ, ಮಹಾಭಾರತದಂತರ ಪುಣ್ಯ ಕಥಾನಕಗಳನ್ನು ಯಕ್ಷಗಾನ ರೂಪದಲ್ಲಿ ಮಕ್ಕಳಿಗೆ ತಿಳಿಯ ಪಡಿಸಿದಾಗ ಅವರಲ್ಲಿ ನೈತಿಕ ಮೌಲ್ಯಗಳು ಜಾಗೃತವಾಗುತ್ತವೆ. ತಂದೆ ತಾಯಿ, ಗುರುಹಿರಿಯರಿಗೆ ಗೌರವ ಕೊಡುವುದಲ್ಲದೆ, ಸಮಾಜದ ಒಬ್ಬ ನಾಗರಿಕನಾಗಿಯೂ ರೂಪುಗೊಳ್ಳುತ್ತಾರೆ. ಭವಿಷ್ಯದಲ್ಲಿ ಉತ್ತಮ ಕಲಾವಿದನಾಗದಿದ್ದರೂ, ಒಬ್ಬ ಉತ್ತಮ ಯಕ್ಷಗಾನ ಪ್ರೇಕ್ಷಕನಾಗುವುದರಲ್ಲಿ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದು ಈ ಸರಣಿಯಲ್ಲಿ ಎರಡನೇಯದ್ದಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತ್ರ ಅವರು ಮಾತನಾಡಿ, ಯಕ್ಷಗಾನ ಕಲೆಗೆ ಯಕ್ಷಗಾನ ಅಕಾಡೆಮಿ ನೀಡುತ್ತಿರುವ ಪ್ರೋತ್ಸಾಹ ಪ್ರಶಂಸನೀಯ. ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಕಲೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು. ಮಂಜೇಶ್ವರದ ಶಾಸಕ ಎ.ಕೆ.ಅಶ್ರಫ್ ಅವರು ಮಾತನಾಡಿ, ಈ ಪುಣ್ಯಭೂಮಿ ಭಾರತದಲ್ಲಿ 1956 ರಲ್ಲಿ ಕಾಸರಗೋಡು ಅನಿರೀಕ್ಷಿತವಾಗಿ ಕೇರಳಕ್ಕೆ ಸೇರಿದರೂ, ಕನ್ನಡ ಸಾಂಸ್ಕೃತಿಕ ರಂಗಕ್ಕೆ ವಿಶೇಷ ಕೊಡುಗೆ ನೀಡಿದೆ. ಮಂಜೇಶ್ವರ ಗೋವಿಂದ ಪೈ, ಪಾರ್ತಿಸುಬ್ಬ ಅವರಂತಹ ಮಹಾನ್ ಕವಿಗಳು, ಎಡನೀರು ಮಠ ಯಕ್ಷಗಾನಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತಿಲ್ಲ. ಕರ್ನಾಟಕದಲ್ಲಿ ಯಕ್ಷಗಾನಕ್ಕೆ ಅತ್ಯುತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಕೇರಳದ ಪ್ರಾಂತೀಯ ಮಟ್ಟದಲ್ಲಿ ಯಕ್ಷಗಾನ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಕಾಸರಗೋಡೇ ಪ್ರಥಮ ಸ್ಥಾನ ಪಡೆಯುತ್ತಿದ್ದು, ಇದೀಗ ಇನ್ನಿತರ ಪ್ರಾಂತ್ಯಗಳು ಕೂಡಾ ಸ್ಪರ್ಧೆಯನ್ನು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು. ಈ ಸಂದರ್ಭ ಅವರನ್ನು ಗೌರವಿಸಲಾಯಿತು.ಶಿಬಿರದಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯದ ಪ್ರಾಥಮಿಕ ಹಂತದ ದಾಖಲೀಕರಣ, ಪ್ರಾತ್ಯಕ್ಷಿಕೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ರವಿಶಂಕರ ವಳಕ್ಕುಂಜ, ಲಕ್ಷ್ಮಣ ಕುಮಾರ್ ಮರಕಡ, ಡಾ.ಶ್ರುತಕೀರ್ತಿ ರಾಜ್ ಉಜಿರೆ, ಗಣೇಶ್ ಪಾಲೆಚ್ಚಾರು, ಶ್ರೀಕೃಷ್ಣ ದೇವಕಾನ, ರಾಮಮೂರ್ತಿ ಕುದ್ರೆಕ್ಕೂಡ್ಲು, ಗಣೇಶ್ ಭಟ್ ಬೆಳಾಲು, ರವಿ ಮುಂಡಾಜೆ, ರಂಜಿತ್ ಗೋಳಿಯಡ್ಕ, ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ವಸಂತ ಗೌಡ ಕಾಯರ್ತಡ್ಕ ಸಹಕರಿಸಿದರು.ಕಾರ್ಯಕ್ರಮದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಖ್ಯಾತ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಜಿ.ವಿ.ಎಸ್.ಉಲ್ಲಾಳ್ ಹಾಗೂ ಪ್ರಥ್ವಿರಾಜ್ ಕವತ್ತಾರು ಉಪಸ್ಥಿತರಿದ್ದರು. ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರಿತಾ ಎನ್. ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಗುರುರಾಜ್ ಭಟ್ ವಂದಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕರಾದ ಸತೀಶ್ ಅಡಪ್ಪ ಸಂಕಬೈಲು ಕಾರ್ಯಕ್ರಮ ನಿರೂಪಿಸಿದರು.

Share this article