ಎಚ್.ಎನ್ .ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಅಪಾರ ಭಕ್ತಾದಿಗಳೊಂದಿಗೆ ಅ.11 ರಂದು ಹಲಸಹಳ್ಳಿಯ ಗವಿಮಠದಲ್ಲಿ ವಿಜೃಂಭಣೆಯ ತೆಪ್ಪೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಪುಣ್ಯಕ್ಷೇತ್ರ ಕಾಶಿ ವಿಶ್ವನಾಥ ಕ್ಷೇತ್ರದಲ್ಲಿ ಏಕದಳ ಬಿಲ್ವಪತ್ರೆ ಮರ ಹೊರತುಪಡಿಸಿದರೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಸಮೀಪದ ಷಡಕ್ಷರ ದೇವಾ ಗವಿಮಠದ ಕ್ಷೇತ್ರದಲ್ಲಿ ಮಾತ್ರ ಈ ಮರ ಇರುವುದು ವಿಶೇಷವಾಗಿದೆ.ಕೃತಿಗಳನ್ನು ರಚಿಸಲು ಶ್ರೀ ಷಡಕ್ಷರ ದೇವಾ ಸ್ಥಳವನ್ನು ಹುಡುಕಿಕೊಂಡು ಹೊರಟು ಹಲಸಹಳ್ಳಿ ಸಮೀಪ ಒಂದು ಗವಿ ಒಳಗೆ ಕುಳಿತು ರಾಜಶೇಖರ ವಿಲಾಸಂ, ಶಬರ ಶಂಕರ ವಿಲಾಸಂ ,ಋಷಭೇಂದ್ರ ವಿಜಯಂ ಮೇರು ಕೃತಿಗಳನ್ನು ರಚಿಸಿದ್ದು, ಕವಿಕರಣ ರಾಸಾಯನ ಸಂಸ್ಕೃತ ಮಹಾಕಾವ್ಯವಾಗಿದ್ದು , ಶಿವಾದಿತ್ಯ ರತ್ನಾವಳಿ ,ಭಕ್ತಾದಿತ್ಯ ರತ್ನಾವಳಿ ಮೊದಲಾದ 16 ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪುಣ್ಯಕ್ಷೇತ್ರವಾಗಿದೆ.
ಈ ಸ್ಥಳಕ್ಕೆ ಷಡಕ್ಷರದೇವ ಗವಿಮಠ ಎಂದು ಹೆಸರು ಬಂದಿದೆ. ಈ ಸ್ಥಳದಲ್ಲಿ ಬಸವೇಶ್ವರ ಪ್ರೌಢಶಾಲೆಯನ್ನು ಸಹ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನವನ್ನು ನೀಡಲಾಗುತ್ತಿತ್ತು. ಈಗ ಡಿ.ಹಲಸಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸವೇಶ್ವರ ಪ್ರೌಢಶಾಲೆ ನಡೆಯುತ್ತಿದೆ.ಈ ಪುಣ್ಯಕ್ಷೇತ್ರ ದಿನೇ ದಿನಕ್ಕೆ ಹೆಸರುವಾಸಿಯಾಗುತ್ತಿದೆ. ಮದುವೆ, ಶುಭ ಸಮಾರಂಭಗಳು ನಡೆಯುತ್ತಿವೆ. ಸ್ವಾಮೀಜಿಗಳ, ಭಕ್ತಾದಿಗಳ ಸಹಕಾರದಿಂದ ನೂತನವಾಗಿ ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದಾರೆ ಹಾಗೂ ಮಠಕ್ಕೆ ಗೋಪುರವನ್ನು ನಿರ್ಮಿಸಿ ಈ ಸ್ಥಳ ಪುಣ್ಯಕ್ಷೇತ್ರವಾಗಲು ಶ್ರಮಿಸುತ್ತಿದ್ದಾರೆ.
ಕ್ಷೇತ್ರ ಶ್ರೀ ಬಸವೇಶ್ವರಸ್ವಾಮಿಯು ಇಲ್ಲಿಗೆ ಬರುವ ಭಕ್ತರ ಕಷ್ಟ- ಕಾರ್ಪಣ್ಯಗಳನ್ನು ನಿವಾರಿಸುತ್ತಾ ಜಿಲ್ಲೆಯಲ್ಲಿ ಅಪಾರ ಭಕ್ತಾದಿಗಳನ್ನು ಒಳಗೊಂಡಿದೆ. ದಿನನಿತ್ಯ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗವಿಮಠದ ಕೊಳದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ತೆಪ್ಪೋತ್ಸವ, ಶಮಿ ಪೂಜೆಯ ಕಾರ್ಯಕ್ರಮ ನಡೆಯುತ್ತಿದೆ.ತೆಪ್ಪೋತ್ಸವ ಹಾಗೂ ಶಮಿ ಪೂಜೆ ವೇಳೆ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಯ ಆಶೀರ್ವಾದದೊಂದಿಗೆ ಚೆನ್ನಬಸವ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ನೇತೃತ್ವವನ್ನು ಹಲಸಹಳ್ಳಿ ಗವಿಮಠದ ಷಡಕ್ಷರ ಸ್ವಾಮೀಜಿ ಮತ್ತು ತೋಟದಳ್ಳಿ ಮಠದ ಬಸವ ಪ್ರಭು ಸ್ವಾಮೀಜಿ ವಹಿಸಲ್ಲಿದ್ದಾರೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಜಲ ಮಂಡಳಿ ಮುಖ್ಯ ಅಭಿಯಂತರ ಎಂ.ದೇವರಾಜ್ ತೆಪ್ಪೋತ್ಸವವನ್ನು ಉದ್ಘಾಟಿಸುವರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ ಹಲವರನ್ನು ಸನ್ಮಾನಿಸುವ ಜೊತೆಗೆ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ 2023 -24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ಟದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಹಲಗೂರು ಬಾಣಸಮುದ್ರದ ಗೇಟ್ ಬಳಿ ಮತ್ತು ಹಲಸಹಳ್ಳಿ ಕಾಲುವೆಯ ಬಳಿ ಶ್ರೀ ಷಡಕ್ಷರ ದೇವಾ ಗವಿಮಠಕ್ಕೆ ಹೋಗುವ ರಸ್ತೆಗೆ ದಾರಿ ಎಂಬ ಸೂಚನಾ ಫಲಕಗಳನ್ನು ಸಂಬಂಧಪಟ್ಟವರು ಅಳವಡಿಸಿದರೆ ಹೊಸದಾಗಿ ಬರುವ ಭಕ್ತಾದಿಗಳಿಗೆ ಸಹಕಾರಿಯಾಗಲಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.