ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಗರದಲ್ಲಿರುವ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ್ದಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ಭಾನುವಾರ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ ಆವರಣದಲ್ಲಿ ₹320 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಾದ್ಯಂತ 15 ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್ ಕಟ್ಟಡಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಚಾಲನೆ ನೀಡಿದ್ದಾರೆ. ಇದರಲ್ಲಿ ಹುಬ್ಬಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಕಾಮಗಾರಿಯೂ ಒಂದು. ಅಂತಾರಾಷ್ಟ್ರೀಯ ದರ್ಜೆಯ ಮೂಲಸೌಕರ್ಯದೊಂದಿಗೆ ಹುಬ್ಬಳ್ಳಿ ಹೊಸ ಟರ್ಮಿನಲ್ ಕಂಗೊಳಿಸಲಿದೆ ಎಂದರು.₹320 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದ್ದು, ಅತ್ಯಂತ ವೇಗವಾಗಿ ಕಾಮಗಾರಿ ನಿರ್ವಹಿಸಲಾಗುತ್ತದೆ. ಎರಡು ವರ್ಷದ ನಂತರ ಇಲ್ಲಿ 4ರಿಂದ 10 ವಿಮಾನಗಳ ಪಾರ್ಕಿಂಗ್ ವ್ಯವಸ್ಥೆ ಸಾಧ್ಯವಾಗಲಿದೆ. ನಿತ್ಯ 2400 ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಅತ್ಯಾಧುನಿಕ ಸೌಲಭ್ಯ:ಈ ವಿಮಾನ ನಿಲ್ದಾಣ ಹಲವು ವರ್ಷಗಳ ಹಿಂದೆ ಏರ್ ಸ್ಟ್ರಿಪ್ ಆಗಿತ್ತು. ಇದಕ್ಕೆ ಪ್ರಮುಖ ಕಾರಣ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು. ಸಣ್ಣದಾದ ಜಾಗದಲ್ಲಿ ರನ್‌ವೇ ಮಾಡಿ ಏರ್‌ಸ್ಟ್ರಿಪ್ ಮಾಡುವಲ್ಲಿ ಶ್ರಮಿಸಿದವರು. ಆನಂತರ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಅಭಿವೃದ್ಧಿ ಹೊಂದಿತು. ಈಗ ನಮ್ಮ ಸರ್ಕಾರದ ಅಧಿಕಾರದ ಅವಧಿಯಲ್ಲಿಯೇ ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸುವುದರೊಂದಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಪರಿವರ್ತನೆಯೇ ವಿರೋಧಿಗಳಿಗೆ ಉತ್ತರ:ಈ ಹಿಂದೆ ದೇಶದ ಆರ್ಥಿಕ ಸ್ಥಿತಿ ಜಗತ್ತಿನಲ್ಲಿಯೇ ದುರ್ಬಲಾವಸ್ಥೆಗೆ ತಲುಪಿತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಇಂದು ಅಭಿವೃದ್ಧಿಯಲ್ಲಿ ನಾಗಾಲೋಟಕ್ಕೆ ಕಾರಣವಾಗಿದ್ದು, ಇಂದು ಭಾರತ ಜಗತ್ತಿನಲ್ಲಿಯೇ ಅಭಿವೃದ್ಧಿ ಹೊಂದಿದ 5ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಪರಿವರ್ತನೆಯೇ ವಿರೋಧಿಗಳಿಗೆ ನಾವು ನೀಡುವ ಉತ್ತರವಾಗಿದೆ ಎಂದು ಜೋಶಿ ಹೇಳಿದರು.
ಅಭಿವೃದ್ಧಿಗೆ ಆದ್ಯತೆ:ಒಂದೇ ಅವಧಿಯಲ್ಲಿ ಒಂದು ಸಾವಿರ ವಿಮಾನ ಖರೀದಿಗೆ ಮುಂದಾಗಿರುವುದು ಜಗತ್ತಿನಲ್ಲಿಯೇ ಭಾರತ ಮೊದಲು. ಇದು ಭಾರತದ ಶಕ್ತಿ ಏನೆಂಬುದನ್ನು ತಿಳಿಸುತ್ತದೆ. ಹೊಸ ವಿಮಾನಗಳ ಖರೀದಿಯ ನಂತರ ಕೆಲವು ವಿಮಾನಗಳು ಹುಬ್ಬಳ್ಳಿಗೂ ಬರಲಿದ್ದು, ಅದಕ್ಕೆ ತಕ್ಕಂತೆ ನಿಲ್ದಾಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.
ಅಭಿನಂದನೆ ಸಲ್ಲಿಸುವೆ:ಅಭಿವೃದ್ಧಿ ಹೊಂದುತ್ತಿರುವ ಹು-ಧಾ ಮಹಾನಗರಕ್ಕೆ ಈ ಹೊಸ ಕಾಮಗಾರಿ ಹೆಮ್ಮೆಯ ಗರಿಯಾಗಲಿದ್ದು, ವಿಕಸಿತ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ. ಈ ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿದರು. ಈ ವೇಳೆ ಶಾಸಕ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಪಾಲಿಕೆ ಮೇಯರ್ ವೀಣಾ ಭಾರದ್ವಾಡ, ಜಿಲ್ಲಾಧಿಕಾರಿ ದಿವ್ಯಪ್ರಭು, ಹು-ಧಾ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಪಾಲ್ಗೊಂಡಿದ್ದರು.