ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಪಟ್ಟಣದಲ್ಲಿ ಶರಣರು, ಸಂತರು, ಸಮಾಜ ಸುಧಾರಕರು, ರಾಷ್ಟ್ರ ನಾಯಕರ ವೃತ್ತಗಳನ್ನು ನಿರ್ಮಾಣ ಮಾಡಿ ಪಟ್ಟಣದ ರಸ್ತೆಗಳ ಅಂದ ಹೆಚ್ಚಿಸಿರುವುದಲ್ಲದೆ, ಆ ಮಹಾನ್ ನಾಯಕರ, ಶರಣರ ಆದರ್ಶ ಬದುಕು ಇಂದಿನ ಯುವ ಪೀಳಿಗೆ ವೃತ್ತವನ್ನಾದರೂ ನೋಡಿ ತಿಳಿದುಕೊಳ್ಳಲಿ ಎಂಬ ಸದಾಶಯದಿಂದ ನಿರ್ಮಾಣ ಮಾಡಿರುವುದು ಶ್ಲಾಘನೀಯ.
ಆದರೆ, 2013 ಫೆ.1ರಂದು ಪ್ರತಿಷ್ಠಾಪನೆಗೊಂಡಿರುವ ಬಸವೇಶ್ವರ ವೃತ್ತ ಮಾತ್ರ ಅಂದ ಕಳೆದುಕೊಂಡಿದೆ. ದಿನನಿತ್ಯ ವಾಹನಗಳು ಹಾಯ್ದು ಸಾಮಾಜಿಕ ಕ್ರಾಂತಿಯ ಹರಿಕಾರ ವಿಶ್ವಗುರು ಬಸವೇಶ್ವರ ವೃತ್ತದ ಗೋಡೆಗಳ ಕಲ್ಲುಗಳು ಬೀಳುತ್ತಿವೆ. ವೃತ್ತಕ್ಕೆ ಅಳವಡಿಸಿದ ಗ್ರಾನೈಟ್ ಕಲ್ಲು ಕಳಚಿ ಬಿದ್ದಿದೆ. ಕಾರಂಜಿ ನೆಲಕಚ್ಚಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳು ಬೆಳಗದೆ ಅಂದ ಕಳೆದುಕೊಂಡಿವೆ. ವೃತ್ತದ ತುಂಬೆಲ್ಲಾ ಧೂಳು ತುಂಬಿದೆ. ಇದರಿಂದ ವೃತ್ತ ಅಸ್ತವ್ಯಸ್ತವಾಗಿದೆ. ನಿರ್ವಹಣೆ ಮಾಡಬೇಕಾದ ಪುರಸಭೆ ಮಾತ್ರ ಮಹಾನ್ ನಾಯಕರ ಜಯಂತಿ ದಿನದಂದು ಮಾತ್ರ ಎಲ್ಲ ವೃತ್ತಗಳನ್ನು ಸ್ವಚ್ಛ ಮಾಡಿದಂತೆ ನೀರು ಚೆಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಸವೇಶ್ವರ ವೃತ್ತ ಸ್ವಚ್ಛತೆ ಇಲ್ಲದೆ, ಬಣ್ಣವಿಲ್ಲದೆ, ಅಭಿವೃದ್ಧಿ ಇಲ್ಲದೆ ಅಂದ ಕಳೆದುಕೊಂಡು ಅನಾಥವಾಗಿ ನಿಂತಿದೆ.ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಪೂರ್ವಕ್ಕೆ ಮುಖಮಾಡಿ ನಿಲ್ಲಿಸಿದ ಜಗಜ್ಯೋತಿ ಬಸವೇಶ್ವರ ಮೂರ್ತಿಯ ವೃತ್ತ ವಿಜಯಪುರ, ಸೊಲ್ಲಾಪುರ, ಕಲಬುರಗಿಗೆ ಹೋಗುವ ಮುಖ್ಯ ರಸ್ತೆಗಳನ್ನು ಸಂಪರ್ಕಿಸುತ್ತಿದ್ದು, ಅದನ್ನು ಅಭಿವೃದ್ಧಿ ಪಡಿಸಿ ಪಟ್ಟಣದ ಅಂದ ಹೆಚ್ಚಿಸುವ ಕೆಲಸ ಪುರಸಭೆ ಮಾಡದೇ ಇರುವುದ ದುರ್ದೈವದ ಸಂಗತಿ.
ಸಮಾನತೆ, ಕಾಯಕ, ದಾಸೋಹದ ಕಲ್ಪನೆ ಮೂಡಿಸಿದ ಬಸವೇಶ್ವರರ ನಾಡಿನಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಇರಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.-----
ಮೂರ್ನಾಲ್ಕು ವರ್ಷದ ಹಿಂದೆ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ದೇಣಿಗೆ ಪಡೆದ ಹಣದಿಂದ ವಿದ್ಯುತ್ ದೀಪ,ಕಾರಂಜಿ ವ್ಯವಸ್ಥೆ ಮಾಡಲಾಗಿದ್ದು, ಪುರಸಭೆ ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ಸದ್ಯ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಸವೇಶ್ವರ ವೃತ್ತದ ಅಭಿವೃದ್ಧಿ ಕುರಿತು ಚರ್ಚೆ ಮಾಡಲಾಗಿದೆ. ಅಭಿವೃದ್ಧಿ ಮಾಡುವ ಕುರಿತು ಠರಾವ್ ಪಾಸ್ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಅಭಿವೃದ್ಧಿ ಮಾಡಿಲ್ಲ.- ಅನೀಲಗೌಡ ಬಿರಾದಾರ ಬಸವ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಇಂಡಿಬಸವಣ್ಣನವರು ಜಗತ್ತಿಗೆ ಸಮಾನತೆಯ ದಾರಿ ತೋರಿಸಿದ್ದಾರೆ. ಅವರ ವೃತ್ತ ಅಭಿವೃದ್ಧಿಪಡಿಸುವುದು, ಅವರ ವಚನಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡುವುದು ನಮ್ಮ ಕರ್ತವ್ಯ. ನಾನು ಇಂಡಿ ಪುರಸಭೆಗೆ ಪ್ರಭಾರಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು 4-5 ದಿನವಾಗಿದೆ. ಬಸವೇಶ್ವರ ವೃತ್ತದ ಅಭಿವೃದ್ಧಿ ಕುರಿತು ಶಾಸಕರು ಹಾಗೂ ಪುರಸಭೆ ಆಡಳಿತಾಧಿಕಾರಿ(ಎಸಿ) ಸಲಹೆ ಪಡೆದು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ಶಿವಾನಂದ ಪೂಜಾರಿ,ಮುಖ್ಯಾಧಿಕಾರಿ(ಪ್ರಭಾರ),ಪುರಸಭೆ,ಇಂಡಿ