ವಚನ ಕಮ್ಮಟದ 4ನೇ ದಿನದ ಕಾರ್ಯಕ್ರಮದಲ್ಲಿ ಗದುಗಿನ ತೋಟದ ಸಿದ್ಧರಾಮ ಸ್ವಾಮೀಜಿ
ಅಖಿಲ ಭಾರತ ವೀರಶೈವ ಸಭಾ ಎನ್ನುವಂಥದ್ದು ಒತ್ತಾಯದಿಂದ ಬಂದಿದ್ದು, ಅದನ್ನು ಲಿಂಗಾಯತ ಸಭಾ ಎಂದು ಮರು ನಾಮಕರಣ ಮಾಡಬೇಕು ಎಂದು ಗದುಗಿನ ತೋಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ನಡೆದ ವಚನ ಕಮ್ಮಟದ 4ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ವೀರಶೈವ ಎನ್ನುವ ಪದವನ್ನು ವಚನಗಳಲ್ಲಿ ಇಲ್ಲ. ವೀರಶೈವ ಪದ ಮೊಟ್ಟಮೊದಲು ಬಳಕೆಯಾಗಿರುವುದು ಭೀಮ ಕವಿಯ ಬಸವಪುರಾಣದಲ್ಲಿ. ಇವತ್ತು ವೀರಶೈವ ಪದದ ಮೇಲೆ ಹಕ್ಕು ಸಾಧಿಸುವ ವ್ಯಕ್ತಿಗಳು ಇವತ್ತು ನಮ್ಮ ಮಧ್ಯೆ ಇದ್ದಾರೆ. ವೀರಶೈವ ಪದ ಪ್ರಾಮುಖ್ಯತೆಗೆ ಹುಟ್ಟಿಕೊಂಡಿದೆಯೇ ಹೊರತು ಹಕ್ಕು ಚಲಾಯಿಸುವುದಕ್ಕಲ್ಲ. ತಂತ್ರ, ಕಾರ್ಯತಂತ್ರ, ಕುತಂತ್ರದಿಂದ ವೀರಶೈವ ಪದವನ್ನು ಸೇರಿಸಲಾಗಿದೆ ಎಂದರು.
ಬಸವಾದಿ ಶಿವಶರಣರಿಗೆ ವೈದಿಕ ಪುರೋಹಿತ ಶಾಹಿಯಿಂದ ಸಾಮಾನ್ಯ ಜನರನ್ನು ಮುಕ್ತಗೊಳಿಸಬೇಕು ಎನ್ನುವ ಕಾರಣಕ್ಕೆ ವಚನ ಚಳವಳಿ ಮಾಡಿದರು. ಶ್ರಮಿಕರಿಗೆ ಹಾಗೂ ವೈಶ್ಯರಿಗೆ ಗುಡಿ-ಗುಂಡಾರಗಳಲ್ಲಿರುವ ದೇವರನ್ನು ಪೂಜಿಸುವ ಅಧಿಕಾರವಿರಲಿಲ್ಲ. ಪೂಜಾರಿ ಪುರೋಹಿತರ ಮಧ್ಯೆ ದೊಡ್ಡ ಕಂದಕ ಸೃಷ್ಟಿಯಾಯಿತು. ಇದನ್ನು ಮನಗಂಡೇ ಬಸವಾದಿ ಶರಣರು ಅಂಗೈಯಲ್ಲಿ ಇಷ್ಟಲಿಂಗವನ್ನು ಕರುಣಿಸಿದರು. ನಮ್ಮ ದೇವರನ್ನು ನಾವೇ ಪೂಜಿಸಬೇಕು ಎನ್ನುವ ಧಾರ್ಮಿಕ ಹಿನ್ನಲೆಯಲ್ಲಿ ಇಷ್ಟಲಿಂಗವನ್ನು ಪೂಜಿಸಬಹುದು ಎಂದು ಇಷ್ಟಲಿಂಗದ ಪರಿಕಲ್ಪನೆ ತಂದುಕೊಟ್ಟರು. ಸಮಾಜದಲ್ಲಿದ್ದ ವರ್ಣ, ವರ್ಗ, ಜಾತಿ ಬೇಧವನ್ನು ತೊಡೆದು ಹಾಕಿ ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದು, 70 ಜನ ಶಿಬಿರಾರ್ಥಿಗಳು ಉಪಸ್ಥಿತಿತರಿದ್ದರು.