ಬಿಜೆಪಿ ಆರೋಪಗಳಿಗೆ ಕಾರ್ಯಕ್ರಮಗಳ ಮೂಲಕವೇ ಉತ್ತರ

KannadaprabhaNewsNetwork |  
Published : Jan 11, 2024, 01:30 AM IST
ಮಧು ಬಂಗಾರಪ್ಪ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರ ಆರೋಪಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಕಾರ್ಯಕ್ರಮಗಳ ಮೂಲಕವೇ ಉತ್ತರಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರ ಆರೋಪಕ್ಕೆ ನಮ್ಮ ಕಾರ್ಯಕ್ರಮದ ಮೂಲಕವೇ ಉತ್ತರಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜ.12ರಂದು ನಗರದಲ್ಲಿ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಮೂಲಕ ಚುನಾವಣೆ ಸಂದರ್ಭ ಘೋಷಿಸಿದ 5ನೇ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಸುಮಾರು ಒಂದೂವರೆ ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಂದ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿ ಕುಟುಂಬಕ್ಕೆ ₹5000:

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ಅಂದಾಜು ₹5 ಸಾವಿರ ಅನುಕೂಲವಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ₹75 ಲಕ್ಷ ಈ ಯೋಜನೆಗಳ ಮೂಲಕ ಲಾಭ ದೊರೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಶಕ್ತಿ ತುಂಬಿದ್ದೇವೆ. ಇನ್ನು ಮುಂದೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳತ್ತ ಸರ್ಕಾರ ಗಮನಹರಿಸಲಿದೆ. ಬಿಜೆಪಿಯವರ ಟೀಕೆ, ಟಿಪ್ಪಣಿಗೆ ಕಾರ್ಯಕ್ರಮದ ಮೂಲಕವೇ ಉತ್ತರ ಕೊಡುತ್ತೇವೆ. ಬಿಜೆಪಿಯವರು ತಾವು ನೀಡಿದ್ದ ಭರವಸೆಗಳ ಪೈಕಿ ಯಾವೆಲ್ಲ ಕಾರ್ಯಕ್ರಮ ಅನುಷ್ಠಾನ ಮಾಡಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರು ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಭಾವನಾತ್ಮಕ ವಿಚಾರಗಳಿಗೆ ಜನ ಮರಳಾಗಲ್ಲ. ಬಿಜೆಪಿಯವರ ಒಂದೇ ಒಂದು ಯೋಜನೆಯಿಂದ ಜನರಿಗೆ ಪ್ರಯೋಜನವಾಗಿಲ್ಲ. ಉಜ್ವಲ ಯೋಜನೆಯಡಿ ನೀಡಿದ್ದ ಗ್ಯಾಸ್ ಸೌಲಭ್ಯ ಸಿಗುತ್ತಿಲ್ಲ. ಆದರೆ, ನಮ್ಮ ಗ್ಯಾರಂಟಿ ಯೋಜನೆಯ ಲಾಭ ಎಲ್ಲರಿಗೂ ಸಿಗುತ್ತಿದೆ ಎಂದರು.

ಗಣರಾಜ್ಯೋತ್ಸವದಲ್ಲಿ ಟ್ಯಾಬ್ಲೋಗೆ ಅಷ್ಟೇ ಅಲ್ಲ, ಪ್ರತಿಯೊಂದು ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ತೆರಿಗೆ ಹಂಚಿಕೆಯಲ್ಲೂ ಅನ್ಯಾಯ ಆಗುತ್ತಿದೆ. ಆದರೆ, ರಾಜ್ಯದ 25 ಜನ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಬಿಜೆಪಿಗೆ ನಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗುತ್ತಿಲ್ಲ. ಬಡವರಿಗಾಗಿ ರೂಪಿಸಿದ ಕಾರ್ಯಕ್ರಮದಿಂದ ಅವರಿಗೆ ಭಯ ಕಾಡುತ್ತಿದೆ. ಏಕೆಂದರೆ ಅವರು ನೇರವಾಗಿ ಅಧಿಕಾರಕ್ಕೆ ಬರಲಿಲ್ಲ. ಮೋಸ ಮಾಡಿ ಅಧಿಕಾರಕ್ಕೆ ಬಂದರು ಹಾಗಾಗಿ ಅವರಿಗೆ ಜನ ಈ ಬಾರಿ ಅಧಿಕಾರದಿಂದ ದೂರವಿಟ್ಟಿದ್ದಾರೆ ಎಂದು ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಕಾಂಗ್ರೆಸ್‌ ಪ್ರಮುಖರಾದ ವಿಜಯಕುಮಾರ್‌, ದೇವೇಂದ್ರಪ್ಪ, ರಮೇಶ್‌, ಕಲಗೋಡು ರತ್ನಾಕರ್‌ ಮತ್ತಿತರರು ಇದ್ದರು.

- - - (-ಫೋಟೋ: ಮಧು ಬಂಗಾರಪ್ಪ)

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ