ಮೇಲ್ದರ್ಜೆಗೇರಿದ ಆಸ್ಪತ್ರೆಯಲ್ಲಿ ಮಕಾಡೆ ಮಲಗಿದ ವ್ಯವಸ್ಥೆ!?

KannadaprabhaNewsNetwork |  
Published : Mar 14, 2024, 02:10 AM IST
12ಕೆಆರ್ ಎಂಎನ್ 6,7,8.ಜೆಪಿಜಿಕುದೂರು ಸಮುದಾಯ ಆರೋಗ್ಯ  ಕೇಂದ್ರದ ಅವ್ಯವಸ್ಥೆಯ ಚಿತ್ರಗಳು | Kannada Prabha

ಸಾರಾಂಶ

ಕುದೂರು: ಸುಂದರ ಕಟ್ಟಡವಿದೆ. ಆದರೆ ಮಳೆ ಬಂದರೆ ಸೋರುತ್ತದೆ. ಇಪ್ಪತ್ನಾಲ್ಕು ಗಂಟೆಯೂ ಹೆರಿಗೆ ಸೌಲಭ್ಯ ಎಂದು ಬೋರ್ಡಿದೆ, ಹೆರಿಗೆ ಮಾಡಿಸುವವರೇ ಇಲ್ಲ. ನಿತ್ಯ ನೂರಾರು ರೋಗಿಗಳು ಬರುತ್ತಾರೆ, ಅವರಿಗೆ ಸೇವೆ ಸಲ್ಲಿಸಲು ವೈದ್ಯರ ಕೊರತೆಯಿದೆ. ಶುದ್ಧ ಕುಡಿಯುವ ನೀರಿನ ಟ್ಯಾಂಕಿದೆ, ಅದರಲ್ಲಿ ನೀರಿಲ್ಲ. ಕಟ್ಟಡ ದೊಡ್ಡದಿದೆ, ಅದನ್ನು ಅಚ್ಚುಕಟ್ಟುಗೊಳಿಸಲು ಸಿಬ್ಬಂದಿ ಕೊರತೆ ಇದೆ.

ಕುದೂರು: ಸುಂದರ ಕಟ್ಟಡವಿದೆ. ಆದರೆ ಮಳೆ ಬಂದರೆ ಸೋರುತ್ತದೆ. ಇಪ್ಪತ್ನಾಲ್ಕು ಗಂಟೆಯೂ ಹೆರಿಗೆ ಸೌಲಭ್ಯ ಎಂದು ಬೋರ್ಡಿದೆ, ಹೆರಿಗೆ ಮಾಡಿಸುವವರೇ ಇಲ್ಲ. ನಿತ್ಯ ನೂರಾರು ರೋಗಿಗಳು ಬರುತ್ತಾರೆ, ಅವರಿಗೆ ಸೇವೆ ಸಲ್ಲಿಸಲು ವೈದ್ಯರ ಕೊರತೆಯಿದೆ. ಶುದ್ಧ ಕುಡಿಯುವ ನೀರಿನ ಟ್ಯಾಂಕಿದೆ, ಅದರಲ್ಲಿ ನೀರಿಲ್ಲ. ಕಟ್ಟಡ ದೊಡ್ಡದಿದೆ, ಅದನ್ನು ಅಚ್ಚುಕಟ್ಟುಗೊಳಿಸಲು ಸಿಬ್ಬಂದಿ ಕೊರತೆ ಇದೆ.

ಇದು ಕುದೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಶೋಚನೀಯ ಸ್ಥಿತಿ.

ಕುದೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರ್ಕಾರದಿಂದ ಕೋಟ್ಯಂತರ ರು.ಗಳನ್ನು ಖರ್ಚು ಮಾಡಿ ಸಮುದಾಯ ಅರೋಗ್ಯ ಕೇಂದ್ರ ಎಂದು ಮೇಲ್ದರ್ಜೆಗೇರಿಸಿ ಕಟ್ಟಡ ನಿರ್ಮಿಸಿದ್ದರೂ ಸಮಸ್ಯೆಗಳು ತಾಂಡವವಾಡುತ್ತಿವೆ.

ಗುತ್ತಿಗೆದಾರನಿಗೆ ಸಕಾಲದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ ಎಂದು ಕಳಪೆ ಕಾಮಗಾರಿಯಿಂದ ಆಸ್ಪತ್ರೆ ಕಟ್ಟಡ ಪೂರ್ಣಗೊಂಡಿತು. ಮಳೆ ಬಂತೆಂದರೆ ಸೋರುತ್ತದೆ. ಹೊರರೋಗಿಗಳಿಗೆ ಕೂರಲು ಆಸನಗಳ ವ್ಯವಸ್ಥೆ ಇಲ್ಲ. ಗಾಳಿ ಬೆಳಕಿನ ಕೊರತೆ ಇದೆ.

ಕೇವಲ 7 ಹಾಸಿಗೆಗಳು:

ಸಮುದಾಯ ಆರೋಗ್ಯ ಕೇಂದ್ರವೆಂದು ಮೇಲ್ದರ್ಜೆಗೇರಿದ ಮೇಲೆ ಅಲ್ಲಿರಬೇಕಾದದ್ದು 30 ಹಾಸಿಗೆಗಳು. ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದಾಗ ಅಲ್ಲಿ 10 ಹಾಸಿಗೆಗಳಾದರೂ ಇದ್ದವು. ಮೇಲ್ದರ್ಜೆಗೇರಿಸಿದ ಬಳಿಕ ಈಗಿರುವುದು ಕೇವಲ ಏಳು ಹಾಸಿಗೆಗಳು ಮಾತ್ರ.

ಅರ್ಧದಷ್ಟು ಔಷಧಿ ಇಲ್ಲ:

ತಾಲೂಕು ಕೇಂದ್ರ ಮಾಗಡಿಯನ್ನು ಬಿಟ್ಟರೆ ಅತ್ಯಂತ ಹೆಚ್ಚು ಹೊರರೋಗಿಗಳು ಭೇಟಿ ನೀಡುವುದು ಕುದೂರು ಸರ್ಕಾರಿ ಆಸ್ಪತ್ರೆಗೆ. ಆದರೆ ಸರ್ಕಾರ ಮಂಜೂರು ಮಾಡುವ ಔಷಧ 15 ದಿನಗಳೊಳಗೆ ಖಾಲಿಯಾಗುತ್ತವೆ. ಔಷಧ ಕಡಿಮೆ ಇದ್ದರೆ ಜನರು ಗಲಾಟೆ ಮಾಡುತ್ತಾರೆ. ಹೀಗೆ ಗಲಾಟೆ ಮಾಡುವ ವ್ಯಕ್ತಿಗಳನ್ನು ಸಮಾಧಾನಪಡಿಸಿ ಸಮಸ್ಯೆಗಳ ಸ್ವರೂಪ ತಿಳಿಸಿಕೊಡುವಲ್ಲಿ ನಿತ್ಯವೂ ಇಲ್ಲಿನ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ಕಡಿಮೆ ಜನರು ಭೇಟಿ ನೀಡುತ್ತಿದ್ದರು, ಆಗ ಔಷಧಿಯ ಪ್ರಮಾಣವೂ ಕಡಿಮೆ ಖರ್ಚಾಗುತ್ತಿತ್ತು. ಆದರೆ ಅದೇ ಮಾನದಂಡ ಇಂದಿಗೂ ಪಾಲಿಸಿ ಔಷಧ ಪೂರೈಸುತ್ತಿದ್ದಾರೆ. ವೈದ್ಯರಿಲ್ಲದ ಸಮಯದಲ್ಲಿ ಇಲ್ಲಿನ ಮೂವರು ಶುಷ್ರೂಶಕಿಯರು ರೋಗಿಗಳ ಸೇವೆ ಮಾಡುತ್ತಾರೆ. ಇವರು ಇಲ್ಲದಿದ್ದಿದ್ದರೆ ಆಸ್ಪತ್ರೆಗೆ ಎಂದೋ ಬೀಗ ಹಾಕಬೇಕಿತ್ತು.

ಐದು ವೈದ್ಯರಿರುವ ಕಡೆ ಒಬ್ಬ ವೈದ್ಯರು:

ಸಮುದಾಯ ಆರೋಗ್ಯ ಕೇಂದ್ರ ಎಂದು ಮೇಲ್ದರ್ಜೆಗೇರಿ ಎರಡು ವರ್ಷಗಳಾದವು. ಐವರು ವೈದ್ಯರಿರುವ ಕಡೆ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಕೂಡಾ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ಮಾಡುತ್ತಿದ್ದಾರೆ. ಆರು ಶುಷ್ರೂಶಕಿಯರಿರುವ ಕಡೆಗೆ ಮೂವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಟು ಜನ ಕ್ಲೀನಿಂಗ್ ಸಿಬ್ಬಂದಿಗೆ ಇಬ್ಬರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ.

ಕೆಟ್ಟು ನಿಂತ ಕುಡಿವ ನೀರಿನ ಘಟಕ:

ಆಸ್ಪತ್ರೆಗೆ ಬಂದವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆಸ್ಪತ್ರೆಯಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕ ಪೂರ್ಣಗೊಂಡಿಲ್ಲದ ಕಾರಣ ಅದು ಕೆಲಸ ಮಾಡುತ್ತಿಲ್ಲ. ಗುಣಮಟ್ಟವನ್ನು ಕಾಯ್ದುಕೊಳ್ಳದಿರುವ ವಸ್ತುಗಳನ್ನು ಅಳವಡಿಸಿದ್ದರ ಪ್ರತಿಫಲವಾಗಿ ಅವು ಕೆಟ್ಟು ನಿಂತಿವೆ.

ಉದ್ಘಾಟನೆಯಾದ ದಿನವೇ ಕೆಟ್ಟ ಆಂಬ್ಯುಲೆನ್ಸ್:

ಕುದೂರು ಸರ್ಕಾರಿ ಆಸ್ಪತ್ರೆಗೆ ಸರ್ಕಾರದಿಂದ ಕಳಿಸಿಕೊಟ್ಟಿದ್ದ ಆಂಬ್ಯುಲೆನ್ಸನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸಿದರು. ವಿಚಿತ್ರ ಎಂದರೆ ಉದ್ಘಾಟನೆಗೊಂಡ ದಿನವೇ ಅದು ರಿಪೇರಿಗೆ ಹೋಯಿತು. ಮೂರು ತಿಂಗಳಾದರೂ ವಾಪಸ್ ಬಂದಿಲ್ಲ. ಮಂಜೂರಾದ ಕಟ್ಟಡವೂ ಅಪೂರ್ಣಗೊಂಡಿದೆ. ಗ್ರಾಮದ ಆರೋಗ್ಯ ರಕ್ಷಾ ಸಮಿತಿಯವರು ಮತ್ತು ಶಾಸಕ - ಸಂಸದರು ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಜನರು ಮನವಿ ಮಾಡಿದ್ದಾರೆ.ಬಾಕ್ಸ್......................

ಉದ್ಯಾನವನಕ್ಕೆ 10 ಲಕ್ಷ ರು. ಖರ್ಚು

ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಉದ್ಯಾನವನ ನೋಡಿದರೆ ಗೊತ್ತಾಗುತ್ತದೆ. ಆದರೆ ಯಾರೇ ಅಲ್ಲಿ ನೋಡಿದರೂ ಅಲ್ಲೊಂದು ಉದ್ಯಾನವನ ಇತ್ತು ಎಂಬುದೇ ಕಾಣುವುದಿಲ್ಲ. ಇಂತಹ ಉದ್ಯಾನವನಕ್ಕೆ ಖರ್ಚಾಗಿರುವ ಹಣ ಬರೋಬ್ಬರಿ 10 ಲಕ್ಷ ರು. ಇದರ ಪಕ್ಕದಲ್ಲೊಂದು ದೊಡ್ಡದೊಂದು ನೀರಿನ ಸಂಪೂ ಇತ್ತು. ಅದು ಕೆಲಸಕ್ಕೆ ಬಾರದು ಎಂದ ಮೇಲೆ ಅದನ್ನು ಭದ್ರವಾಗಿ ಮುಚ್ಚುವ ಕೆಲಸ ಮಾಡದೇ ಅರ್ಧಂಬರ್ಧ ಮುಚ್ಚಿದ್ದಾರೆ. ಅದು ಅಪಾಯಕ್ಕೆ ಆಹ್ವಾನ ನೀಡುವಂತೆ ಬಾಯಿತೆರೆದು ಕುಳಿತಿದೆ.

ಕೋಟ್ ....

ಆಸ್ಪತ್ರೆಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗನೆ ವೈದ್ಯರನ್ನು ನೇಮಕ ಮಾಡಲಾಗುವುದು. ಆಂಬ್ಯುಲೆನ್ಸ್‌ನ್ನು ರಿಪೇರಿ ಮಾಡಿಸಿಕೊಡಲಾಗುವುದು. ಸಿಬ್ಬಂದಿಯೊಂದಿಗೆ ಜನರೂ ಸೌಹಾರ್ದಯುತವಾಗಿ ನೋಡಿಕೊಳ್ಳಬೇಕು. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾನು ಈಗಲೂ ಕಟ್ಟುಬದ್ದನಾಗಿದ್ದೇನೆ.

-ಎಚ್.ಸಿ. ಬಾಲಕೃಷ್ಣ, ಶಾಸಕರು, ಮಾಗಡಿ

ಕೋಟ್ ....

ವೈದ್ಯರು, ಸಿಬ್ಬಂದಿ ಕೊರತೆಯನ್ನು ಈಗಾಗಲೇ ಸರ್ಕಾರದ ಗಮನಕ್ಕೆ ಮಾನ್ಯ ಶಾಸಕರ ಮೂಲಕ ತಿಳಿಸಿದ್ದೇವೆ. ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಸರ್ಕಾರದೊಂದಿಗೆ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ. ಆದಷ್ಟು ಬೇಗನೆ ಇಲ್ಲಿನ ಆಸ್ಪತ್ರೆ ಸಮಸ್ಯೆಗಳನ್ನು ಹಂತ-ಹಂತವಾಗಿ ನಿವಾರಿಸಲಾಗುವುದು.

- ಡಾ.ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ

12ಕೆಆರ್ ಎಂಎನ್ 6,7,8.ಜೆಪಿಜಿ

ಕುದೂರು ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಚಿತ್ರಗಳು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...