ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀಚೆಲುವನಾರಾಯಣಸ್ವಾಮಿಯವರ ಪವಿತ್ರ ಅಷ್ಠ ತೀರ್ಥೋತ್ಸವ ಶುಕ್ರವಾರ ಶ್ರದ್ಧಾ- ಭಕ್ತಿಯಿಂದ ನೆರವೇರಿತು. ಅಷ್ಠ ತೀರ್ಥೋತ್ಸವದ ನಿಮಿತ್ತ ಬೆಳಗ್ಗೆ ರಾಜಮುಡಿ ಕಿರೀಟವನ್ನು ಧರಿಸಿ ಸ್ವಾಮಿಗೆ ಕಲ್ಯಾಣಿಯಲ್ಲಿ ವೈಭವದಿಂದ ಉತ್ಸವ ನೆರವೇರಿಸಲಾಯಿತು. ಮಕ್ಕಳಭಾಗ್ಯ ಅಪೇಕ್ಷಿಸಿದ ನೂರಾರು ದಂಪತಿಗಳು ಮಡಿಲು ತುಂಬಲು ಪ್ರಾರ್ಥಿಸಿ ಹರಕೆ ಕಟ್ಟಿಕೊಂಡು ಉತ್ಸವದಲ್ಲಿ ಭಾಗಿಯಾಗಿದ್ದರು.ಮೇಲುಕೋಟೆಗೆ ಆಗಮಿಸಿದ ಭಕ್ತರು ಮಹೋತ್ಸವದಲ್ಲಿ ಭಾಗಿಯಾಗಿ ಅಷ್ಠ ತೀರ್ಥಗಳಲ್ಲಿ ಪವಿತ್ರ ಸ್ನಾನ ಮಾಡಲು ಸ್ವಾಮಿಯ ಪಾದುಕೆಯೊಂದಿಗೆ ಭಕ್ತಿಭಾವದಿಂದ ಹಿಂಬಾಲಿಸಿ ಸಾಗಿದರು. ವೇದಪುಷ್ಕರಣಿ. ಧನುಷ್ಕೋಟಿ, ಯಾದವ ತೀರ್ಥ, ದರ್ಭತೀರ್ಥ, ಪಲಾಶರತೀರ್ಥ, ಪದ್ಮತೀರ್ಥ, ನರಸಿಂಹತೀರ್ಥ ನಾರಾಯಣತೀರ್ಥ ಹಾಗೂ ಕೊನೆಯದಾಗಿ ವೈಕುಂಠಗಂಗೆಯಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕವಾದ ನಂತರ ಭಕ್ತರು ಸಾಮೂಹಿಕವಾಗಿ ಪವಿತ್ರ ಸ್ನಾನ ಮಾಡಿದರು.
ಕಲ್ಯಾಣಿಯಲ್ಲಿ ಬೆಳಗ್ಗೆ 11-30ಕ್ಕೆ ಪಾದುಕೆಗೆ ಮೊದಲ ಅಭಿಷೇಕ ನೆರವೇರಿಸಿ ಲೋಕ ಕಲ್ಯಾಣಾರ್ಥವಾಗಿ ಪೂಜೆ ನೆರವೇರಿಸಿ ಪ್ರಾರ್ಥಿಸಿದ ನಂತರ ಅಷ್ಠತೀರ್ಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅಷ್ಠತೀರ್ಥದ ಕೊನೆಯಲ್ಲಿ ತೊಟ್ಟಿಲಮಡು ವೈಕುಂಠ ಗಂಗೆಯಲ್ಲಿ ಸ್ನಾನ ಮಾಡಿದರು.ಯಾದವ ತೀರ್ಥದ ಬಳಿ ಜೇನುಕಲ್ಲು ಮಂಟಿಯಲ್ಲಿ ಕಳೆದ ವರ್ಷ ಭಕ್ತರ ಮೇಲೆ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ದೇವಾಲಯದ ಇಒ ಶೀಲಾ ಎಚ್ಚರವಹಿಸಿ ಎರಡು ದಿನಗಳ ಹಿಂದೆಯೇ ಜೇನು ಎಬ್ಬಿಸಿ ಓಡಿಸಿದ್ದರು. ಆದರೂ ಜೇನುಗಳು ಗೂಡುಕಟ್ಟಿದ್ದವು. ಅಷ್ಠ ತೀರ್ಥೋತ್ಸವದ ವೇಳೆ ಶುಕ್ರವಾರ ಬೆಳಗ್ಗೆಯೇ ಸಿಬ್ಬಂದಿಯೊಡನೆ ಹಾಜರಿದ್ದು, ಭಕ್ತರಿಗೆ ಜೇನುಗೂಡಿರುವ ಬಗ್ಗೆ ಮಾಹಿತಿ ನೀಡಿ ಎಚ್ಚರದಿಂದ ಮುಂಜಾಗ್ರತೆವಹಿಸಿ ಸಾಗುವಂತೆ ಹೇಳಿ ಕಾಳಜಿವಹಿಸಿದ ಕಾರಣ ಕಳೆದ ವರ್ಷದ ಕಹಿಘಟನೆ ಮರುಕಳುಸಲಿಲ್ಲ.
ಇದರ ಜೊತೆಗೆ ಎಂಟು ತೀರ್ಥಗಳಿಗೆ ಸಿಬ್ಬಂದಿಯ ಜೊತೆ ಹೋಗಿ ಎಲ್ಲಾ ಕೊಳಗಳ ಬಳಿ ಮತ್ತು ಪಾದುಕೆಯ ಪಲ್ಲಕ್ಕಿ ಸಾಗುವ ದಾರಿಯುದ್ದಕ್ಕೂ ಗಿಡಗಂಟೆಗಳನ್ನು ಕಿತ್ತು ಸ್ವಚ್ಚ ಮಾಡಿದ್ದು ಭಕ್ತರ ಪ್ರಶಂಸೆಗೆ ಪಾತ್ರವಾಗಿತ್ತು.ಪಲಾಶರ ತೀರ್ಥದ ಗವಿಕಲ್ಲು ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಯತಿರಾಜ ದಾಸರ ಗುರುಪೀಠದಿಂದ ಪೂಜೆ ಸಲ್ಲಿಸಿ ಭಕ್ತರಿಗೆ ಹಾಲು- ಹಣ್ಣು ವಿತರಿಸಿದರೆ ಕೆರೆಮೆಟ್ಟಲ ಆಂಜನೇಯನ ಸನ್ನಿಧಿಯ ಬಳಿ ಯತಿರಾಜಾಜೀಯರ್ ಉಪಸ್ಥಿತರಿದ್ದು ಪೂಜೆ ಸಲ್ಲಿಸಿದರು. ಪಾರ್ವಟೆ ಮಂಟಪದ ಭಟ್ಟರಕೊಳದ ಬಳಿ ಅರ್ಚಕರ ಕುಟುಂಬದವರು ಪೂಜೆ ಸಲ್ಲಿಸಿದರು. ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಮತ್ತು ಪಾರ್ಥಸಾರಥಿ ಧಾರ್ಮಿಕ ಕೈಂಕರ್ಯಗಳು ಸಾಂಗವಾಗಿ ನಡೆಯಲು ಶ್ರಮಿಸಿದ್ದರು.