ನರಗುಂದ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿಗೆ ಹೋರಾಟಕ್ಕೆ ಹೋಗುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಪೊಲೀಸರ ಮೂಲಕ ತಡೆದು ಅವರ ಮೇಲೆ ಹಲ್ಲೆ ಮಾಡುತ್ತಿರುವುದು ನೋವಿನ ಸಂಗತಿ ಎಂದು ಕನ್ನಡಪರ ಒಕ್ಕೂಟಗಳ ಮುಖಂಡ ಚನ್ನು ನಂದಿ ಹೇಳಿದರು.
ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಇತ್ತೀಚೆಗೆ ಮನವಿ ನೀಡಿ ಆನಂತರ ಅವರು ಮಾತನಾಡಿದರು. ಕೃಷಿಯಲ್ಲಿ ರೈತರು ಹಾನಿ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿವಿಧ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ವಾಪಸ್ ಪಡೆಯುವಂತೆ ಹೋರಾಟ ನಡೆಸಲಾಗುತ್ತಿದೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರೈತರು ಹೋರಾಟಕ್ಕಾಗಿ ದೆಹಲಿಗೆ ಹೊರಟಿದ್ದರು. ರೈತರನ್ನು ದೆಹಲಿ ಗಡಿಯಲ್ಲಿ ತಡೆಯಲು ಕೇಂದ್ರ ಸರ್ಕಾರ ಕಾಂಕ್ರೀಟ್ ಗೋಡೆ, ಮುಳ್ಳಿನ ತಂತಿ ಅಳವಡಿಸಿದೆ. ಅಲ್ಲದೆ ರೈತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಗೂಂಡಾ ವರ್ತನೆ ಎತ್ತಿ ತೋರಿಸುತ್ತದೆ ಎಂದರು.ಕೇಂದ್ರ ಸರ್ಕಾರ ದೇಶದ ರೈತರ ಕ್ಷಮೆ ಕೋರಬೇಕು. ರೈತರು ಕೃಷಿಗಾಗಿ ಮಾಡಿದ ಸಾಲವನ್ನು ಮನ್ನಾ ಮಾಡಬೇಕು. ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಈ ರೈತರ ಬೇಡಿಕೆಗಳನ್ನು ಈಡೇರಿಸದ್ದರೆ ಮುಂದಿನ ದಿನಗಳಲ್ಲಿ ಪ್ರತಿ ರಾಜ್ಯದಲ್ಲಿ ಕೇಂದ್ರದ ವಿರುದ್ಧ ರೈತರು ಹೋರಾಟಕ್ಕೆ ಇಳಿಯುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿದರು. ರಾಘವೇಂದ್ರ ಗುಜಮಾಗಡಿ, ಶ್ರೀಶೈಲ ಮೇಟಿ, ನಬಿಸಾಬ್ ಕಿಲ್ಲೇದಾರ, ಮುತ್ತು ತೊರಗಲ್ಲ, ವಾಸುರಡ್ಡಿ ಹೆಬ್ಬಾಳ, ಕಲ್ಲಪ್ಪ ಹೂಗಾರ, ಮಾಬುಸಾಬ್ ತಹಸೀಲ್ದಾರ, ನಾಗಪ್ಪ ಹೂಗಾರ, ಅಮೀನಸಾಬ್ ಹೆಬ್ಬಳ್ಳಿ, ಶಿವಾನಂದ ಮಾಯಣ್ಣವರ, ದಾವಲಸಾಬ್ ಲಾಡಿ, ಶಿಪ್ಪ ನಾಯ್ಕರ, ಕಲ್ಲನಗೌಡ ಕಲ್ಲನಗೌಡ್ರ ಇದ್ದರು.