ಕನ್ನಡಪ್ರಭ ವಾರ್ತೆ ಚಾಮರಾಜನಗರಮಾಂಸ ರಪ್ತು ನಿಷೇಧ ಹಾಗೂ ಗೋವಂಶ ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ಜಾರಿಗೆ ಭಾರತ ಸರ್ಕಾರ ಮುಂದಾಗಬೇಕು, ಅಹಿಂಸೆ ಮತ್ತು ಆಧ್ಯಾತ್ಮ ಹಾಗೂ ಕೃಷಿ ಪ್ರಧಾನವಾದ ಭಾರತದಲ್ಲಿ ಸಂಪೂರ್ಣ ಮಾಂಸ ರಫ್ತು ನಿಷೇಧ ಕಾನೂನು ಹಾಗೂ ಸಂಪೂರ್ಣ ಗೋವಂಶ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ಭಾರತವನ್ನು ಸಂಪೂರ್ಣ ಗೋವಂಶ -ಜಾನುವಾರು ಹತ್ಯೆ ಮುಕ್ತ ಮತ್ತು ಮಾಂಸ ರಫ್ತು ಮುಕ್ತ ರಾಷ್ಟ್ರ ಎಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದಸ್ವಾಮೀಜಿ ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆಯಲಿ ಕುರಿ, ಆಡು ಕೋಳಿ ಮುಂತಾದ ಪ್ರಾಣಿಗಳ ಬಲಿ ತಡೆಯು ಸಂಪೂರ್ಣ ಯಶಸ್ವಿ ಆಗಿದ್ದು, ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದರು. ಕರ್ನಾಟಕ ಹೈಕೋರ್ಟ್ ಆದೇಶ ಮತ್ತು ಕರ್ನಾಟಕ ಪ್ರಾಣಿಬಲಿ ಪ್ರತಿಬಂಧಕ ಅಧಿನಿಯಮ ೧೯೫೯ ರ ಅಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಶಿಲ್ಪನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪದ್ಮಿನಿಸಾಹು ಹಾಗೂ ಅಡಿಷನಲ್ ಎಸ್ಪಿ ಉದೇಶ್ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಉಪವಿಭಾಗದ ಎಸಿ ರಮೇಶ್, ಡಿವೈಎಸ್ಪಿ ಸೋಮೇಗೌಡ, ತಹಸೀಲ್ದಾರ್ ಮಂಜುಳ ಸಿಪಿಐ ಕೃಷ್ಣಪ್ಪ, ಇವರ ನೇತೃತ್ವದಲ್ಲಿ ಕೊಳ್ಳೇಗಾಲ ಗ್ರಾಮಂತರ ಪಿಎಸ್‌ಐ ಶ್ರೀ ಗಣೇಶ್ ಮತ್ತು ಇನ್ನಿತರ ಪೊಲೀಸ್ ಅಧಿಕಾರಿಗಳು ಹಾಗೂ ೯೦೦ ಕ್ಕೂ ಹೆಚ್ಚು ಪೊಲೀಸ್ ಮತ್ತು ಹೋಮ್‌ಗಾರ್ಡ ಸಿಬ್ಬಂದಿ, ಪಶು ಸಂಗೋಪನೆ, ಕಂದಾಯ ಪಂಚಾಯತ್, ಅರಣ್ಯ ಮತ್ತು ಪರಿಸರ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ನಮ್ಮ ಮನವಿ ಮೇರೆಗೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಾಣಿಬಲಿ ತಡೆಯುವಲ್ಲಿ ಸಂಪೂರ್ಣ ಯಶಸ್ವಿ ಆಗಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಾತ್ರೆ ಸಮಯದಲ್ಲಿ ಅಧಿಕಾರಿಗಳ ಜೊತೆ ಜಾತ್ರೆಯಲ್ಲಿಯೇ ಬೀಡುಬಿಟ್ಟು ಕೂಲಂಕುಷವಾಗಿ ಚಟುವಟಿಕೆಗಳ ಬಗ್ಗೆ ಗಮನಹರಿಸಲಾಯಿತು, ಅಹಿಂಸಾ-ಪ್ರಾಣಿದಯಾ, ಆಧ್ಯಾತ್ಮ ಸಂದೇಶ ಯಾತ್ರೆಯ ಮೂಲಕ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಹಾಗೂ ಚಿಕ್ಕಲ್ಲೂರು ಜಾತ್ರಾ ಪರಿಸರ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದರ ಪರಿಣಾಮ ಇದು ಯಶಸ್ವಿಯಾಗಿದ ಎಂದರು.ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ಜಾತ್ರೆಯಲ್ಲಿಯೂ ಪ್ರಾಣಿಬಲಿ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ಯಶಸ್ವಿಯಾಗಿದೆ. ಹಾಗೂ ಕೂಡ್ಲೂರಿನ ಶ್ರೀ ಏಳುದಂಡೆ ಮುನೇಶ್ವರ ಸ್ವಾಮಿ ಜಾತ್ರೆಯಲ್ಲಿಯೂ ದೇವಾಲಯದ ಮುಂಭಾಗ ಮತ್ತು ಸುತ್ತಮುತ್ತಲಿನ ಪರಿಸದಲ್ಲಿಯೂ ಈ ಪ್ರಾಣಿಬಲಿ ತಡೆ ಯಶಸ್ವಿಯಾಗಿದ್ದು, ಈ ಮೂರು ಜಾತ್ರೆಗಳ ಪ್ರಾಣಿಬಲಿ ತಡೆ ಯಶಸ್ವಿಗೆ ಕಾರಣರಾದ ಕರ್ನಾಟಕ ಸರ್ಕಾರ, ಚಾಮರಾಜನಗರ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ದೇವಾಲಯ ಮತ್ತು ಆಡಳಿತ ಮಂಡಳಿ ಮತ್ತು ಸಹಕರಿಸಿದ ಇನ್ನಿತರರಿಗೆ ಹಾಗೂ ಭಕ್ತಕೋಟಿಗೆ ಹೃತ್ಪೂರ್ವಕ ಧನ್ಯಾದಗಳು ಎಂದರು,
ಇದೇ ರೀತಿ ಜಿಲ್ಲೆಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ, ದೇವಾಲಯ, ಮಂದಿರ, ದರ್ಗಾ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಪ್ರಾಣಿಗಳ ಬಲಿ ನೀಡದೆ ಅಹಿಂಸಾತ್ಮಕ ರೀತಿ ಸಾತ್ವಿಕ ಪೂಜೆ ಸಲ್ಲಿಸಬೇಕೆಂದು ಮನವಿ ಮಾಡಿದರು ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಶಿಂಷಾ ಮಾರಮ್ಮ, ಬೂದುಬಾಳು ವೆಂಕಟರಮಣಸ್ವಾಮಿ, ಕುರುಬನಕಟ್ಟೆ ಮಂಟೇಸ್ವಾಮಿ, ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಜಿಲ್ಲೆಯಲ್ಲಿ ಎಲ್ಲಿಯೂ ಯಾವುದೇ ರೀತಿಯ ಪ್ರಾಣಿಗಳ ಬಲಿ ನಡೆಯದಂತೆ ಹಾಗೂ ಗೋವಂಶಾದಿ ಜಾನುವಾರುಗಳ ಹತ್ಯೆ ಆಗದಂತೆ ಮತ್ತು ರಾಜ್ಯದ ಒಳಗೆ ಹಾಗೂ ಹೊರರಾಜ್ಯಗಳಿಗೆ ಗೋವಂಶಾದಿ ಜಾನುವಾರುಗಳ ಅಕ್ರಮ ಸಾಗಣಿಕೆ, ಖರೀದಿ ಮತ್ತು ಮಾರಾಟ ನಡೆಯದಂತೆ ಕಾನೂನು ಮತ್ತು ಕರ್ನಾಟಕ ರಾಜ್ಯ ಹೈಕೋರ್ಟ್, ಭಾರತ ಸುಪ್ರೀಂ ಕೋರ್ಟ್ ಆದೇಶಗಳ ಚೌಕಟ್ಟಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.