ಸಂಭ್ರಮದ ಶ್ರೀಗುರುಕೊಟ್ಟೂರೇಶ್ವರ ರಥೋತ್ಸವ

KannadaprabhaNewsNetwork |  
Published : Mar 05, 2024, 01:32 AM IST
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುರುಕೊಟ್ಟೂರೇಶ್ವರ ರಥೋತ್ಸವ ಸೋಮವಾರ ಸಂಜೆ ಮೂಲಾ ನಕ್ಷತ್ರದಲ್ಲಿ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ನೆರವೇರಿತು. (ಚಿತ್ರ: ರವಿಕುಮಾರ ಕೆ.ಎಂ. ಉಜ್ಜಿನಿ). | Kannada Prabha

ಸಾರಾಂಶ

ಆಕರ್ಷಕ ಸಮಾಳ, ನಂದಿಕೋಲು ಕುಣಿತ ಮತ್ತಿತರ ವಾದ್ಯಗಳ ವಿನಾದಕ್ಕೆ ಅನುಗುಣವಾಗಿ ಭಕ್ತರು ಕುಣಿದಾಡಿ ಸಂಭ್ರಮಿಸಿದರು.

ಜಿ. ಸೋಮಶೇಖರ

ಕೊಟ್ಟೂರು: ರಾಜ್ಯದಲ್ಲೇ ದೊಡ್ಡ ರಥೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ 4 ಲಕ್ಷಕ್ಕೂ ಅಧಿಕ ಭಕ್ತರ ಹರ್ಷೋದ್ಗಾರದ ಮಧ್ಯೆ ಸೋಮವಾರ ಸಂಜೆ 5.25 ಕ್ಕೆ ಮೂಲಾ ನಕ್ಷತ್ರದ ವೇಳೆ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವಕ್ಕೂ ಮುನ್ನ ಶ್ರೀಸ್ವಾಮಿಗೆ ಮಧ್ಯಾಹ್ನದ ಪೂಜೆ ನೆರವೇರಿಸಲಾಯಿತು. ಬಳಿಕ ಹಿರೇಮಠದಲ್ಲಿನ ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಸಕಲ ಬಿರುದಾವಳಿಗಳೊಂದಿಗೆ ಪೂಜಾಕರ್ತರು ಹೊರತಂದರು. ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಸಾಗಿತು. ಮೆರವಣಿಗೆ ತೇರು ಬಯಲಿನವರೆಗೆ ಸಾಗುವ ಮುನ್ನ ಹರಿಜನಕೇರಿ ಬಳಿ ಬರುತ್ತಿದ್ದಂತೆ ದಲಿತ ಮಹಿಳೆಯರಾದ ಉಡುಸಲಮ್ಮ ಮತ್ತು ದುರುಗಮ್ಮ ಶ್ರೀಸ್ವಾಮಿಗೆ ಕಳಸದಾರತಿ ಮತ್ತು ದೀಪದಾರತಿ ಬೆಳಗಿದರು. ನಂತರ ಮೆರವಣಿಗೆ ತೇರು ಬಜಾರ್ ಮೂಲಕ ತೇರು ಬಯಲಿಗೆ ಬಂದಿತು.

ಆಗ ಶ್ರೀಸ್ವಾಮಿಯನ್ನು ರಥದ ಸುತ್ತಲೂ ಮೂರು ಬಾರಿ ಪ್ರದಕ್ಷಣೆ ಮಾಡಿದ ನಂತರ ಉತ್ಸವ ಮೂರ್ತಿಯನ್ನು ರಥದ ಮೇಲೆ ಪೂಜಾಕರ್ತರ ಬಳಗದವರು ಕೂರಿಸಿದರು. ಸಂಜೆ ಮೂಲಾ ನಕ್ಷತ್ರದ ಸಮಯವಾದ 5.25ಕ್ಕೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ದೊರಕಿತು. ಆದರೆ ರಥಕ್ಕೆ ಕಟ್ಟಲಾಗಿದ್ದ ಮಿಣಿ (ಹಗ್ಗ) ಹರಿದ ಕಾರಣಕ್ಕಾಗಿ ಇದನ್ನು ಸರಿಪಡಿಸಿ ಎಳೆಯಲು ಸುಮಾರು 25 ನಿಮಿಷಗಳಾಯಿತು. ನಂತರ ಸರಾಗವಾಗಿ ರಥವನ್ನು ನೆರೆದಿದ್ದ ಭಕ್ತರು ಏಳೆದೊಯ್ಯುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ಏಕಸ್ವರದಿಂದ ಕೊಟ್ಟೂರು ದೊರೆಯೇ ನಿನಗಾರು ಸರಿಯೇ... ಎಂಬ ಜಯಘೋಷಗಳನ್ನು ಕೂಗುತ್ತ ನಮಿಸಿ ರಥವನ್ನು ಎಳೆದರು.ಆಕರ್ಷಕ ಸಮಾಳ, ನಂದಿಕೋಲು ಕುಣಿತ ಮತ್ತಿತರ ವಾದ್ಯಗಳ ವಿನಾದಕ್ಕೆ ಅನುಗುಣವಾಗಿ ಭಕ್ತರು ಕುಣಿದಾಡಿ ಸಂಭ್ರಮಿಸಿದರು. ರಥ ರಾಜಗಾಂಭೀರ್ಯದಿಂದ ಪಾದಗಟ್ಟೆಯವರೆಗೂ ಸಾಗಿ ಪುನಃ ವಾಪಸ್ ತೇರು ಗಡ್ಡೆಯ ಬಳಿಯ ನಿಗದಿತ ಸ್ಥಳದಲ್ಲಿ ಸಂಜೆ 6.40ಕ್ಕೆ ನಿಲುಗಡೆಗೊಂಡಿತು. ರಥದಲ್ಲಿ ಕ್ರಿಯಾಮೂರ್ತಿ ಪ್ರಕಾಶ ಕೊಟ್ಟೂರು ದೇವರು, ಧರ್ಮಕರ್ತ ಸಿ.ಎಚ್.ಎಂ. ಗಂಗಾಧರ ಮತ್ತಿತರರು ಇದ್ದರು.

ರಥೋತ್ಸವದ ಹಿನ್ನೆಲೆ ಮಾಜಿ ಸಚಿವರಾದ ಬಿ. ಶ್ರೀರಾಮುಲು, ಕೆ.ಎಸ್. ಈಶ್ವರಪ್ಪ, ಶಾಸಕ ಕೆ. ನೇಮರಾಜನಾಯ್ಕ, ಪತ್ನಿ ವಾಣಿ ನೇಮರಾಜ ನಾಯ್ಕ, ಮಾಜಿ ಶಾಸಕ ಎಸ್. ಭೀಮಾನಾಯ್ಕ ಮತ್ತಿತರ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದುಕೊಂಡರು.ರಥೋತ್ಸವ ಜರುಗುವ ಸಮಯದಲ್ಲಿ ರಾಣಿಬೆನ್ನೂರಿನ ಮಾಜಿ ಶಾಸಕ ಅರುಣ್‌ ಕುಮಾರ್‌ ಪೂಜಾರ್, ಮತ್ತಿತರ ಪ್ರಮುಖರು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗಂಗಾಧರಪ್ಪ ಕಾರ್ಯನಿರ್ವಾಹಕಾಧಿಕಾರಿ ಕೃಷ್ಣಪ್ಪ ಬಿ.ಎಂ. ಮತ್ತಿತರರು ಇದ್ದರು.

PREV

Recommended Stories

ಶಾಸಕ ಸೈಲ್‌ ಮನೇಲಿದ್ದ 6.75 ಕೇಜಿ ಚಿನ್ನ ಜಪ್ತಿ!
ಬೆಂಗಳೂರಿಂದ 400 ಕಾರುಗಳಲ್ಲಿಂದು ಬಿಜೆಪಿ ಶಾಸಕನ ಧರ್ಮಸ್ಥಳ ಚಲೋ!