ಕೆಸಿಸಿ ಬೆಳೆ ಸಾಲ ವಿತರಣೆ ತೊಡಕಿಗೆ ಕೇಂದ್ರವೇ ಕಾರಣ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ರಾಮನಗರ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ಕೆಸಿಸಿ ಬೆಳೆ ಸಾಲ ಯೋಜನೆ ಅಡಿಯಲ್ಲಿ ರೈತರಿಗೆ ಬೆಳೆ ಸಾಲ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು ಟೀಕಿಸಿದರು.

ರಾಮನಗರ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ಕೆಸಿಸಿ ಬೆಳೆ ಸಾಲ ಯೋಜನೆ ಅಡಿಯಲ್ಲಿ ರೈತರಿಗೆ ಬೆಳೆ ಸಾಲ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು ಟೀಕಿಸಿದರು.

ತಾಲೂಕಿನ ಕೈಲಾಂಚ ಹೋಬಳಿ ಅಂಜನಾಪುರ ಗ್ರಾಮದಲ್ಲಿ ವಿಭೂತಿಕೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳಿಂದ ರೈತರಿಗೆ ಬೆಳೆ ಸಾಲ ವಿತರಿಸದಿರಲು ಕೇಂದ್ರದ ಆರ್ಥಿಕ ನೀತಿಗಳೇ ಕಾರಣ ಎಂದು ದೂರಿದರು.

ಕೆಸಿಸಿ ಬೆಳೆಸಾಲ ಯೋಜನೆಯಲ್ಲಿ ಬಿಡಿಸಿಸಿ ಬ್ಯಾಂಕ್‌ ವತಿಯಿಂದ 108 ಕೋಟಿ ರುಪಾಯಿ ಸಾಲ ಕೊಡುವ ಉದ್ದೇಶವಿದೆ. ಕೇಂದ್ರ ಸರ್ಕಾರ ವಿಳಂಬ ಮಾಡಿದರೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಬಿಡಿಸಿಸಿ ಬ್ಯಾಂಕ್ ಕೆಸಿಸಿ ಬೆಳೆ ಸಾಲ ವಿತರಣೆ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಸ್ತ್ರೀ ಶಕ್ತಿ ಸಂಘಗಳು ಗ್ರಾಮೀಣ ಕೃಷಿ ಸಹಕಾರ ಸಂಘಗಳಿಂದ ಸಾಲ ಪಡೆಯಲು ಅವಕಾಶವಿದೆ. ಅನ್ಯ ಸಂಸ್ಥೆಗಳಿಂದ ಪಡೆದ ಸಾಲದ ಬಡ್ಡಿ ದರದ ಬಗ್ಗೆ ಸ್ತ್ರೀ ಶಕ್ತಿ ಸಂಘಗಳು ಗಮನ ಹರಿಸಬೇಕು. ಸಹಕಾರ ಸಂಘಗಳಲ್ಲಿ ಬಡ್ಡಿ ದರ ವಿಧಿಸುವ ರೀತಿ ಸಲುಭವಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸಾಲ ಪಡೆದರೆ ಅಲ್ಲಿ ಫ್ಲಾಟ್ ಬಡ್ಡಿದರ ವಿಧಿಸುತ್ತಾರೆ. ಒಟ್ಟಾರೆ ಪಾವತಿಯಲ್ಲಿ ಹೆಚ್ಚು ಬಡ್ಡಿ ಪಾವತಿಸುವಂತಾಗುತ್ತದೆ. ಆದರೆ, ಸಹಕಾರ ಸಂಘಗಳಲ್ಲಿ ಕಟ್ ಇಂಟರೆಸ್ಟ್ ಪದ್ಧತಿ ಇರುವುದರಿಂದ ಬಡ್ಡಿ ಪಾವತಿಯಲ್ಲಿ ಉಳಿತಾಯವಾಗುತ್ತದೆ. ಈ ವಿಚಾರವಾಗಿ ಶೀಘ್ರದಲ್ಲಿಯೇ ಸ್ತ್ರೀ ಶಕ್ತಿ ಸಂಘಗಳ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ವಿಭೂತಿಕೆರೆ ಸೊಸೈಟಿಯ ನೂತನ ಗೋದಾಮು ನಿರ್ಮಾಣಕ್ಕೆ ಎಲ್ಲ ಪದಾಧಿಕಾರಗಳು ಮತ್ತು ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ. ಇದೇ ರೀತಿ ಹಸು, ಕುರಿ, ಮೇಕೆ, ಕೋಳಿ ಸಾಕಾಣೆ, ಕೊಟ್ಟಿಗೆ ನಿರ್ಮಾಣ, ಹೈನುಗಾರಿಕೆಗಾಗಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಲಭ್ಯವಿದೆ. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಂಜು ತಿಳಿಸಿದರು.

ರೈತ ವಿರೋಧಿ ನೀತಿ:

ಮಾಜಿ ಶಾಸಕ ಕೆ. ರಾಜು ಮಾತನಾಡಿ, ಹಳ್ಳಿಯಲ್ಲಿರುವ ಸೊಸೈಟಿ, ಡೇರಿಗಳಲ್ಲಿ ರಾಜಕಾರಣ ನುಸುಳಬಾರದು. ರಾಜಕೀಯ ಕೇವಲ ಚುನಾವಣೆಗೆ ಸೀಮಿತವಾಗಿರಬೇಕು. ಆಗ ಮಾತ್ರ ರೈತರ ಶ್ರೇಯೋಭಿವೃದ್ಧಿ ಸಾಧ್ಯವಾಗಲಿದೆ. ಸಬ್ಸಿಡಿ ಕಡಿತಗೊಳಿಸುವಂತಹ ಕೇಂದ್ರ ಸರ್ಕಾರದ ನಿರ್ಧಾರ ರೈತ ವಿರೋಧಿಯಾಗಿದೆ. ಕೃಷಿಕರ ಜೀವನ ಸುಧಾರಿಸುವ ಬದಲು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ. ಆದ್ದರಿಂದ ಸಂಘದ ಆಡಳಿತ ಮಂಡಳಿ, ಸದಸ್ಯರು ಹಾಗೂ ರೈತರು ಸಹಕಾರಿಗಳಾಗಿ ಮುನ್ನಡೆಯಬೇಕು. ಇದರಿಂದ ಆರ್ಥಿಕ ಪ್ರಗತಿ ಕಾಣಬಹುದಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್. ಪಾರ್ಥಸಾರಥಿ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪುಂಡಲೀಕ ಎಲ್. ಸಾಧುರೆ, ವ್ಯವಸ್ಥಾಪಕ ಟಿ.ಸುರೇಶ್ , ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಚ್ .ರಾಜು, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ಸಂಘದ ನಿರ್ದೇಶಕರಾದ ಪಿ.ಕುಮಾರಸ್ವಾಮಿ, ಸಿ.ರೇವಣ್ಣ, ಟಿ.ಚಂದ್ರಪ್ಪ, ಶಿವಲಿಂಗಪ್ರಸಾದ್ , ಶ್ರೀನಿವಾಸಯ್ಯ, ಗುರುಸ್ವಾಮಿ, ರಾಜು, ಡಿ.ರಮೇಶ್ .ಕೆ.ಪಾರ್ಥ, ಚಂದ್ರಮ್ಮ, ವಿ.ಎನ್. ಚೇತನ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಾಂತಕುಮಾರ್, ಲೆಕ್ಕಿಗ ಪವಿತ್ರ, ಸಹಾಯಕ ಪುಟ್ಟಯ್ಯ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌.............ಉಪಕಸುಬುಗಳಿಂದ ಆರ್ಥಿಕ ಸುಧಾರಣೆಈ ಹಿಂದೆ 10 -12 ದಾಖಲೆ ಗ್ರಾಮಗಳನ್ನು ಸೇರಿಸಿ ವಿಭೂತಿಕೆರೆ ಗ್ರಾಮ ಪಂಚಾಯಿತಿಯನ್ನು ರಚನೆ ಮಾಡಲಾಯಿತು. ಪಕ್ಕದ ಚನ್ನಮಾನಹಳ್ಳಿಯಲ್ಲಿ ಕೆರೆ ಇದ್ದರೂ ಗ್ರಾಮಗಳಿಗೆ ನೀರಾವರಿ ಸೌಕರ್ಯ ಆಗಿಲ್ಲ. ಹಾಗಾಗಿ ಸತ್ತೇಗಾಲ ನೀರಾವರಿ ಯೋಜನೆಯಲ್ಲಿ ಅವ್ವೇರಹಳ್ಳಿ, ಬನ್ನಿಕುಪ್ಪೆ, ಚನ್ನಮಾನಹಳ್ಳಿ ಕೆರೆ ತುಂಬಿಸುವ ಮೂಲಕ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.

ಪ್ರಕೃತಿ ವಿಕೋಪದಿಂದಾಗಿ ಬೆಳೆ ರೈತರ ಕೈ ಸೇರುತ್ತಿಲ್ಲ. ಹೀಗಾಗಿ ಬೆಳೆ ಸಾಲ ಸದುಪಯೋಗ ಆಗುತ್ತಿಲ್ಲ. ಬೇಸಾಯ ನಂಬಿದರೆ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೃಷಿ ಜೊತೆಗೆ ಕುರಿ, ಮೇಕೆ, ಕೋಳಿ ಸೇರಿದಂತೆ ಇತರೆ ಸಾಕಾಣಿಕೆ ಮಾಡಿದರೆ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ ಎಂದು ಹೇಳಿದರು.ಕೋಟ್‌......ಸಂಘದ ಕಟ್ಟಡ ಶಿಥಿಲಗೊಂಡಿದ್ದು, ನೂತನ ಕಟ್ಟಡದ ಅವಶ್ಯಕತೆ ಇದೆ. ಈ ಬಗ್ಗೆ ಬಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಮಂಜು ಅವರು ಗಮನ ಹರಿಸಬೇಕು. ಸಹಕಾರ ಸಂಘಗಳಲ್ಲಿ ರಾಜಕೀಯ ಪ್ರವೇಶಿಸಬಾರದು. ಪಕ್ಷಪಾತ ಮರೆತು ಸಹಕಾರ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.-ಶಿವಕುಮಾರಸ್ವಾಮಿ, ಸಂಘದ ಅಧ್ಯಕ್ಷ

18ಕೆಆರ್ ಎಂಎನ್‌ 1.ಜೆಪಿಜಿ

ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಅಂಜನಾಪುರ ಗ್ರಾಮದಲ್ಲಿ ವಿಭೂತಿಕೆರೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಾಮು ಕಟ್ಟಡವನ್ನು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಉದ್ಘಾಟಿಸಿದರು.

Share this article