ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 18ರಂದು ಹಾವೇರಿಗೆ ಆಗಮಿಸಿ ಗಾಂಧಿ ಭವನ, ವಿಜ್ಞಾನ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸೇರಿದಂತೆ ಅಂದಾಜು ₹ 411.60 ಕೋಟಿ ಮೊತ್ತದ 14 ಕಾಮಗಾರಿಗಳ ಉದ್ಘಾಟನೆ ಹಾಗೂ 11 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಫೆ.18ರಂದು ಮಧ್ಯಾಹ್ನ 3 ಗಂಟೆಗೆ ಹಾವೇರಿಗೆ ಆಗಮಿಸಿ, ಗಾಂಧಿ ಭವನ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಖುದ್ದಾಗಿ ತೆರಳಿ ಉದ್ಘಾಟನೆ ನೆರವೇರಿಸುವರು. ಉಳಿದ ಕಾಮಗಾರಿಗಳಿಗೆ ಕೆಎಲ್ಇ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲಾದ ವೇದಿಕೆಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಗೃಹ ಸಚಿವ ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ, ಸಚಿವರಾದ ಎಚ್.ಕೆ.ಪಾಟೀಲ, ಜಮೀರ ಅಹ್ಮದ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ ಎಂದರು.
14 ಕಾಮಗಾರಿ ಲೋಕಾರ್ಪಣೆ: ₹3 ಕೋಟಿ ವೆಚ್ಚದ ಗಾಂಧಿ ಭವನ, ₹ 6.80 ಕೋಟಿ ಮೊತ್ತದ ಹಾವೇರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ₹ 1875.25 ಲಕ್ಷ ವೆಚ್ಚದ ಹಾವೇರಿ ಜಿಲ್ಲಾ ಪೊಲೀಸ್ ಕಾರ್ಯಾಲಯ, ₹ 575.25 ಲಕ್ಷ ಮೊತ್ತದ ಆರ್ಮರಿ ಕಟ್ಟಡ, ಡಾಗ್ ಕೆನಾಲ್ ಮತ್ತು ಎಂ.ಟಿ.ಶೆಡ್ ಹಾಗೂ ₹ 1017.40 ಲಕ್ಷ ಮೊತ್ತದ ಮೂರು ಅಂತಸ್ತಿನ 36 ವಸತಿ ಗೃಹ, ₹ 11.27 ಕೋಟಿ ಮೊತ್ತದ ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಾನುವಾರು ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಶೆಡ್, ₹ 25 ಕೋಟಿ ಮೊತ್ತದ ಅಕ್ಕೂರ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ₹ 1.29 ಕೋಟಿ ಮೊತ್ತದ ಕೆಆರ್‌ಐಡಿಎಲ್‌ನ ಸ್ವಂತ ಕಚೇರಿ ಕಟ್ಟಡ, ₹ 23.75 ಕೋಟಿ ಮೊತ್ತದ ಕಳ್ಳಿಹಾಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪಜಾ/ಪವ ಹಾಗೂ ₹1119.83 ಲಕ್ಷ ಮೊತ್ತದ ಗುತ್ತಲ ಆರ್.ಎಂ.ಎಸ್.ಎ.ಸರ್ಕಾರಿ ಉರ್ದು ಪ್ರೌಢಶಾಲೆ ಉದ್ಘಾಟನಾ ಸಮಾರಂಭ ಜರುಗಲಿದೆ.ಬ್ಯಾಡಗಿ ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ₹ 2.80 ಕೋಟಿ ಮೊತ್ತದ ರೈತ ಭವನ, ₹ 2 ಕೋಟಿ ಮೊತ್ತದ ಅರೇಮಲ್ಲಾಪೂರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ₹ 75.42 ಲಕ್ಷ ಮೊತ್ತದ ಚೌಡಯ್ಯದಾನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ₹ 5.54 ಕೋಟಿ ಮೊತ್ತದ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಹಿರಿಯರಿಗೆ ಕನ್ನಡಕ ವಿತರಣೆ ಹಾಗೂ ಶಾಲಾ ಮಕ್ಕಳ ಕನ್ನಡ ವಿತರಣೆ ಕಾರ್ಯಕ್ರಮ ಉದ್ಘಾಟನೆ ಜರುಗಲಿದೆ.
11 ಕಾಮಗಾರಿಗಳ ಶಂಕುಸ್ಥಾಪನೆ: ನೆಲೋಗಲ್‌ನಲ್ಲಿ ₹5 ಕೋಟಿ ಮೊತ್ತದ ಸರ್ಕಾರಿ ಕಾನೂನು ಕಾಲೇಜು, ₹ 56.84 ಕೋಟಿ ಮೊತ್ತದ ಕೋಳೂರು ಗಣಜೂರು ಕೈಗಾರಿಕಾ ಅಭಿವೃದ್ಧಿ, ನಗರಸಭೆ ಆಯುಕ್ತರ ಹಳೆಯ ವಸತಿ ಗೃಹ ಜಾಗೆಯಲ್ಲಿ ₹ 1.50 ಕೋಟಿ ಮೊತ್ತದ ವಾಣಿಜ್ಯ ಸಂಕೀರ್ಣ ನಿರ್ಮಾಣ, ₹ 141.62 ಕೋಟಿ ಮೊತ್ತದ ಹಾವೇರಿ ನಗರಕ್ಕೆ ಸಗಟು ಮತ್ತು ಗುತ್ತಲ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.10 ಕೋಟಿ ಮೊತ್ತದ ಬ್ಯಾಡಗಿ ತಾಲೂಕಾಡಳಿತ ಭವನ, ಬ್ಯಾಡಗಿ ತಾಲೂಕು ಎಕ್ಕುಂಬಿ-ಮೊಳಕಾಲ್ಮೂರ ರಾಜ್ಯ ಹೆದ್ದಾರಿಯಿಂದ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿಗೆ ಕೋಡುವ ರಾಜ್ಯ ಹೆದ್ದಾರಿ ಸುಧಾರಣೆ ಮಾಡುವ ₹ 9.50 ಕೋಟಿ ಮೊತ್ತದ ಕಾಮಗಾರಿಗೆ ಹಾಗೂ ಬ್ಯಾಡಗಿ ತಾಲೂಕು ಎಕ್ಕುಂಬಿ-ಮೊಳಕಾಲ್ಮೂರ ರಾಜ್ಯ ಹೆದ್ದಾರಿಯಿಂದ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿಗೆ ಕೋಡುವ ರಾಜ್ಯ ಹೆದ್ದಾರಿ ಆಯ್ದ ಭಾಗಗಳಲ್ಲಿ ಸುಧಾರಣೆ ಮಾಡುವ ₹ 4 ಕೋಟಿ ಮೊತ್ತದ ಕಾಮಗಾರಿ, ₹ 52 ಕೋಟಿ ಮೊತ್ತದ ರಟ್ಟಿಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಕಾಮಗಾರಿ ಹಾಗೂ ₹ 50.13 ಲಕ್ಷ ಮೊತ್ತದ ಹಿರೇಕೆರೂರು ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಮೃತ 2.0 ಯೋಜನೆಯಡಿ ಹಾವೇರಿ, ಗುತ್ತಲ ಪಟ್ಟಣಗಳಿಗೆ ಕುಡಿಯುವ ನೀರು ಯೋಜನೆಗೆ ₹ 141.62 ಕೋಟಿ ಹಾಗೂ ರಟ್ಟಿಹಳ್ಳಿ ಪಟ್ಟಣಕ್ಕೆ ₹ 52 ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ನಗರ ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆಗೊಳ್ಳಲಿದೆ. ಹೆಗ್ಗೇರಿ ಕೆರೆ ಮತ್ತು ತುಂಗಾ ನದಿ ಮೂಲದಿಂದ ನೀರು ಸರಬರಾಜು ಮಾಡಲಾಗುವುದು. ಕಂಚಾರಗಟ್ಟಿ ನಗರದ ಕುಡಿಯುವ ನೀರು ದಾಸ್ತಾನು ಮಾಡಿಕೊಳ್ಳಲು ಬ್ಯಾರೇಜ್ ನಿರ್ಮಾಣಕ್ಕೆ ಸಲ್ಲಿಸಲಾದ ಪ್ರಸ್ತಾವನೆ ಅನುಮೋದನೆ ದೊರೆಯಲಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಆಶಾ ಕಿರಣ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, ಮುಖ್ಯಮಂತ್ರಿಗಳು ಉಚಿತ ಕನ್ನಡಕ ವಿತರಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌ಎಫ್‌ಎನ್ ಗಾಜೀಗೌಡ್ರ, ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ.ಮೈದೂರ, ಪ್ರಸನ್ನಕುಮಾರ ಹಿರೇಮಠ ಇತರರು ಇದ್ದರು.