ಕೊಳವೆಬಾವಿಗೆ ಬಿದ್ದ ಸಾತ್ವಿಕ್ ಜೀವಂತವಾಗಿ ಹೊರಗೆ ಬರಬೇಕು ಎಂದು ಕೇವಲ ಲಚ್ಯಾಣ ಗ್ರಾಮದ ಜನರು ಮಾತ್ರ ಬೇಡಿಕೊಳ್ಳಲಿಲ್ಲ. ರಾಜ್ಯ ಮತ್ತು ರಾಜ್ಯದಾಚೆ ಇರುವ ಜನರು ಕೂಡ ದೇವರಿಗೆ ಮೊರೆ ಹೋಗುತ್ತಿದ್ದರು. ಮಗುವಿಗೆ ಸಂಬಂಧವಿಲ್ಲದವರೇ ಮರುಕಪಡುತ್ತಿದ್ದರು.
ಖಾಜು ಸಿಂಗೇಗೊಳ
ಇಂಡಿ : ಕೊಳವೆಬಾವಿಗೆ ಬಿದ್ದ ಸಾತ್ವಿಕ್ ಜೀವಂತವಾಗಿ ಹೊರಗೆ ಬರಬೇಕು ಎಂದು ಕೇವಲ ಲಚ್ಯಾಣ ಗ್ರಾಮದ ಜನರು ಮಾತ್ರ ಬೇಡಿಕೊಳ್ಳಲಿಲ್ಲ. ರಾಜ್ಯ ಮತ್ತು ರಾಜ್ಯದಾಚೆ ಇರುವ ಜನರು ಕೂಡ ದೇವರಿಗೆ ಮೊರೆ ಹೋಗುತ್ತಿದ್ದರು. ಮಗುವಿಗೆ ಸಂಬಂಧವಿಲ್ಲದವರೇ ಮರುಕಪಡುತ್ತಿದ್ದರು. ಇನ್ನು ಆತನ ಹೆತ್ತ ತಂದೆ ತಾಯಿ ಪರಿಸ್ಥಿತಿ ಹೇಗಾಗಿರಬೇಡ. ಅದನ್ನು ಊಹಿಸಕೊಳ್ಳುವುದಕ್ಕೂ ಆಗದು.
ಆದರೆ, ಇಂತಹ ಆತಂಕ, ದುಗುಡದ ನಡುವೆ ಗುರುವಾರ ಬೆಳಗ್ಗೆ 8.30ಕ್ಕೆ ಮಗುವಿನ ಅಳುವ ಶಬ್ಧ ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ಸಿಬ್ಬಂದಿಗೆ ಕೇಳಿಸಿತು. ಇದು ಖಚಿತವಾಗುತ್ತಿದ್ದಂತೆ ಮಗು ಅಳುತ್ತಿದೆ. ಭಯಪಡಬೇಡಿ. ಮಗುವನ್ನು ಜೀವಂತವಾಗಿಯೇ ಹೊರಗೆ ತರುತ್ತೇವೆ ಎಂಬ ವಿಶ್ವಾಸ ನಮಗೆ ಬಂದಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳುತ್ತಿದ್ದಂತೆ ಸಾತ್ವಿಕ್‌ನ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಮತ್ತೆ ಆತ ಈಗ ಮತ್ತೆ ಹುಟ್ಟಿ ಬಂದಷ್ಟೇ ಖುಷಿ ಎಂಬ ಸಂಭ್ರಮ ಅವರ ಮನದ ಮೂಲೆಯಲ್ಲಿ ಮೂಡಿತು.
ರಕ್ಷಣಾ ಕಾರ್ಯಾಚರಣೆ ವೇಳೆ 16 ಅಡಿಗೂ ಅಧಿಕವಾಗಿ ಕೊರೆದಾಗ ಮಗು ಅಳುವ ಶಬ್ದ ರಕ್ಷಣಾ ಸಿಬ್ಬಂದಿಗೆ ಕೇಳಿಸಿತು. ಬೆಳಗ್ಗೆ ಅದು ಕೇಳಿಸಿದ್ದರಿಂದ ಪೋಷಕರಲ್ಲಿಯೂ ಮಗು ಬದುಕಿ ಬರುವ ವಿಶ್ವಾಸ ಇಮ್ಮಡಿಯಾಯಿತು. ನಂತರ ಕಾರ್ಯಾಚರಣೆ ಯಶಸ್ವಿ ಕೂಡ ಆಯಿತು.
ಹೊರಗೆ ಬಿದ್ದ ಚಪ್ಪಲಿಯಿಂದ ಗೊತ್ತಾಯ್ತು ಮಗು ಬಿದ್ದ ಜಾಗ:
ಲಿಂಬೆ ಗಿಡಗಳು ಒಣಗುತ್ತಿವೆ ಎಂಬ ಕಾರಣಕ್ಕಾಗಿ ಸಾತ್ವಿಕ್‌ನ ತಾತ ಬೋರ್‌ವೆಲ್ ಕೊರೆಸಿದ್ದರು. ಆದರೆ, ಅದರಲ್ಲಿ ನೀರು ಬರಲಿಲ್ಲ. ಅದನ್ನು ಮುಚ್ಚದೇ ಹಾಗೇ ಬಿಟ್ಟರು. ದುರಾದೃಷ್ಟ ಎಂಬಂತೆ ಸಾತ್ವಿಕ್ ಸಂಜೆ ಆಟವಾಡುತ್ತಾ ಹೋಗಿ ಇದೆ ಕೊಳವೆಬಾವಿಯಲ್ಲಿ ತಲೆಕೆಳಗಾಗಿ ಬಿದ್ದಿದ್ದಾನೆ. ನಂತರ ಸಾತ್ವಿಕ್‌ನ ತಾಯಿ ಮಗನನ್ನು ಹುಡುಕಿಕೊಂಡು ಹೋಗಿದ್ದಾಳೆ. ಆದರೆ ಎಲ್ಲೂ ಕಾಣದಾದಾಗ ಆಕೆಯೂ ಆತಂಕಗೊಂಡಿದ್ದಾಳೆ. ನಂತರ ಕೊಳವೆಬಾವಿ ಹತ್ತಿರ ಮಗನ ಚಪ್ಪಲ ಬಿದ್ದಿದ್ದು ನೋಡಿ ಮನೆಯವರನ್ನು ಕರೆದಿದ್ದಾಳೆ. ನಂತರ ಕೊಳವೆಬಾವಿಯಲ್ಲಿ ಬ್ಯಾಟರ್ ಬಿಟ್ಟು ನೋಡಿದಾಗ ಮಗು ಇರುವುದು ಗೊತ್ತಾಗಿದೆ. ನೆತ್ತಿ ಸುಡುವ ಬಿಸಿಲಲ್ಲೇ ಕಾರ್ಯಾಚರಣೆ:
ಬುಧವಾರ ಸಂಜೆ ಆರು ಗಂಟೆಗೆ ಮಗು ಬಿದ್ದ ವಿಚಾರ ಅರಿತ ಕುಟುಂಬಸ್ಥರು ನಂತರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದ ಮೇಲೆ ಪರಿಶೀಲಿಸಿದ್ದಾರೆ. ನಂತರ ಕಲಬುರ್ಗಿ ಮತ್ತು ಬೆಳಗಾವಿಯಿಂದ ಎಸ್‌ಡಿಆರ್‌ಎಫ್ ತಂಡದವರನ್ನು ಕರೆಸಿದ್ದಾರೆ. ಜತೆಗೆ ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್ ತಂಡ ಕೂಡ ಇವರನ್ನು ಸೇರಿಕೊಂಡಿದೆ. ಸತತ 20 ಗಂಟೆಗಳ ಕಾಲ ರಾತ್ರಿ, ಬಿಸಿಲೆನ್ನದೆ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆಯನ್ನೇ ನೋಡುತ್ತಿದ್ದ ತಂದೆ ತಾಯಿ:
ಪುತ್ರ ಕೊಳವೆಬಾವಿಯಲ್ಲಿ ಏನನ್ನೂ ತಿನ್ನದೆ ಹಾಗೇ ಇರುವುದು ಒಂದೆಡೆಯಾದರೆ, ಆತನನ್ನು ರಕ್ಷಿಸಿ ಕರೆತನ್ನಿ ಎಂದು ಸಾತ್ವಿಕ್‌ನ ತಾಯಿ ಪೂಜಾ ಗೋಗರೆಯುತ್ತಿರುವುದು ಕೂಡ ಎಲ್ಲರ ಮನಕಲಕುವಂತೆ ಇತ್ತು. ಸಾತ್ವಿಕ್‌ನ ತಂದೆ ಸತೀಶ್ ಕೂಡ ಅನ್ನಾಹಾರ ಬಿಟ್ಟು, ಕಾರ್ಯಾಚರಣೆಯ ಪ್ರತಿಯೊಂದು ಅಂಶಗಳತ್ತ ಗಮನ ನೀಡುತ್ತಿದ್ದರು. ಮಗ ಬೇಗ ಹೊರಗೆ ಬಂದರೆ ಸಾಕಪ್ಪ ದೇವರೆ ಎಂದು ಬೇಡಿಕೊಳ್ಳುತ್ತಿರುವುದು ಕೂಡ ಕಂಡುಬಂತು.
ಜನರ ನಿಯಂತ್ರಣವೇ ಸವಾಲು:
ಸಾತ್ವಿಕ್‌ನನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದ್ದರೆ, ಅದನ್ನು ನೋಡಲೆಂದೇ ಜನರು ತಂಡೋಪತಂಡವಾಗಿ ಜನರು ಬರುತ್ತಿದ್ದರು. ಈ ವಿಚಾರ ಅರಿತ ಸುತ್ತಮುತ್ತಲಿನ ಗ್ರಾಮಗಳ ಜನರು ಕಾರ್ಯಾಚರಣೆ ನೋಡಲೆಂದೇ ಬರುತ್ತಿದ್ದರು. ಸಾವಿರಾರು ಜನರು ಬರುತ್ತಿರುವುದನ್ನು ಅರಿತ ಪೊಲೀಸರು ಅವರನ್ನು ನಿಯಂತ್ರಣ ಮಾಡುವುದೇ ದೊಡ್ಡ ಸವಾಲಾಗಿತ್ತು.