೧೫ ಲಕ್ಷಕ್ಕೂ ಹೆಚ್ಚು ಸುಂಕ ಉಳಿಸಿಕೊಂಡ ಚೀನಾ ಕಂಪನಿ । ತೆರಿಗೆ ಕಟ್ಟಲು ಬಂದರೂ ಬೇಡ ಎಂದ್ರಾ ಗ್ರಾಪಂ ಸದಸ್ಯ?
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಕೆಲಸೂರು ಗ್ರಾಪಂ ವ್ಯಾಪ್ತಿಯ ಚೆಂಗುವಾಂಗ್ ನ್ಯಾಚುರಲ್ ಎಕ್ಸ್‌ಟ್ರ್ಯಾಕ್ಟ್ (ಇಂಡಿಯಾ) ಪ್ರವೇಟ್ ಲಿಮಿಡೆಟ್ (ಚೆಂಡು ಹೂ ಕಂಪನಿ) ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟದೆ ಸತಾಯಿಸುತ್ತಿದೆ.
ಕಳೆದ ಎರಡು ವರ್ಷಗಳಿಂದ ಕೆಲಸೂರು ಗ್ರಾಪಂಗೆ ಚೆಂಗುವಾಂಗ್ ನ್ಯಾಚುರಲ್ ಕಂಪನಿಯು ಟ್ಯಾಕ್ಸ್ ಕಟ್ಟದೆ ಸತಾಯಿಸುತ್ತಿದ್ದ ಹಿನ್ನೆಲೆ ಗ್ರಾಪಂ ಹಲವು ನೋಟಿಸ್ ನೀಡಿ ತೆರಿಗೆ ಪಾವತಿಸುವಂತೆ ಸೂಚನೆ ನೀಡಿದೆ.ಎರಡು ವರ್ಷದ ಸುಮಾರು ೧೫ ಲಕ್ಷ ರು.ಗೂ ಹೆಚ್ಚು ಟ್ಯಾಕ್ಸ್ ಕಟ್ಟಲು ಚೆಂಗುವಾಂಗ್ ನ್ಯಾಚುರಲ್ ಎಕ್ಸ್‌ಟ್ರ್ಯಾಕ್ಟ್(ಇಂಡಿಯಾ) ಪ್ರವೇಟ್ ಲಿಮಿಡೆಟ್ ಕಂಪನಿಯು ಇತ್ತೀಚೆಗೆ ಮುಂದೆ ಬಂದರೂ ಗ್ರಾಪಂ ಸದಸ್ಯರೊಬ್ಬರು ಈಗ ಕಟ್ಟಬೇಡಿ ಎಂದು ಹೇಳಿದ್ದಾರೆಂಬ ಗುಸು ಗುಸು ಗ್ರಾಪಂ ಸದಸ್ಯರಲ್ಲೇ ಎದ್ದಿದೆ ಎಂದು ಹೇಳಲಾಗಿದೆ.
ಗ್ರಾಪಂಗೆ ಚೆಂಡು ಹೂ ಕಂಪನಿ ೧೫ ಲಕ್ಷ ರು.ಗೂ ಹೆಚ್ಚು ಟ್ಯಾಕ್ಸ್ ಕಟ್ಟಿದ್ದರೆ ಗ್ರಾಪಂ ಅಭಿವೃದ್ಧಿಗೆ ಕೆಲಸಗಳಿಗೆ ಬಳಸಿಕೊಳ್ಳಬಹುದಿತ್ತು. ಆದರೆ ಗ್ರಾಪಂ ಸದಸ್ಯರೊಬ್ಬರು ಟ್ಯಾಕ್ಸ್ ಕಟ್ಟಲು ಬಂದ ಕಂಪನಿಯ ಸಿಬ್ಬಂದಿಗೆ ಈಗ ಬೇಡ ಮುಂದೆ ಕಟ್ಟಿ ಎಂದು ಹೇಳಿದ್ದಾರೆ ಎನ್ನಲಾಗಿದೆ.ಕಳೆದ ಎರಡು ವರ್ಷಗಳಿಂದ ಲಕ್ಷಾಂತರ ಟ್ಯಾಕ್ಸ್ ಕಟ್ಟದೆ ಇರುವ ಕಂಪನಿಗೆ ಮತ್ತಷ್ಟು ತೆರಿಗೆ ಹಾಕಿ ಎಂದು ಹೇಳಬೇಕಾದ ಸದಸ್ಯರೊಬ್ಬರೇ ಟ್ಯಾಕ್ಸ್ ಕಟ್ಟಲು ಬಂದರೂ ಬೇಡ ಎಂದು ಹೇಳಿ ಕಳುಹಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕೆಲಸೂರು ಗ್ರಾಪಂನ ಆಡಳಿತ ಕಾಂಗ್ರೆಸ್ ಬೆಂಬಲಿತರ ಕೈಯಲ್ಲಿದೆ, ಟ್ಯಾಕ್ಸ್ ಕಟ್ಟಿಸಿಕೊಂಡು ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿಗೆ ಬಳಸಬೇಕಾದ ಗ್ರಾಪಂ ಟ್ಯಾಕ್ಸ್ ಕಟ್ಟಿಸಲು ಮುಂದಾಗಲಿ ಎಂದು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರೊಬ್ಬರು ಹೇಳಿದ್ದು, ಟ್ಯಾಕ್ಸ್ ಕಟ್ಟದೆ ಲಕ್ಷಾಂತರ ಬಾಕಿ ಉಳಿಸಿಕೊಂಡ ಚೆಂಡು ಹೂ ಕಂಪನಿಯಿಂದ ಬಡ್ಡಿ ಸಮೇತ ವಸೂಲಿ ಮಾಡಲಿ ಎಂದು ಆಗ್ರಹಿಸಿದ್ದಾರೆ.ಶಾಸಕರು ವಸೂಲಿಗೆ ಸೂಚಿಸಲಿ!
ಕಳೆದೆರಡು ವರ್ಷಗಳಿಂದ ೧೫ ಲಕ್ಷ ರು.ಗೂ ಹೆಚ್ಚು ಟ್ಯಾಕ್ಸ್ ಕಟ್ಟದ ಚೆಂಗುವಾಂಗ್ ನ್ಯಾಚುರಲ್ ಕಂಪನಿ ಇದೀಗ ಟ್ಯಾಕ್ಸ್ ಕಟ್ಟಲು ಬಂದರೂ ಈಗ ಬೇಡ ಎಂದು ಗ್ರಾಪಂ ಸದಸ್ಯರೊಬ್ಬರು ಹೇಳಿದ್ದಾರೆಂಬ ಮಾತು ಕೇಳಿ ಬಂದಿರುವ ಕಾರಣ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಟ್ಯಾಕ್ಸ್ ಕಟ್ಟಬೇಡ ಎಂದ ಸದಸ್ಯರೊಬ್ಬರಿಗೆ ತಿಳಿ ಹೇಳಿ ಟ್ಯಾಕ್ಸ್ ಕಟ್ಟಿಸಲು ಸೂಚಿಸಬೇಕಿದೆ.ಚೀನಾ ಮೂಲದ ಚೆಂಗುವಾಂಗ್ ನ್ಯಾಚುರಲ್ ಪ್ರೈವೇಟ್ ಲಿಮಿಡೆಟ್ ಕಂಪನಿ ಎರಡು ವರ್ಷಗಳಿಂದಲೂ ಟ್ಯಾಕ್ಸ್ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು ಸರಿಯಲ್ಲ, ಉಳಿಸಿಕೊಂಡ ಬಾಕಿಗೆ ಬಡ್ಡಿ ಸಮೇತ ಟ್ಯಾಕ್ಸ್ ವಸೂಲಿ ಮಾಡಿಸಲು ಶಾಸಕರು ಗ್ರಾಪಂ ಪಿಡಿಗೆ ಸೂಚನೆ ನೀಡಲಿ ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.ಚೆಂಗುವಾಂಗ್ ನ್ಯಾಚುರಲ್ ಎಕ್ಸ್‌ಟ್ರ್ಯಾಕ್ಟ್ (ಇಂಡಿಯಾ) ಪ್ರೈವೇಟ್ ಲಿಮಿಡೆಟ್ ಕಂಪನಿ ಕಳೆದ ಎರಡು ವರ್ಷಗಳಿಂದ ಗ್ರಾಪಂಗೆ ಟ್ಯಾಕ್ಸ್ ಕಟ್ಟಿಲ್ಲ. ಟ್ಯಾಕ್ಸ್ ಕಟ್ಟುವಂತೆ ಹಲವು ನೋಟಿಸ್ ಕೂಡ ನೀಡಲಾಗಿದೆ.
ರವಿ, ಪಿಡಿಒ, ಕೆಲಸೂರು ಗ್ರಾಪಂ.