ಚಡ್ಡಿ ಬನಿಯಾನ್ ಗ್ಯಾಂಗ್ ಬಂದಿದೆ, ಎಚ್ಚರ....

KannadaprabhaNewsNetwork | Published : Jul 9, 2024 12:47 AM

ಸಾರಾಂಶ

ಮೂರ್ನಾಲ್ಕು ತಿಂಗಳ ಹಿಂದೆ ಉಡುಪಿಯ ಸಂತಕಟ್ಟೆಯಲ್ಲಿನ ಬೇಕರಿ ಮಾಲೀಕರೊಬ್ಬರ ಮನೆಗೆ ಈ ಗ್ಯಾಂಗ್ ನುಗ್ಗಿ ಕಳ್ಳತನ ಮಾಡಿ ಮಾಡಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಅಂತಾರಾಜ್ಯ ಕುಖ್ಯಾತಿಯ ಚಡ್ಡಿ ಬನಿಯಾನ್ ಗ್ಯಾಂಗ್ ಇದೀಗ ಕರಾವಳಿಗೂ ಕಾಲಿಟ್ಟು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಇದು ಪೊಲೀಸ್ ಇಲಾಖೆಗೆ ಸವಾಲು ಹಾಕುತ್ತಿದೆ.

ಮೂರ್ನಾಲ್ಕು ತಿಂಗಳ ಹಿಂದೆ ಉಡುಪಿಯ ಸಂತಕಟ್ಟೆಯಲ್ಲಿನ ಬೇಕರಿ ಮಾಲೀಕರೊಬ್ಬರ ಮನೆಗೆ ಈ ಗ್ಯಾಂಗ್ ನುಗ್ಗಿ ಕಳ್ಳತನ ಮಾಡಿ ಮಾಡಿತ್ತು. ಮಂಗಳೂರಿನ ಉರ್ವ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆಸಿದೆ‌. ಎರಡೂ ಕೃತ್ಯಗಳು ಈ ಮನೆಗಳ ಸಮೀಪದ ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿದ್ದು, ಇದು ಚಡ್ಡಿ ಬನಿಯಾನ್ ಗ್ಯಾಂಗ್‌ನದ್ದೇ ಕೃತ್ಯ ಎಂದು ಪತ್ತೆಯಾಗಿದೆ.

ಉತ್ತರ ಭಾರತದಲ್ಲಿ ಕಚ್ಚ ಬನಿಯಾನ್ ಗ್ಯಾಂಗ್ ಎಂದು ಕರೆಯಲಾಗುವ ಈ ಕಳ್ಳರು, ಕೇವಲ ಬನಿಯನ್ ಹಾಗೂ ಚಡ್ಡಿ ಧರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಬಂದು ರಾತ್ರಿ ಕಳ್ಳತನ ನಡೆಸಿ ಬೇರೆ ಊರಿಗೆ ಪರಾರಿಯಾಗುತ್ತಾರೆ. ಮತ್ತೆ ಬೇರೆ ರಾಜ್ಯದಲ್ಲಿ ಕೃತ್ಯ ನಡೆಸುತ್ತಾರೆ.

7-8 ಮಂದಿ ಹೊರರಾಜ್ಯದ ಈ ಕಳ್ಳರು ಅತ್ಯಂತ ನಾಚೂಕಾಗಿ ಕಳ್ಳತನಕ್ಕೆ ಕುಖ್ಯಾತರಾಗಿದ್ದಾರೆ. ರಾತ್ರಿ ಒಂದು ಮನೆಯನ್ನು ಆಯ್ಕೆ ಮಾಡಿಕೊಂಡು ಸದ್ದಿಲ್ಲದೇ ಕಿಟಕಿಗಳ ಸರಳುಗಳನ್ನು ಕತ್ತರಿಸಿ, ಆ ಮನೆಯಲ್ಲಿ ಜನರಿದ್ದರೂ ಅವರಿಗೆ ಗೊತ್ತೇ ಆಗದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತದೆ. ಇದುವರೆಗೆ ಅವರ ಬಂಧನವಾಗಿರದೇ ಇರುವುದರಿಂದ ಹೆಚ್ಚಿನ ಮಾಹಿತಿ ಇಲ್ಲದಿರುವುದೂ ಪೊಲೀಸ್ ಇಲಾಖೆಗೆ ಸವಾಲಾಗಿದೆ.

ಈ ಚಡ್ಡಿ ಬನಿಯಾನ್ ಗ್ಯಾಂಗ್ ಕರಾವಳಿಯಲ್ಲಿ ಸಕ್ರಿಯವಾದ ಬಗ್ಗೆ ಮಾಹಿತಿ ಇದ್ದು, ಸಾರ್ವಜನಿಕರು ಹೆಚ್ಚಿನ ಜಾಗ್ರತೆಯನ್ನು ವಹಿಸುವಂತೆ ಉಡುಪಿ ನಗರ ಠಾಣೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ರಾತ್ರಿಯಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಿ, ತಮ್ಮ ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೇ, ಸೇಫ್ ಲಾಕರ್ ಇಡಿ ಹಾಗೂ ತಮ್ಮ ಮನೆಯ ಮತ್ತು ವಾಸ್ತವ್ಯದ ಪರಿಸರದಲ್ಲಿ ಇರುವ ಸಿಸಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ‌.

ವಸತಿ / ಬಡಾವಣೆ / ಪರಿಸರದಲ್ಲಿ ದಾರಿ ದೀಪಗಳು ಉರಿಯುತ್ತಿರುವ ಬಗ್ಗೆ ಪರಿಶೀಲಿಸಿಕೊಂಡು, ಸುಸ್ಥಿತಿಯಲ್ಲಿ ಇಲ್ಲದೇ ಇದ್ದಲ್ಲಿ ಮೆಸ್ಕಾಂ / ನಗರ ಪಾಲಿಕೆ/ ಸ್ಥಳೀಯ ಗ್ರಾಪಂ ಗಮನಕ್ಕೆ ತರಬೇಕು. ಅಗತ್ಯ ಸಹಕಾರ ಬೇಕಾದಲ್ಲಿ ಉಡುಪಿ ಠಾಣೆಯ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ ಎಂದೂ ತಿಳಿಸಲಾಗಿದೆ.

ಯಾವುದೇ ಅಪರಿಚಿತ/ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರು ಕಂಡು ಬಂದಲ್ಲಿ ಕೂಡಲೇ ತುರ್ತು ಕರೆ ಸೇವೆ 112, ಕಂಟ್ರೋಲ್ ರೂಮ್ 9480805400, ಉಡುಪಿ ಪೊಲೀಸ್ ಠಾಣೆ 0820-2520444 , ಪೊಲೀಸ್ ನಿರೀಕ್ಷಕರು 9480805408, 9480805445 ಈ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ.

-----ಅಂತಾರಾಜ್ಯ ಕಳ್ಳರು ಮಂಗಳೂರಿನ ಉರ್ವ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆಸಿದೆ‌. ಹೀಗಾಗಿ ಉಡುಪಿಯಲ್ಲಿಯೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ತಿಳಿಸಿದ್ದೇವೆ. ತುರ್ತು ಸಂದರ್ಭದಲ್ಲಿ 112 ನಂಬರ್ ಕರೆ ಮಾಡಿ, ತಕ್ಷಣ ಪೋಲಿಸರು ತಮ್ಮ ಸಹಾಯಕ್ಕೆ ಬರುತ್ತಾರೆ.। ಡಾ.ಅರುಣ್, ಜಿಲ್ಲಾ ಎಸ್ಪಿ, ಉಡುಪಿ.

Share this article