ಸಮಾಜದ ಕಾರ್ಯಕ್ರಮವಾದ್ದರಿಂದ ಸಿಎಂಗೆ ಆಹ್ವಾನಿಸಿಲ್ಲ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಮುಖ್ಯಮಂತ್ರಿಯವರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲವೆಂದು ವಿಶೇಷ ಅರ್ಥವೇನೂ ಕಲ್ಪಿಸುವುದು ಬೇಡ. ಜಾತಿ ಗಣತಿ ವರದಿ ಅಂಗೀಕಾರ, ಬಿಡುಗಡೆ ಮಾಡದಂತೆ ನಾವಷ್ಟೇ ಅಲ್ಲ, ಒಕ್ಕಲಿಗ ಸೇರಿ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ: ಶಾಸಕ ಡಾ.ಶಾಮನೂರು ಶಿವಶಂಕರಪ್ಪ

ಮಹಾಧಿವೇಶನಕ್ಕೆ ಕರೆದಿಲ್ಲವೆಂದು ವಿಶೇಷ ಅರ್ಥ ಕಲ್ಪಿಸುವುದು ಬೇಡ: ಶಾಸಕ ಶಾಮನೂರು ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತ ಸಮಾಜದ ಮಹಾ ಅಧಿವೇಶನವಾಗಿದ್ದು, ಈ ಕಾರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಹ್ವಾನಿಸಿಲ್ಲ. ಸಿಎಂಗೆ ಕರೆಯಬೇಕೆಂದೇನೂ ಇಲ್ಲ. ಇದು ಸಮಾಜದ ಕಾರ್ಯಕ್ರಮ ಕಾರಣಕ್ಕಾಗಿ ಆಹ್ವಾನಿಸಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿಯವರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲವೆಂದು ವಿಶೇಷ ಅರ್ಥವೇನೂ ಕಲ್ಪಿಸುವುದು ಬೇಡ. ಜಾತಿ ಗಣತಿ ವರದಿ ಅಂಗೀಕಾರ, ಬಿಡುಗಡೆ ಮಾಡದಂತೆ ನಾವಷ್ಟೇ ಅಲ್ಲ, ಒಕ್ಕಲಿಗ ಸೇರಿ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.

ಅಭಾವೀಮದಿಂದ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಾತಿಗಣತಿ ಅಂಗೀಕರಿಸದಂತೆ ಮನವಿ ಮಾಡಿ ನಮ್ಮ ಅಭಿಪ್ರಾಯ ಸ್ಪಷ್ಟವಾಗಿ ಸರ್ಕಾರಕ್ಕೆ ತಿಳಿಸಿದ್ದೇವೆ. ಸಿದ್ದರಾಮಯ್ಯ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾತಿ ಗಣತಿ ವರದಿ ತಾವು ನೋಡಿಲ್ಲವೆಂದು ಬೆಳಗಾವಿಯಲ್ಲಿ ನಮಗೆ ಪ್ರತಿಕ್ರಿಯಿಸಿದ್ದರು. ಹಾಗಾಗಿ ನಾವು ಕಾದು ನೋಡುತ್ತೇವೆ. ಸಿದ್ದರಾಮಯ್ಯನವರು ಸಹ ಜಾತಿ ಗಣತಿ ವರದಿಯನ್ನು ತಾವು ನೋಡಿಲ್ಲವೆಂದು, ಲೋಪದೋಷವಿದ್ದರೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಊಹಾಪೋಹಕ್ಕೆ ಅವಕಾಶ ನೀಡುವುದೂ ಬೇಡ. ಎಲ್ಲರೂ ಒಟ್ಟಾಗಿ ಹೋಗೋಣ. ಡಿ.23, 24ರಂದು ನಡೆಯುವ ಮಹಾ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಜಾತಿಗಣತಿ ವಿರೋಧಿಸಿದ್ರೆ ಕಾಂಗ್ರೆಸ್‌ಗೆ ನಷ್ಟವಿಲ್ಲ ಜಾತಿ ಗಣತಿಗೆ ವೀರಶೈವ ಲಿಂಗಾಯತ ಮಹಾಸಭಾ ಕೂಡ ಈಗಾಗಲೇ ವಿರೋಧಿಸಿದೆ. ಜಾತಿಗಣತಿ ವಿರೋಧಿಸಿದರೆ ಕಾಂಗ್ರೆಸ್ಸಿಗೇನೂ ನಷ್ಟವಾಗುವುದಿಲ್ಲ. ನಾನೊಬ್ಬ ಕಾಂಗ್ರೆಸ್ಸಿಗ, ಪಕ್ಷಕ್ಕೆ ಪ್ರೋತ್ಸಾಹ ಮಾಡಲು ಇರುವುದು. ಜಾತಿ ಗಣತಿ ವರದಿ ಅಂಗೀಕರಿಸದಂತೆ ಸರ್ಕಾರಕ್ಕೂ ಮನವಿ ಮಾಡಿದ್ದೇವೆ.

ಡಾ.ಶಾಮನೂರು ಶಿವಶಂಕರಪ್ಪ, ಶಾಸಕ ....

ಮಹಾ ಅಧಿವೇಶನಕ್ಕೆ 3 ಲಕ್ಷ ಮಂದಿ ನಿರೀಕ್ಷೆ: ಶಾಮನೂರು * ಊಟ, ವಸತಿ, ಕುಡಿಯುವ ನೀರು ಸೇರಿ ಅಗತ್ಯ ಸಿದ್ಧತೆ ದಾವಣಗೆರೆಯಲ್ಲಿ ಡಿ.23, 24ರಂದು ನಡೆಯುವ ವೀರಶೈವ ಲಿಂಗಾಯತ ಮಹಾಸಭಾದ ಮಹಾಅಧಿವೇಶನದಲ್ಲಿ ಸುಮಾರು 2-3 ಲಕ್ಷಕ್ಕೂ ಅಧಿಕ ಮಂದಿ ಸೇರಿ ಸಮಾಜದ ಶಕ್ತಿ ಪ್ರದರ್ಶಿಸುವುದಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಈಗಾಗಲೇ ಮಹಾ ಅಧಿವೇಶನಕ್ಕೆ ಸಕಲ ಸಿದ್ಧತೆ ಮಾಡುತ್ತಿದ್ದು, ಲಕ್ಷಾಂತರ ಆಸನಗಳು, ವಿಶಾಲ ವೇದಿಕೆ ಸಿದ್ಧವಾಗಿದೆ ಎಂದರು. ಲಕ್ಷಾಂತರ ಸಮಾಜ ಬಾಂಧವರಿಗೆ ಊಟ, ವಸತಿ, ಕುಡಿಯುವ ನೀರು ಸೇರಿ ಎಲ್ಲ ಅಗತ್ಯ ಸಿದ್ಧತೆಗಳ ನಿರ್ದಿಷ್ಟ ಸಮಿತಿಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಹರಿಹರ ಪಂಚಮಸಾಲಿ ಪೀಠದಿಂದ ಊಟ, ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಯಾವುದೇ ತೊಂದರೆ, ಲೋಪವಾಗದಂತೆ ನಾವು ಎಲ್ಲಾ ಅಗತ್ಯ ಸಿದ್ಧತೆಗಳ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು. ರಾಜ್ಯ, ಪರ ರಾಜ್ಯ, ವಿದೇಶದಿಂದಲೂ ಸಮಾಜ ಬಾಂಧವರು ಬರಲಿದ್ದು, ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಸಿದ್ಧತೆ ಮಾಡಿದೆ. ವೀರಶೈವ ಲಿಂಗಾಯತದ ಎಲ್ಲಾ ಒಳ ಪಂಗಡಗಳ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಶಿಫಾರಸ್ಸು ಮಾಡಬೇಕೆಂಬ ಬೇಡಿಕೆ ನಮ್ಮದು ಎಂದು ಹೇಳಿದರು.ಮಹಾಧಿವೇಶನ ಅಧ್ಯಕ್ಷತೆ: ಶಾಮನೂರುಗೆ ಅಧಿಕೃತ ಆಹ್ವಾನ

ದಾವಣಗೆರೆಯಲ್ಲಿ ಡಿ.23 ಮತ್ತು 24ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿರುವ 24ನೇ ಮಹಾ ಅಧಿವೇಶನದ ಅಧ್ಯಕ್ಷತೆ ವಹಿಸಲು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪರಿಗೆ ಸೋಮವಾರ ಅಧಿಕೃತವಾಗಿ ಜಿಲ್ಲಾ ಘಟಕದಿಂದ ಆಹ್ವಾನಿಸಲಾಯಿತು.

ನಗರದ ಶಿವಪಾರ್ವತಿಯಲ್ಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಿಗೆ ಜಿಲ್ಲಾ ಘಟಕದಿಂದ ಮಹಾಧಿವೇಶನದ ಅಧ್ಯಕ್ಷತೆ ವಹಿಸುವಂತೆ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ ನೇತೃತ್ವದಲ್ಲಿ ಪದಾಧಿಕಾರಿಗಳು ಮನವಿ ಮಾಡಿದರು. ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಎಸ್‌.ಗಣೇಶ್, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಬಿ.ಸಿ.ಉಮಾಪತಿ, ಅಭಾವೀಮದ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಹಿರಿಯ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ, ಹಿರಿಯ ವಕೀಲ ಪ್ರಕಾಶ ಪಾಟೀಲ್, ಬಾಲಚಂದ್ರ, ಬಿ.ಜಿ.ರಮೇಶ, ಶಂಭು ಉರೇಕೊಂಡಿ, ಸಂದೀಪ್ ಅಣಬೇರು, ಅವಿನಾಶ್, ಅನಿಲ್, ನವೀನ ಕೋಡಿಹಳ್ಳಿ, ಶುಭಾ ಐನಹಳ್ಳಿ, ಸೌಮ್ಯ ಸತೀಶ ಧಾರವಾಡ, ರಶ್ಮಿ ಕುಂಕೋದ್‌, ನಿರ್ಮಲ ಸುಭಾಷ್, ಶಶಿಕಲಾ ಶಿವಲಿಂಗಪ್ಪ, ಕವಿತಾ ಚಂದ್ರಶೇಖರ, ಸುಷ್ಮಾ ಪಾಟೀಲ್, ಅನುಷಾ ಇತರರಿದ್ದರು.

.............

Share this article