- ಡಾ.ಆರತಿ ಕೃಷ್ಣ ಹೇಳಿಕೆ । ಒಕ್ಕಲಿಗರ ಸಂಘದಿಂದ ಸನ್ಮಾನ ಕನ್ನಡಪ್ರಭ ವಾರ್ತೆ ಕೊಪ್ಪ
ಸುಮಾರು ೧೮ ಕೋಟಿಯಷ್ಟು ಭಾರತೀಯ ಜನರು ವಿದೇಶದಲ್ಲಿದ್ದು, ನಮ್ಮ ಸಮಿತಿಯಿಂದ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಸಚಿವಾಲಯ ಆರಂಭಗೊಂಡಲ್ಲಿ ಹೊರ ದೇಶದ ಕನ್ನಡಿಗರಿಗೆ ಭದ್ರತೆ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಕೇರಳ ಸಚಿವಾಲಯ ತೆರೆದಿದ್ದು, ತಮಿಳುನಾಡು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ತಿಳಿಸಿದರು.ಮಂಗಳವಾರ ಕೊಪ್ಪ ಬಾಳಗಡಿ ಒಕ್ಕಲಿಗರ ಸಮುದಾಯ ಭವನದಲ್ಲಿ ಒಕ್ಕಲಿಗರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾಹಿತಿ ಹಂಚಿಕೊಂಡ ಅವರು, ೨೦೧೬ರಲ್ಲಿ ಸಿದ್ದರಾಯಯ್ಯ ಅವರ ಸರ್ಕಾರದಲ್ಲಿ ಸಚಿವಾಲಯ ಆರಂಭಿಸುವ ಪ್ರಕ್ರಿಯೆ ಮತ್ತು ವಿದೇಶದಲ್ಲಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರದಿಂದ ಎನ್.ಆರ್.ಕೆ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಚುನಾವಣೆ ಕಾರಣ ಹಾಗೇ ಸ್ಥಗಿತವಾಗಿತ್ತು. ಈಗ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಈ ಪ್ರಕ್ರಿಯೆಗೆ ವೇಗ ದೊರಕಿದೆ ಎಂದರು.ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ವಿದೇಶದಲ್ಲಿ ಕನ್ನಡಿಗರಿಗೆ ಸಮಸ್ಯೆಯಾದಲ್ಲಿ ಪರಿಹಾರ ಕಲ್ಪಿಸುವ ಯೋಜನೆ ರೂಪು ಗೊಂಡಿದೆ. ಸಮಿತಿಯಿಂದ ಹೊರ ದೇಶದ ಕನ್ನಡ ಸಂಘಟನೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ದೊರೆಯಲಿದೆ. ಸಮಸ್ಯೆ ಯಲ್ಲಿರುವ ಕನ್ನಡಿಗರನ್ನು ವಿದೇಶದಿಂದ ಯಾವುದೇ ತೊಂದರೆ ಇಲ್ಲದೆ ಕರೆತರುವ ಪ್ರಯತ್ನ ಮಾಡಲಾಗಿದೆ. ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ಕನ್ನಡಿಗರು ಯಾವುದೇ ರೀತಿಯಲ್ಲಿ ಮೋಸ ಹೋಗಬಾರದು. ಏಜೆಂಟರನ್ನು ನಂಬಿ ಹಣ ನೀಡಬಾರದು, ವಿದೇಶದ ಉದ್ಯೋಗದ ಬಗ್ಗೆ ಮೊದಲೇ ತಿಳುವಳಿಕೆ ಹೊಂದಬೇಕು. ಅನುಮಾನ ಇದ್ದಲ್ಲಿ ನಮ್ಮ ಕಚೇರಿ ಸಂಪರ್ಕಿಸಿ ಎಂಬ ಸಲಹೆ ನೀಡಿದರು.ಕೊಪ್ಪ ಒಕ್ಕಲಿಗ ಸಂಘದ ಆಧ್ಯಕ್ಷ ಸಹದೇವ್ ಬಾಲಕೃಷ್ಣ, ಉಪಾಧ್ಯಕ್ಷ ಎಚ್.ಜಿ.ವೆಂಕಟೇಶ್, ಶಿವಪ್ಪ ಗೌಡ, ಕಾರ್ಯದರ್ಶಿ ವಿ.ಡಿ.ನಾಗರಾಜ್, ಖಜಾಂಚಿ ಕೌರಿಪ್ರಕಾಶ್, ಎನ್.ಕೆ.ಸತೀಶ್, ಎಚ್.ಕೆ ಸುರೇಶ್, ಓಣಿತೋಟ ರತ್ನಾಕರ್, ವಾಣಿ ಸತೀಶ್‌ಹೆಗ್ಡೆ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಇದ್ದರು.