ಕನ್ನಡಪ್ರಭ ವಾರ್ತೆ ಉಡುಪಿಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕುವುದನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ರಾಂಚನ್ ನೇತೃತ್ವದಲ್ಲಿ ಸಾಕಷ್ಟು ಮಂದಿ ಯುವ ಕಾರ್ಯಕರ್ತರು ಮುಂಜಾನೆಯೇ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು. ನಂತರ ಕಚೇರಿಯ ಮುಂಭಾಗದಲ್ಲಿ ಕೋಟೆಯಾಕಾರದಲ್ಲಿ ಕುರ್ಚಿಗಳನ್ನು ಹಾಕಿ ಕುಳಿತುಕೊಂಡು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಬಳಿ ಬಂದರೆ ಸಂಘರ್ಷವಾಗುವ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಆದರೆ ಪೊಲೀಸರು ಅನತಿ ದೂರದಲ್ಲಿಯೇ ಬಿಜೆಪಿ ಕಾರ್ಯಕರ್ತರನ್ನು ತಡೆದು ಬಂಧಿಸಿ ಕರೆದೊಯ್ದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಕಚೇರಿ ನಮಗೆ ದೇವಸ್ಥಾನ, ಪ್ರಾರ್ಥನಾ ಮಂದಿರ ಇದ್ದಂತೆ. ಅದಕ್ಕೆ ಬಿಜೆಪಿ ಕಾರ್ಯಕರ್ತರು ಬಂದು ನುಗ್ಗುತ್ತಾರೆ ಎಂದರೆ ನಾವೇನೂ ಕೈಕಟ್ಟಿ ಕೂರುತ್ತೇವೆಯೇ? ನಾವು ಕೂಡ ದೇಶದ ಸ್ವಾತಂತ್ರ್ಯ ಹೋರಾಟ ನಡೆಸಿದ ಪೀಳಿಗೆಯವರು ಎಂದು ಹೇಳಿದರು.ನಮಗೆ ಮೊದಲೇ ಗೊತ್ತಿತ್ತು, ಬಿಜೆಪಿ ಕಾರ್ಯಕರ್ತರು ಬರ್ತಾರೆ ಪ್ರತಿಭಟನೆಯ ನಾಟಕ ಮಾಡ್ತಾರೆ, ನಾವೇನೂ ಮಾಡುವುದಿಲ್ಲ ಹಿಂದಕ್ಕೆ ಹೋಗುತ್ತೇವೆ ಎಂದು ಪೊಲೀಸರಿಗೆ ಮೊದಲೇ ಹೇಳಿರ್ತಾರೆ, ಹಾಗೇ ಮಾಡಿದ್ದಾರೆ ಎಂದವರು ಲೇವಡಿ ಮಾಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟಕ್ಕೆ ಮುಖಭಂಗ ಆಗಿದೆ. ನಮಗೆ ಅಷ್ಟು ಮತ ಬರುತ್ತವೆ, ಇಷ್ಟು ಶಾಸಕರು ನಮ್ಮ ಜೊತೆಗಿದ್ದಾರೆ ಎಂದೆಲ್ಲ ಹೇಳುತ್ತಿದ್ದರು. ಈಗ ಅವರದ್ದೇ ಪಕ್ಷದ ಒಬ್ಬ ಶಾಸಕ ಅವರ ಅಭ್ಯರ್ಥಿಗೇ ಮತ ಹಾಕಿಲ್ಲ, ಇನ್ನೊಬ್ಬರು ಮತದಾನಕ್ಕೇ ಬರಲಿಲ್ಲ. ಈ ಹತಾಶೆಯಿಂದ ಅವರು ಜನರ ಮುಂದೆ ಮುಖ ಉಳಿಸಿಕೊಳ್ಳುವುದಕ್ಕೆ ಈ ಮುತ್ತಿಗೆಯ ನಾಟಕ ಮಾಡಿದ್ದಾರೆ ಎಂದವರು ಆರೋಪಿಸಿದರು.ರಾಜ್ಯಸಭಾ ಚುನಾವಣೆಯಲ್ಲಿ 5ನೇ ಅಭ್ಯರ್ಥಿ ಹಾಕುವ ಅವಶ್ಯಕತೆ ಇರಲಿಲ್ಲಿ. ಆದರೆ ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು, ತೆಲಂಗಾಣ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರಗಳನ್ನು ಬೀಳಿಸುತ್ತೇವೆ ಎಂದಿದ್ದರು. ಅದರ ಅಂಗವಾಗಿ 5ನೇ ಅಭ್ಯರ್ಥಿಯನ್ನು ಹಾಕಿ ಕಾಂಗ್ರೆಸ್ ಸರ್ಕಾರವನ್ನು ಸೋಲಿಸುವ ಪ್ರಯತ್ನ ಮಾಡಿದ್ದರು. ಆದರೇ ಅದು ವಿಫಲವಾಗಿದೆ ಎಂದು ಸೊರಕೆ ತಿರುಗೇಟು ನೀಡಿದರು.