ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವ ಸಂವಿಧಾನ ಬರೆದಿದ್ದು, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಉನ್ನತ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಚಾಮರಾಜನಗರ ಹಾಲು ಒಕ್ಕೂಟದ ಅಧ್ಯಕ್ಷ ವೈ.ಸಿ.ನಾಗೇಂದ್ರ ಅಭಿಪ್ರಾಯಪಟ್ಟರು. ತಾಲೂಕಿನ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಹಿತಾಶಕ್ತಿ ಹೋರಾಟ ವೇದಿಕೆ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಅಂಬೇಡ್ಕರ್ ಅವರು ಭಾರತದ ಅಭಿವೃದ್ಧಿಗೆ ಪೂರಕವಾದ ಸುಭದ್ರ ಸಂವಿಧಾನ ರಚನೆ ಮಾಡಿ, ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲೇ ಸಂವಿಧಾನ ಅಧ್ಯಯನ ಮಾಡಬೇಕು, ನಾವು ಇಂದು ಉನ್ನತಮಟ್ಟದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ ಎಂದರು.ಸಾಹಿತಿ ಕೃಷ್ಣಕುಮಾರ್ ಮಾತನಾಡಿ, ಅಂಬೇಡ್ಕರ್ ಪ್ರಪಂಚದ ೬೦ ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಸಂವಿಧಾನ ಓದಿಕೊಂಡು ನಮ್ಮ ದೇಶಕ್ಕೆ ಹೊಂದುವ ಸಂವಿಧಾನ ರಚಿಸಿದ್ದಾರೆ. ಇದರಿಂದ ಸಮಾಜದ ಎಲ್ಲ ವರ್ಗದವರು ಸಂವಿಧಾನಾತ್ಮಕ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು. ಕುದೇರು ಪೊಲೀಸ್ ಠಾಣೆ ಉಪನಿರೀಕ್ಷಕಿ ಎಸ್.ಕುಮುದಾ ಮಾತನಾಡಿ, ಭಾರತದ ಅಭಿವೃದ್ಧಿಗೆ ಪೂರಕವಾದ ಅಮೂಲ್ಯ ಸಂವಿಧಾನವನ್ನು ಬರೆದು ೧೯೪೯ ನ.೨೬ ರಂದು ಅಂಬೇಡ್ಕರ್ ದೇಶಕ್ಕೆ ಸಮರ್ಪಣೆ ಮಾಡಿದರು. ೧೯೫೦ ಜ.೨೬ ರಂದು ಅದನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು. ಮಾನವೀಯ ಮೌಲ್ಯಗಳ ಆಗರವಾಗಿರುವ ಸಂವಿಧಾನದ ಮೂಲ ಆಶಯಗಳನ್ನು ನಾವು ಪಾಲನೆ ಮಾಡುವ ಅಗತ್ಯವಿದೆ ಎಂದರು.ಜನಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಸಿಕ್ರಮ್ ಸಂಸ್ಥಯ ಜಿಲ್ಲಾಧ್ಯಕ್ಷ ಕೆ.ಸಿ ರೇವಣ್ಣ ಪ್ರಾಂಶುಪಾಲ ಥಿಯೋಡರ್ ಲೂಥಸ್, ಚಾಮರಾಜನಗರ ಸಿದ್ದಾರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿ.ರಂಗಸ್ವಾಮಿ, ಉಮ್ಮತ್ತೂರು ಸೋಮಣ, ಉಪಾನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.