ನರಗುಂದ: ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲಾ ಜಾತಿ ಮತ್ತು ಧರ್ಮದವರ ಬದುಕಿನ ರಕ್ಷಣೆಗಾಗಿ ಇರುವ ಪ್ರಮುಖ ಗ್ರಂಥ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜಕ ಎಂ.ಬಿ. ದಳಪತಿ ಹೇಳಿದರು. ಅವರು ಪಟ್ಟಣದ ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕವಿವಿ ಧಾರವಾಡ ಹಾಗೂ ಎನ್ ಎಸ್ ಎಸ್ ಕೋಶ ಮತ್ತು ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ, ಎನ್ಎಸ್ಎಸ್ ಘಟಕದ ಅಡಿಯಲ್ಲಿ ಸಂವಿಧಾನ ಕುರಿತು ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ. ಸಂವಿಧಾನದಲ್ಲಿರುವ ಹಕ್ಕು ಎಲ್ಲರಿಗೂ ಶಕ್ತಿ ನೀಡುತ್ತಿದ್ದು ಸರ್ವರಿಗೂ ಸಮ ಬಾಳ್ವೆ ಸಮಪಾಲು ಎಂಬಂತೆ ಸಮಾಜದಲ್ಲಿ ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸಮಾನರು ಎಂಬ ಶಾಂತಿ ತೋಟ ಬೆಳೆಸಬೇಕು ಎಂದು ಅವರು ಹೇಳಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಮಾತನಾಡಿ, ದೇಶದ ಸ್ವಾತಂತ್ರ್ಯ ನಂತರ ಅವಶ್ಯವಾಗಿರುವ ಎಲ್ಲಾ ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡ ಸಂವಿಧಾನ ಹೃದಯ ಮತ್ತು ತಾಯಿ ಇದ್ದಂತೆ ಎಂದರು. ಕಾಲೇಜಿನ ಪ್ರಾಚಾರ್ಯ ಆರ್ .ಬಿ. ಪಾಟೀಲ ಮಾತನಾಡಿ, ಸಂವಿಧಾನವು ಶಿಕ್ಷಣ ಉದ್ಯೋಗ ಸಮಾನತೆ ಬದುಕು ಸಾಗಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರೂ ಒಂದಾಗಿ ಸಂವಿಧಾನದ ಆಶಯವನ್ನು ಈಡೇರಿಸಿ ಘನತೆಯಿಂದ ಬದುಕು ಸಾಗಿಸಬೇಕು ಎಂದು ಹೇಳಿದರು.