ಶಿವಕುಮಾರ ಕುಷ್ಟಗಿ
ಗದಗ:ಗದಗ-ಬೆಟಗೇರಿ ಅವಳಿ ನಗರಕ್ಕೆ ಪ್ರತಿ ಬೇಸಿಗೆಯಲ್ಲಿ ಎದುರಾಗುವ ಕುಡಿವ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ 2016-17ರಲ್ಲಿಯೇ ಗದಗ ತಾಲೂಕಿನ ಪಾಪನಾಶಿ ಗ್ರಾಮ ವ್ಯಾಪ್ತಿಯ ಜಮೀನುಗಳಲ್ಲಿ ನೀರು ಸಂಗ್ರಹಣೆಗೆ ಕೆರೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ, ಆಡಳಿತಾತ್ಮಕ ಒಪ್ಪಿಗೆ ನೀಡಿ ಅಗತ್ಯ ಹಣಕಾಸು ಬಿಡುಗಡೆಯಾಗಿದ್ದರೂ ಇದುವರೆಗೂ ಕೆರೆ ನಿರ್ಮಾಣ ಕಾಮಗಾರಿಯೇ ಪ್ರಾರಂಭವಾಗಿಲ್ಲ.ಏನಿದು ಯೋಜನೆ:ಅವಳಿ ನಗರಕ್ಕೆ ಪ್ರತಿ ವರ್ಷ ಫೆಬ್ರವರಿಯಿಂದ ಮೇ ತಿಂಗಳಾಂತ್ಯದವರೆಗೆ (ಬೇಸಿಗೆ ಅವಧಿಯಲ್ಲಿ) ಕುಡಿವ ನೀರಿಗೆ ಹಾಹಾಕಾರ ಉಂಟಾಗುತ್ತಿದ್ದು, ತೀವ್ರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ, ಮಳೆಗಾಲದಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಅಪಾರ ನೀರಿನ ಹರಿವು ಇದ್ದಾಗಲೇ ನೀರು ಸಂಗ್ರಹಿಸಿಟ್ಟುಕೊಳ್ಳಲು ಪಾಪನಾಶಿ ಬಳಿ ಕೆರೆ ನಿರ್ಮಾಣ ಮಾಡಿ, ಅಲ್ಲಿಂದ ಅವಳಿ ನಗರಕ್ಕೆ ನೀರು ಪೂರೈಕೆ ಮಾಡಲು ಸರ್ಕಾರ 2017ರ ಜೂನ್ 2ರಂದು ಆದೇಶ ಹೊರಡಿಸಲಾಗಿದೆ. ಆದರೆ ಇದುವರೆಗೂ ಕೆರೆ ನಿರ್ಮಾಣ ಕಾಮಗಾರಿ ದಾಖಲೆಗಳಲ್ಲಿಯೇ ಉಳಿದು ಹೋಗಿದೆ.
59.9 ಎಕರೆಯಲ್ಲಿ ಕೆರೆ ನಿರ್ಮಾಣ: ಗದಗ ತಾಲೂಕಿನ ಪಾಪನಾಶಿ ಗ್ರಾಮದ ಬಳಿಯಿದ್ದ 11.9 ಎಕರೆ ಸರ್ಕಾರಿ ಜಮೀನು ಹಾಗೂ ಇನ್ನುಳಿದ 48 ಎಕರೆ ಖಾಸಗಿ ಜಮೀನುಗಳಲ್ಲಿ (ರೈತರ) ಕೆರೆ ನಿರ್ಮಾಣ ಮಾಡುವಂತೆ ಶಾಸಕರಾದ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ, ಜಿಲ್ಲಾಧಿಕಾರಿಗಳು ಸಭೆ ನಡೆಸಿ ಪಾಪನಾಶಿ ಗ್ರಾಮದ ಸರ್ವೇ ನಂಬರ್ 723 ರ ವಿವಿಧ ಹಿಸ್ಸಾಗಳ ಅಡಿಯಲ್ಲಿ 48 ಎಕರೆ ರೈತರ ಭೂಮಿಯನ್ನು ಬಳಕೆ ಮಾಡಿಕೊಂಡು ಕೆರೆ ನಿರ್ಮಿಸಬೇಕು. ಅವರಿಗೆ ಸರ್ಕಾರದ ನಿಯಮಗಳ ಪ್ರಕಾರ ಪರಿಹಾರ ನೀಡುವಂತೆ ಸಭೆಯಲ್ಲಿ ಮಾಡಿದ್ದ ನಿರ್ಧಾರ ಇನ್ನೂ ಅನುಷ್ಠಾನಗೊಂಡಿಲ್ಲ. ಏನೂ ಪ್ರಗತಿ ಆಗಿಲ್ಲ: ಕೆರೆ ನಿರ್ಮಾಣಕ್ಕಾಗಿ ಗುರುತಿಸಿರುವ ರೈತರ ಜಮೀನಿಗಿಂತ ಮೊದಲೇ ಸರ್ಕಾರ 11 ಎಕರೆ ಜಮೀನಿದ್ದು ಅಲ್ಲಿ ಮಾತ್ರ ಕೆರೆ ನಿರ್ಮಾಣ ಕಾಮಗಾರಿಯನ್ನು ಅರೆಬರೆಯಾಗಿ ಮಾಡಿದ್ದಾರೆ. ಇದರಿಂದಾಗಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಕೂಡಾ ಸಾಧ್ಯವಾಗದಂತಾ ಸ್ಥಿತಿ ನಿರ್ಮಾಣವಾಗಿದೆ. ಅತ್ತ, ಪರಿಹಾರವೂ ಬರುತ್ತಿಲ್ಲ, ಇತ್ತ ಜಮೀನುಗಳಿಗೆ ತೆರಳಲು ಸಾಧ್ಯವಾಗದ ತ್ರಿಶಂಕು ಸ್ಥಿತಿಯಲ್ಲಿ ರೈತರು ಕಳೆದ 9 ವರ್ಷಗಳಿಂದ ಕಾಯುತ್ತಿದ್ದಾರೆ.ಸದ್ಯ ಯೋಜನೆ ಪ್ರಾರಂಭವಾಗಿ ಹಲವಾರು ವರ್ಷಗಳೇ ಕಳೆದಿದ್ದು, ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಒಂದು ರುಪಾಯಿ ಪರಿಹಾರ ಬಂದಿಲ್ಲ. ಪರಿಹಾರಕ್ಕಾಗಿ ನಿತ್ಯವೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ರೈತರಿಗೆ ತಪ್ಪಿಲ್ಲ. ಈ ಹಿಂದೆ ಕೆರೆ ನಿರ್ಮಾಣದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಅದೇಕೋ ಈಗ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿದೆ.
ಕೆರೆ ನಿರ್ಮಾಣಕ್ಕಾಗಿ ನಮ್ಮ ಭೂಮಿ ತೆಗೆದುಕೊಳ್ಳುವುದಾಗಿ ಹೇಳಿ 8 ವರ್ಷ ಕಳೆದಿದೆ. ಇದುವರೆಗೂ ಪರಿಹಾರ ಕೊಟ್ಟಿಲ್ಲ. ನಮ್ಮ ಹೊಲಗಳಿಗೆ ಹೋಗಲು ದಾರಿ ಇಲ್ಲದಂತೆ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ, ಗಮನ ನೀಡಬೇಕು. 2016-17ರ ಜಮೀನುಗಳ ದರವೇ ಬೇರೆಯಾಗಿತ್ತು. ಈಗಿನ ಜಮೀನಿನ ದರಗಳೇ ಬೇರೆಯಾಗಿದೆ ಅದಕ್ಕಾಗಿ ಈಗಿನ ಮಾರುಕಟ್ಟೆ ದರದ ಆಧಾರದಲ್ಲಿ ನಮಗೆ ಪರಿಹಾರವನ್ನು ನೀಡಬೇಕು ಎಂದು ರೈತರು ಹೇಳುತ್ತಾರೆ.ಜಮೀನು ಕಳೆದುಕೊಳ್ಳುವ ರೈತರಿಗೆ ಪರಿಹಾರದ ಹಣ 6.65 ಕೋಟಿ ಬಿಡುಗಡೆ ಕುರಿತು ಪೌರಾಡಳಿತ ನಿರ್ದೇಶನಾಲಯ 29-5-2025ರಂದು ಪತ್ರ ಬರೆದು ಸೂಚಿಸಿದೆ. ಶೀಘ್ರವೇ ರೈತರಿಗೆ ಪರಿಹಾರ ತಲುಪಲಿದೆ ಎಂದು ನಗರಸಭೆ ಅಧಿಕಾರಿ ಹೇಳುತ್ತಾರೆ.